ಬೆಂಗಳೂರು: ರೆಸ್ಟೋರೆಂಟ್ ನಲ್ಲಿ ಮಹಿಳಾ ಸಿಬ್ಬಂದಿ ಜೊತೆ ಅನುಚಿತವಾಗಿ ವರ್ತಿಸಿದ ಆರೋಪದ ಮೇರೆಗೆ ರೀಲ್ಸ್ ಸ್ಟಾರ್ ಮಂಜುನಾಥ್ ಅಲಿಯಾಸ್ ಅಮುಕುಡುಮುಕು ಮಂಜನ ವಿರುದ್ಧ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇತ್ತೀಚೆಗೆ ನಾಗರಬಾವಿ ಸಮೀಪ ರೆಸ್ಟೋರೆಂಟ್ ಗೆ ರಾತ್ರಿ ಊಟಕ್ಕೆ ತೆರಳಿದ್ದಾಗ ಮಹಿಳಾ ಸಿಬ್ಬಂದಿ ಜೊತೆಗೆ ಅನುಚಿತವಾಗಿ ವರ್ತಿಸಿದ ಆರೋಪ ಕೇಳಿ ಬಂದಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಆರೋಪಿಗೆ ನೋಟಿಸ್ ನೀಡಿದ್ದಾರೆ.
ರೆಸ್ಟೋರೆಂಟ್ ನಲ್ಲಿ ಊಟ ಮುಗಿಸಿ ತೆರಳುವಾಗ ಪಾನಮತ್ತನಾಗಿದ್ದ ಆತ ಮಹಿಳಾ ಸಿಬ್ಬಂದಿ ಜೊತೆಗೆ ಅನುಚಿತ ವರ್ತನೆ ತೋರಿದ್ದಾನೆ ಎಂದು ದೂರು ನೀಡಲಾಗಿದೆ. ಇನ್ಸ್ಟಾಗ್ರಾಮ್ ನಲ್ಲಿ ಅಮುಕುಡುಮುಕು ಹೆಸರಲ್ಲಿ ಖಾತೆ ತೆರೆದು ಹಾಸ್ಯದ ರೀಲ್ಸ್ ಗಳ ಮೂಲಕ ಮಂಜುನಾಥ್ ವೈರಲ್ ಸ್ಟಾರ್ ಆಗಿದ್ದಾನೆ ಎನ್ನಲಾಗಿದೆ.