ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕೆಇಇಎ ಈಗಾಗಲೇ ಮೊದಲ ಸುತ್ತಿನ ಸೀಟು ಹಂಚಿಕೆ ಪಟ್ಟಿ ಬಿಡುಗಡೆ ಮಾಡಿದೆ. 2026 -27ನೇ ಸಾಲಿನ ಸಿಇಟಿ ಕೌನ್ಸೆಲಿಂಗ್ ಪ್ರಕ್ರಿಯೆ ಆರಂಭವಾಗಿದೆ.
ಖಾಸಗಿ, ಡೀಮ್ಡ್ ವಿಶ್ವವಿದ್ಯಾಲಯಗಳಲ್ಲಿನ ಎಂಜಿನಿಯರಿಂಗ್ ಮತ್ತು ಆರ್ಕಿಟೆಕ್ಚರ್ ಕೋರ್ಸ್ ಗಳ ಸರ್ಕಾರಿ ಕೋಟಾದ ಸೀಟುಗಳಿಗೆ ಶುಲ್ಕ ನಿಗದಿಪಡಿಸಲಾಗಿದ್ದು, ಹೆಚ್ಚುವರಿ ಶುಲ್ಕಕ್ಕೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಲಾಗಿದೆ. ವಿವಿ ಅಧಿನಿಯಮದ ಪ್ರಕಾರ ಸರ್ಕಾರಿ ಕೋಟಾದ ಸೀಟುಗಳಿಗೆ 88,000 ರೂ. ಬೋಧನಾ ಶುಲ್ಕ ನಿಗದಿಪಡಿಸಲಾಗಿದೆ. ಎಲ್ಲಾ ಖಾಸಗಿ, ಡೀಮ್ಡ್ ವಿವಿಗಳು ನಿಗದಿಪಡಿಸಿದ ಬೋಧನಾ ಶುಲ್ಕವನ್ನು ಮಾತ್ರ ಪಡೆಯುವಂತೆ ಸೂಚಿಸುಲಾಗಿದೆ.
ವೃತ್ತಿಪರ ಕೋರ್ಸ್ ಗಳಿಗೆ ಪ್ರವೇಶ ಪಡೆಯುವಾಗ ಬೋಧನಾ ಶುಲ್ಕ, ವಿವಿ ಶುಲ್ಕ, ಸ್ಕಿಲ್ ಲ್ಯಾಬ್ ಶುಲ್ಕಗಳನ್ನು ಪ್ರತಿ ವಿದ್ಯಾರ್ಥಿಯಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪಡೆದುಕೊಳ್ಳಲಿದ್ದು, ಕೌನ್ಸೆಲಿಂಗ್ ಪ್ರಕ್ರಿಯೆ ಪೂರ್ಣವಾದ ಬಳಿಕ ಎರಡು ತಿಂಗಳ ಒಳಗಾಗಿ ಆಯಾ ಖಾಸಗಿ ಮತ್ತು ಡೀಮ್ಡ್ ವಿವಿಗಳಿಗೆ ಶುಲ್ಕ ವರ್ಗಾಯಿಸಲಿದೆ.
ಕೌನ್ಸೆಲಿಂಗ್ ಮೂಲಕ ವೃತ್ತಿಪರ ಕೋರ್ಸ್ ಗಳಿಗೆ ಆಯ್ಕೆಯಾಗುವ ವಿದ್ಯಾರ್ಥಿಗಳು ಯಾವುದೇ ಹೆಚ್ಚುವರಿ ಶುಲ್ಕ ಪಡೆಯಬಾರದು. ಕಾರಣಾಂತರದಿಂದ ವಿದ್ಯಾರ್ಥಿ ಶಿಕ್ಷಣ ಮೊಟಕುಗೊಳಿಸಿದಲ್ಲಿ ಅವರು ಪ್ರವೇಶದ ಸಂದರ್ಭದಲ್ಲಿ ಶಿಕ್ಷಣ ಸಂಸ್ಥೆಗೆ ನೀಡಿದ ಮೂಲ ದಾಖಲಾತಿ ಮತ್ತು ಶುಲ್ಕವನ್ನು ತಕ್ಷಣವೇ ಹಿಂತಿರುಗಿಸಬೇಕು ಎಂದು ಹೇಳಲಾಗಿದೆ.
ಖಾಸಗಿ, ಡೀಮ್ಡ್ ವಿವಿಗಳಲ್ಲಿ ಸರ್ಕಾರ ನಿಗದಿಪಡಿಸಿದ ಶುಲ್ಕಕ್ಕಿಂತ ಹೆಚ್ಚುವರಿ ಬೇಡಿಕೆ ಇಟ್ಟಲ್ಲಿ, ಹಂಚಿಕೆಯಾದ ಸೀಟುಗಳಿಗೆ ಬೇರೆಯವರು ನಕಲಿ ದಾಖಲಿ ಸಲ್ಲಿಸಿರುವುದು ಕಂಡುಬಂದಲ್ಲಿ ದೂರು ನೀಡುವಂತೆ ಪ್ರವೇಶ ಮೇಲ್ವಿಚಾರಣಾ ಸಮಿತಿ ತಿಳಿಸಿದೆ. ಸಮಿತಿಯ ಸಹಾಯವಾಣಿ ಸಂಖ್ಯೆ 080 -23466844, ಇ -ಮೇಲ್ ವಿಳಾಸ [email protected] ಸಂಪರ್ಕಿಸಬಹುದು.