ಇದೇ ತಿಂಗಳ 26ರಂದು ಬಿಡುಗಡೆಯಾಗಲಿರುವ ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹು ನಿರೀಕ್ಷಿತ ಚಿತ್ರ ಟಾಕ್ಸಿಕ್ ಕುರಿತು ಸದ್ಯ ಎಲ್ಲೆಡೆ ಭರ್ಜರಿ ಚರ್ಚೆಗಳು ನಡೆಯುತ್ತಿವೆ.
ಚಿತ್ರದ ಟ್ರೈಲರ್ ಸಹ ಹೊರಬಿದ್ದಿದ್ದು, ಇದನ್ನು ವೀಕ್ಷಿಸಿದ ಅಭಿಮಾನಿಗಳು ಹಾಗೂ ಸಿನಿ ರಸಿಕರು ಚಿತ್ರದ ಕಥೆ ಏನಿರಬಹುದು ಎಂದು ಊಹಿಸತೊಡಗಿದ್ದಾರೆ. ಇನ್ನು ಟ್ರೈಲರ್ ಬಗ್ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಕೆಲವೊಂದಿಷ್ಟು ಮಂದಿ ಚಿತ್ರದಲ್ಲಿ ಮಹಿಳೆಯರನ್ನು ಅಶ್ಲೀಲವಾಗಿ ತೋರಿಸಲಾಗಿದೆ ಎಂದು ಕಿಡಿಕಾರಿದ್ದಾರೆ.
ಈ ಬಗ್ಗೆ ಕನ್ನಡದ ನಟಿ ರಿಷಿಕಾ ಸಿಂಗ್ ಸಹ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡು ಕಿಡಿಕಾರಿದ್ದು, ‘ಹೆಣ್ಣು ಮಕ್ಕಳಿಗೆ ಅಂದ ಇದ್ರೆ ಚಂದ. ಗಂಡುಮಕ್ಕಳಿಗೆ ಮರ್ಯಾದೆ ಇದ್ರೆ ಚಂದ ಕಂದ. ಇದೇನ್ ಪ್ಯಾಂಟ್ ಬಿಚ್ಕೊಂಡ್ ಆಗ್ಬಿಟ್ಟಿದ್ದೀಯ ನೀನ್ ಮಂಗ. ಮನೆಯಲ್ಲಿ ಹೆಂಡತಿ ಇದ್ದಾಳೆ ಇದೇನ್ ಹಿರೋಯಿನ್‌ಗಳ ಜತೆ ನಿನ್ನ ಚಕ್ಕಂದ ಕಂದ? ನಮಗೆ ಇಷ್ಟ ಆಗಲಿಲ್ಲ ನಿನ್ನ ಹೊಸ ದಂಧಾ. ನಿನಗೂ ಹೆಣ್ಣುಮಗಳಿದ್ದಾಳೆ, ಡೈಲಾಗ್ ಹೊಡೆಯೋಕೆ ಬಂದಾ? ಹೆಣ್ಣುಮಕ್ಕಳಿಗೆ ಮರ್ಯಾದೆ ಇರಲಿ, ಇಲ್ಲ ಅಂದ್ರೆ ಜಾಗ ಖಾಲಿ ಮಾಡಿಸ್ಸಿಡ್ತೀವಿ ಕರ್ನಾಟಕದಿಂದ. ಐ ಯಾಮ್ ಟಾಕ್ಸಿಕ್’ ಎಂದು ರೀಲ್ ಮಾಡಿ ಹಂಚಿಕೊಂಡಿದ್ದರು.
ಹೀಗೆ ರಿಷಿಕಾ ಸಿಂಗ್ ಹಂಚಿಕೊಂಡಿದ್ದ ಈ ವಿಡಿಯೊ ಎಲ್ಲೆಡೆ ವೈರಲ್ ಆಗಿದ್ದು, ಅವರ ಖಾತೆಗಿಂತ ಇತರೆ ಖಾತೆಗಳಲ್ಲಿ ಹಂಚಿಕೊಂಡ ವಿಡಿಯೊಗೆ ಹೆಚ್ಚು ವೀಕ್ಷಣೆಗಳು ಹರಿದುಬಂದಿವೆ. ಹೀಗೆ ತಮ್ಮ ವಿಡಿಯೊ ಇತರೆ ಸುದ್ದಿ ವಾಹಿನಿ ಹಾಗೂ ಖಾತೆಗಳಲ್ಲಿ ಅಪ್‌ಲೋಡ್ ಆಗಿರುವುದನ್ನು ಕಂಡ ರಿಷಿಕಾ ಸಿಂಗ್ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ವಿಡಿಯೊ ಹಂಚಿಕೊಂಡಿರುವ ಮಾಧ್ಯಮಗಳಿಗೆ ಎಚ್ಚರಿಕೆ ನೀಡಿದ್ದಾರೆ.
ವಿಡಿಯೊ ಕುರಿತು ಸುದ್ದಿ ಮಾಡುವುದನ್ನು ಗೌರವಿಸುತ್ತೇನೆ ಎಂದಿರುವ ರಿಷಿಕಾ ಸಿಂಗ್ ತಮ್ಮ ವಿಡಿಯೊವನ್ನು ಸಂಪೂರ್ಣವಾಗಿ ತಮ್ಮ ಅನುಮತಿಯಿಲ್ಲದೇ ಪ್ರಕಟಿಸಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಇನ್ನು ಒಂದುವೇಳೆ ವಿಡಿಯೊವನ್ನು ತೆಗೆದುಹಾಕದಿದ್ದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆಯನ್ನೂ ಸಹ ನೀಡಿದ್ದಾರೆ.