ಶಿವಮೊಗ್ಗ: ಶಿವಮೊಗ್ಗದಲ್ಲಿ ಪ್ಯಾಲೇಸ್ತೀನ್ ದ್ವಜ ಹಾರಿಸಿದವರ ವಿರುದ್ಧ ಕೇಸ್ ದಾಖಲಾಗಿದ್ದು, ಓರ್ವನನ್ನು ಬಂಧಿಸಲಾಗಿದೆ.
ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಶಿವಮೊಗ್ಗದ ಆರ್.ಎಂ.ಎಲ್. ನಗರದಲ್ಲಿ ನಿರ್ಮಿಸುತ್ತಿದ್ದ ಕಟೌಟ್ ವೊಂದರ ಮೇಲೆ ನಿಂತು ಪ್ಯಾಲೇಸ್ತೀನ್ ಧ್ವಜ ಹಾರಿಸಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ ಮೂವರ ವಿರುದ್ಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಸುಮೋಟೋ ಕೇಸ್ ದಾಖಲಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನಿಹಾಲ್, ಉಮರ್, ಅಬ್ರಹಾರ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ನಿಹಾಲ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆಗಸ್ಟ್ 25ರಂದು ಮಧ್ಯಾಹ್ನ ಆರ್.ಎಂ.ಎಲ್. ನಗರದಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದಾಗ ದೊರೆತ ಖಚಿತ ಮಾಹಿತಿ ಆದರಿಸಿ instagram id ಯೊಂದನ್ನು ಪರಿಶೀಲಿಸಲಾಗಿದೆ. ಖಾತೆಯಲ್ಲಿ ಕಟೌಟ್ ಮೇಲೆ ಮೂವರು ವ್ಯಕ್ತಿಗಳು ಪ್ಯಾಲೇಸ್ತೀನ್ ದೇಶದ ಧ್ವಜ ಹಾರಿಸುತ್ತಿರುವ ವಿಡಿಯೋ ಪೋಸ್ಟ್ ಮಾಡಲಾಗಿತ್ತು.
ಘಟನೆ ಸ್ಥಳದಲ್ಲಿ ಮಾಹಿತಿ ಸಂಗ್ರಹಿಸಲಾಗಿದ್ದು, ಆಗಸ್ಟ್ 24ರ ಬೆಳಿಗ್ಗೆ 8 ಗಂಟೆ ಸುಮಾರಿಗೆ ಆರ್.ಎಂ.ಎಲ್. ನಗರದ ನಿವಾಸಿಗಳಾಗಿರುವ ಮೂವರು ವ್ಯಕ್ತಿಗಳು ಕೃತ್ಯ ಎಸಗಿರುವುದು ಕಂಡುಬಂದಿದೆ. ದೇಶದಲ್ಲಿ ವಾಸವಿದ್ದು, ರಾಷ್ಟ್ರೀಯ ಏಕತೆಗೆ ಧಕ್ಕೆ ತರುವಂತೆ ಮತ್ತು ಜನಾಂಗೀಯ ಕೋಮುಗಳ ನಡುವೆ ವೈಮನಸ್ಯ ಹಾಗೂ ದ್ವೇಷ ಭಾವನೆ ಹುಟ್ಟು ಹಾಕಿ ಸಾರ್ವಜನಿಕ ನೆಮ್ಮದಿಗೆ ಭಂಗ ತರುವ ಉದ್ದೇಶದಿಂದ ಈ ವಿಡಿಯೋ ಹರಿಬಿಡಲಾಗಿದೆ ಎಂದು ದೊಡ್ಡಪೇಟೆ ಠಾಣೆ ಪೊಲೀಸರು ಸಮೋಟೋ ಕೇಸ್ ದಾಖಲಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.