ಭಾರತೀಯ ರೈಲ್ವೆಯಲ್ಲಿ ಉದ್ಯೋಗ ಪಡೆಯುವುದು ಲಕ್ಷಾಂತರ ಯುವಜನರ ಕನಸು. ದೇಶದ ಅತಿದೊಡ್ಡ ಉದ್ಯೋಗದಾತ ಸಂಸ್ಥೆಯಾಗಿರುವ ರೈಲ್ವೆಯಲ್ಲಿ ಟಿಕೆಟ್ ಕಲೆಕ್ಟರ್ (TC) ಹುದ್ದೆಯು ಅತ್ಯಂತ ಜನಪ್ರಿಯ ಹಾಗೂ ಗೌರವಾನ್ವಿತ ಕೆಲಸಗಳಲ್ಲಿ ಒಂದಾಗಿದೆ. ನೀವು ಸಹ ರೈಲ್ವೆ ಇಲಾಖೆಯಲ್ಲಿ ಟಿ.ಸಿ ಆಗಿ ವೃತ್ತಿಜೀವನ ಆರಂಭಿಸಲು ಬಯಸಿದ್ದರೆ, ಅದಕ್ಕೆ ಬೇಕಾದ ಹಂತ ಹಂತದ ಸಮಗ್ರ ಮಾಹಿತಿ ಇಲ್ಲಿದೆ.
ಟಿಕೆಟ್ ಕಲೆಕ್ಟರ್ (TC) ಅವರ ಪ್ರಮುಖ ಜವಾಬ್ದಾರಿಗಳು:
ರೈಲ್ವೆ ಸಾರಿಗೆ ವ್ಯವಸ್ಥೆಯ ಸುಗಮ ನಿರ್ವಹಣೆಯಲ್ಲಿ ಟಿ.ಸಿ ಪಾತ್ರ ಅತ್ಯಂತ ನಿರ್ಣಾಯಕ. ಅವರ ಪ್ರಮುಖ ಕಾರ್ಯಗಳು:
ಟಿಕೆಟ್ ಪರಿಶೀಲನೆ: ರೈಲು ಪ್ರಯಾಣದ ವೇಳೆ ಪ್ರಯಾಣಿಕರು ಸೂಕ್ತ ಹಾಗೂ ಸಿಂಧುವಾದ ಟಿಕೆಟ್ ಹೊಂದಿದ್ದಾರೆಯೇ ಎಂದು ತಪಾಸಣೆ ಮಾಡುವುದು.
ಕೋಚ್ ನಿರ್ವಹಣೆ: ಕಾಯ್ದಿರಿಸಿದ ಹಾಗೂ ಸಾಮಾನ್ಯ ಬೋಗಿಗಳಲ್ಲಿ ಪ್ರಯಾಣಿಕರ ಪಟ್ಟಿಯನ್ನು ಪರಿಶೀಲಿಸುವುದು.
ದಂಡ ವಿಧಿಸುವಿಕೆ: ಟಿಕೆಟ್ ರಹಿತ ಪ್ರಯಾಣಿಕರಿಗೆ ಹಾಗೂ ನಿಯಮ ಉಲ್ಲಂಘಿಸುವವರಿಗೆ ನಿಯಮಾನುಸಾರ ದಂಡ ವಿಧಿಸಿ ರಶೀದಿ ನೀಡುವುದು.
ಪ್ರಯಾಣಿಕರ ನೆರವು: ರೈಲ್ವೆ ಪ್ಲಾಟ್‌ಫಾರ್ಮ್‌ಗಳು ಮತ್ತು ವಿಚಾರಣಾ ಕೇಂದ್ರಗಳಲ್ಲಿ ಪ್ರಯಾಣಿಕರಿಗೆ ಅಗತ್ಯ ಮಾರ್ಗದರ್ಶನ ನೀಡುವುದು.
ಅರ್ಹತೆ ಮತ್ತು ವಯೋಮಿತಿ
ವಿದ್ಯಾರ್ಹತೆ: ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ ದ್ವಿತೀಯ ಪಿಯುಸಿ ತೇರ್ಗಡೆಯಾಗಿರಬೇಕು. ಕೆಲವು ಪ್ರಮೋಷನ್ ಆಧಾರಿತ ಅಥವಾ ತಾಂತ್ರಿಕ ಹುದ್ದೆಗಳಿಗೆ ಪದವಿ ಅಗತ್ಯವಿರುತ್ತದೆ.
ವಯೋಮಿತಿ: ಕನಿಷ್ಠ 18 ವರ್ಷದಿಂದ ಗರಿಷ್ಠ 30 ವರ್ಷಗಳ ಒಳಗಿರಬೇಕು.
ವಯೋಮಿತಿ ಸಡಿಲಿಕೆ: ನಿಯಮಾವಳಿಗಳ ಪ್ರಕಾರ SC/ST ಅಭ್ಯರ್ಥಿಗಳಿಗೆ 5 ವರ್ಷ ಹಾಗೂ OBC ಅಭ್ಯರ್ಥಿಗಳಿಗೆ 3 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ.
ಆಯ್ಕೆ ಪ್ರಕ್ರಿಯೆ :
ರೈಲ್ವೆ ನೇಮಕಾತಿ ಮಂಡಳಿಯು (RRB) ಮೂರು ಮುಖ್ಯ ಹಂತಗಳಲ್ಲಿ ಆಯ್ಕೆ ಪ್ರಕ್ರಿಯೆ ನಡೆಸುತ್ತದೆ:
ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT): ಸಾಮಾನ್ಯ ಜ್ಞಾನ , ಗಣಿತ ಹಾಗೂ ಜನರಲ್ ಇಂಟೆಲಿಜೆನ್ಸ್ ಮತ್ತು ರೀಸನಿಂಗ್ ವಿಷಯಗಳ ಮೇಲೆ ಬಹುಆಯ್ಕೆ ಪ್ರಶ್ನೆಗಳನ್ನು ಒಳಗೊಂಡ ಮೊದಲ ಹಂತದ ಪರೀಕ್ಷೆ.
ದಾಖಲೆಗಳ ಪರಿಶೀಲನೆ : ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಮೆರಿಟ್ ಆಧಾರದ ಮೇಲೆ ಅಭ್ಯರ್ಥಿಗಳ ಮೂಲ ದಾಖಲೆಗಳನ್ನು ಪರಿಶೀಲಿಸಲಾಗುತ್ತದೆ.
ವೈದ್ಯಕೀಯ ಪರೀಕ್ಷೆ : ರೈಲ್ವೆ ಮಾನದಂಡಗಳ ಪ್ರಕಾರ ದೈಹಿಕ ಸಾಮರ್ಥ್ಯವನ್ನು ಪರೀಕ್ಷಿಸಲಾಗುತ್ತದೆ. ಇಲ್ಲಿ ಪ್ರಮುಖವಾಗಿ ದೃಷ್ಟಿ ಸಾಮರ್ಥ್ಯಕ್ಕೆ (Eye-sight) ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.
ಸಂಬಳ ಮತ್ತು ಬಡ್ತಿ ವಿವರ
7ನೇ ವೇತನ ಆಯೋಗದ ಅನ್ವಯ ಟಿಕೆಟ್ ಕಲೆಕ್ಟರ್‌ಗಳಿಗೆ ಮೂಲ ವೇತನದ ಜೊತೆಗೆ ತುಟ್ಟಿ ಭತ್ಯೆ (DA), ಮನೆ ಬಾಡಿಗೆ ಭತ್ಯೆ (HRA) ಹಾಗೂ ಸಾರಿಗೆ ಭತ್ಯೆಗಳು ಸೇರಿ ಆಕರ್ಷಕ ವೇತನ ಸಿಗುತ್ತದೆ.
ಉತ್ತಮ ಕಾರ್ಯಕ್ಷಮತೆ ಹಾಗೂ ಹಿರಿತನದ ಆಧಾರದ ಮೇಲೆ ಈ ಕೆಳಗಿನ ಹುದ್ದೆಗಳಿಗೆ ಬಡ್ತಿ ಪಡೆಯಬಹುದು:
ಸೀನಿಯರ್ ಟಿಕೆಟ್ ಕಲೆಕ್ಟರ್ (Senior TC)
ಹೆಡ್ ಟಿಕೆಟ್ ಕಲೆಕ್ಟರ್ (Head TC)
ಚೀಫ್ ಟಿಕೆಟ್ ಇನ್ಸ್‌ಪೆಕ್ಟರ್ (Chief Ticket Inspector)
ಅರ್ಜಿ ಸಲ್ಲಿಸುವ ವಿಧಾನ:
ರೈಲ್ವೆ ನೇಮಕಾತಿ ಮಂಡಳಿಯು RRB NTPC ಅಧಿಸೂಚನೆ ಹೊರಡಿಸಿದಾಗ ಪ್ರಾದೇಶಿಕ RRB ವೆಬ್‌ಸೈಟ್‌ಗಳು ಅಥವಾ indianrailways.gov.in ಅಧಿಕೃತ ಜಾಲತಾಣದ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.