ಬಾಲಿವುಡ್ ನಟಿ ತಾಪ್ಸಿ ಪನ್ನು ಅವರ ಸರಳತೆ ಮತ್ತು ವಿನಮ್ರತೆಗೆ ಮೇಕಪ್ ಕಲಾವಿದೆ ಸುರಭಿ ವಿಜ್ ಮನಸೋತಿದ್ದಾರೆ. ಇತ್ತೀಚೆಗೆ ನಟಿ ತಾಪ್ಸಿ ಅವರಿಗೆ ಮೇಕಪ್ ಮಾಡುವ ಅವಕಾಶ ಪಡೆದ ಸುರಭಿ, ಆ ಅದ್ಭುತ ಅನುಭವವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ತಾಪ್ಸಿ ಅವರೊಂದಿಗೆ ಕೆಲಸ ಮಾಡಿದ್ದು ತಮ್ಮ ವೃತ್ತಿಜೀವನದ ಅತ್ಯಂತ ವಿಶೇಷ ಕ್ಷಣಗಳಲ್ಲಿ ಒಂದು ಎಂದು ಬಣ್ಣಿಸಿರುವ ಸುರಭಿ, ತಾಪ್ಸಿ ಮೇಕಪ್ ಚೇರ್ನಲ್ಲಿ ಕುಳಿತ ತಕ್ಷಣದಿಂದಲೇ ಅತ್ಯಂತ ಆತ್ಮೀಯವಾಗಿ ಮಾತನಾಡಲು ಪ್ರಾರಂಭಿಸಿದರು ಎಂದಿದ್ದಾರೆ. ತಾಪ್ಸಿ ತುಂಬಾ ಸರಳ, ಕೂಲ್ ಹಾಗೂ ಎಲ್ಲರೊಂದಿಗೆ ಸುಲಭವಾಗಿ ಬೆರೆಯುವ ವ್ಯಕ್ತಿ. ಅವರು ತಮ್ಮದೇ ಆದ ಶೈಲಿಯ ಅತ್ಯಂತ ಸಹಜ ಹಾಗೂ ಸಿಂಪಲ್ ಲುಕ್ ಬಯಸಿದ್ದರು. ಮೇಕಪ್ ಪೂರ್ಣಗೊಂಡ ನಂತರ ಅದನ್ನು ನೋಡಿ ಅವರು ವ್ಯಕ್ತಪಡಿಸಿದ ಸಂತೋಷ ತಮ್ಮ ದಿನವನ್ನು ಮತ್ತಷ್ಟು ವಿಶೇಷವಾಗಿಸಿತು ಎಂದು ಸುರಭಿ ಬರೆದುಕೊಂಡಿದ್ದಾರೆ.
ಬಾಲಿವುಡ್ ನಟಿಯೊಬ್ಬರಿಗೆ ಮೇಕಪ್ ಮಾಡುವುದು ಖುಷಿಯ ವಿಷಯವೇ ಆದರೂ, ಅವರನ್ನು ಆರಾಮದಾಯಕವಾಗಿ ಮತ್ತು ಮುಕ್ತವಾಗಿರಿಸುವುದು ಅತ್ಯಂತ ಪ್ರಮುಖವಾದದ್ದು. ತಾಪ್ಸಿ ಅವರೊಂದಿಗಿನ ಈ ಅನುಭವ ಎಂದಿಗೂ ನೆನಪಿನಲ್ಲಿ ಉಳಿಯುತ್ತದೆ ಎಂದು ಅವರು ಹೇಳಿದ್ದಾರೆ.
ಸದ್ಯ ತಾಪ್ಸಿ ಪನ್ನು ಅಭಿನಯದ ‘ಗಾಂಧಾರಿ’ ಚಿತ್ರ ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆಗೆ ಸಿದ್ಧವಾಗಿದ್ದು, ಸೆಪ್ಟೆಂಬರ್ 3 ರಂದು ತೆರೆಗೆ ಬರಲಿದೆ. ಕಳೆದುಹೋದ ಮಗಳನ್ನು ಹುಡುಕಲು ಹೋರಾಡುವ ತಾಯಿಯ ಕಥಾಹಂದರ ಹೊಂದಿರುವ ಈ ಸಿನಿಮಾದ ಟ್ರೇಲರ್ ಈಗಾಗಲೇ ಪ್ರೇಕ್ಷಕರ ಗಮನ ಸೆಳೆದಿದೆ.