ಬೆಂಗಳೂರು: ರಾಜ್ಯದ ಖಾಸಗಿ ಅನುದಾನಿತ ಮತ್ತು ಅನುದಾನರಹಿತ ಶಾಲೆಗಳ ಪ್ರಥಮ ಮಾನ್ಯತೆ ಹಾಗೂ ಮಾನ್ಯತೆ ನವೀಕರಣ ಪ್ರಕ್ರಿಯೆಯಲ್ಲಿ ಉಂಟಾಗುತ್ತಿರುವ ಆಡಳಿತಾತ್ಮಕ ತೊಡಕುಗಳನ್ನು ನಿವಾರಿಸುವ ನಿಟ್ಟಿನಲ್ಲಿ ವಿಧಾನ ಪರಿಷತ್ತಿನ 'ವಿಶೇಷ ಸದನ ಸಮಿತಿ'ಯು ತನ್ನ ಪ್ರಮುಖ ಮಧ್ಯಂತರ ವರದಿಯನ್ನು ಅಂಗೀಕರಿಸಿ ಸಲ್ಲಿಸಿದೆ.
ಪುಟ್ಟಣ್ಣ ಅವರ ಅಧ್ಯಕ್ಷತೆಯಲ್ಲಿ ರಚನೆಯಾಗಿದ್ದ ಈ ವಿಶೇಷ ಸದನ ಸಮಿತಿಯು, 2017-18ನೇ ಸಾಲಿಗಿಂತ ಮುಂಚಿತವಾಗಿ ಪ್ರಾರಂಭವಾದ ಹಳೆಯ ಶಿಕ್ಷಣ ಸಂಸ್ಥೆಗಳಿಗೆ ಹೊಸ ಶಾಲೆಗಳ ಕಠಿಣ ನಿಯಮಗಳನ್ನು ಹೇರಬಾರದು ಎಂದು ಸ್ಪಷ್ಟವಾಗಿ ಶಿಫಾರಸ್ಸು ಮಾಡಿದೆ.
ವರದಿಯ ಪ್ರಮುಖ ಶಿಫಾರಸ್ಸುಗಳು ಮತ್ತು ಮುಖ್ಯಾಂಶಗಳು:
-
ಅಗ್ನಿ ಸುರಕ್ಷತಾ ನಿಯಮಗಳಲ್ಲಿ ವಿನಾಯಿತಿ: 15 ಮೀಟರ್‌ಗಿಂತ ಕಡಿಮೆ ಎತ್ತರವಿರುವ ಹಳೆಯ ಶಾಲಾ ಕಟ್ಟಡಗಳಿಗೆ ಅಗ್ನಿಸಮಪನ ಪ್ರಮಾಣಪತ್ರದಿಂದ ವಿನಾಯಿತಿ ನೀಡಲು ಹಾಗೂ ಕೇವಲ ಮೂಲಭೂತ ಅಗ್ನಿನಂದಕ ಉಪಕರಣಗಳನ್ನು (ABC ಹಾಗೂ CO2) ಕಡ್ಡಾಯಗೊಳಿಸಲು ಸೂಚಿಸಲಾಗಿದೆ. ಅಲ್ಲದೆ, ಅಗ್ನಿಸುರಕ್ಷತಾ ಪ್ರಮಾಣಪತ್ರದ ಶುಲ್ಕವನ್ನು ರೂ. 20,000 ದಿಂದ ರೂ. 5,000 ಕ್ಕೆ ಇಳಿಸಲು ಹಾಗೂ ಪ್ರಮಾಣಪತ್ರದ ಅವಧಿಯನ್ನು 5 ರಿಂದ 10 ವರ್ಷಗಳಿಗೆ ಹೆಚ್ಚಿಸಲು ಶಿಫಾರಸ್ಸು ಮಾಡಲಾಗಿದೆ.
-
ಭೂ ಪರಿವರ್ತನೆ ಮತ್ತು ಕಟ್ಟಡ ನಕ್ಷೆ: ಹಲವು ದಶಕಗಳಿಂದ ನಡೆಯುತ್ತಿರುವ ಹಳೆಯ ಶಾಲೆಗಳಿಗೆ ಮಾನ್ಯತೆ ನವೀಕರಣ ಸಂದರ್ಭದಲ್ಲಿ ಭೂ ಪರಿವರ್ತನೆ ದಾಖಲೆಗಳನ್ನು ಒತ್ತಾಯಿಸುವುದು ಸಮಂಜಸವಲ್ಲ. ನೋಂದಾಯಿತ ಇಂಜಿನಿಯರ್ (Certified Engineer) ದೃಢೀಕರಿಸಿದ ಕಟ್ಟಡದ ನಕ್ಷೆಯನ್ನು ಅಂಗೀಕರಿಸಬೇಕು.
-
30 ವರ್ಷಗಳ ಲೀಸ್ ಅಗ್ರಿಮೆಂಟ್ ನಿಬಂಧನೆ ಸಡಿಲಿಕೆ: 30 ವರ್ಷಗಳ ಬಾಡಿಗೆ/ಲೀಸ್ ಒಪ್ಪಂದದ ಬದಲಿಗೆ 15 ವರ್ಷಗಳ ಒಪ್ಪಂದವನ್ನು ಪರಿಗಣಿಸಬೇಕು. ಉಳಿಕೆ ಅವಧಿಯ ಒಪ್ಪಂದಗಳಿದ್ದಲ್ಲಿ ಅದನ್ನು ತಂತ್ರಾಂಶದಲ್ಲಿಯೇ 'ವಿಸ್ತರಿತ ಮಾನ್ಯತೆ' (Deemed Renewal) ಎಂದು ಪರಿಗಣಿಸಬೇಕು.
-
ದಾಖಲೆಗಳ ಸಂಖ್ಯೆ ಕಡಿತ ಹಾಗೂ ಪ್ರತ್ಯೇಕ ಪೋರ್ಟಲ್: ಮಾನ್ಯತೆ ನವೀಕರಣಕ್ಕೆ ಕೋರಲಾಗುತ್ತಿದ್ದ 30ಕ್ಕೂ ಹೆಚ್ಚು ಅನಗತ್ಯ ದಾಖಲೆಗಳನ್ನು ಕಡಿತಗೊಳಿಸಬೇಕು. ಹೊಸ ಶಾಲೆಗಳ ಮಾನ್ಯತೆಗೆ ಹಾಗೂ 2017-18ಕ್ಕೂ ಮೊದಲು ಸ್ಥಾಪಿತವಾದ ಹಳೆಯ ಶಾಲೆಗಳ ನವೀಕರಣಕ್ಕೆ ಪ್ರತ್ಯೇಕ 'ಆನ್‌ಲೈನ್ ಪೋರ್ಟಲ್' ವ್ಯವಸ್ಥೆ ಮಾಡಬೇಕು.
-
ಶಿಕ್ಷಕರ ವೇತನ ತಡೆಹಿಡಿಯದಂತೆ ಸೂಚನೆ: ಮಾನ್ಯತೆ ನವೀಕರಣ ಆಗಿಲ್ಲ ಎಂಬ ಸಣ್ಣಪುಟ್ಟ ಕಾರಣ ನೀಡಿ ಅನುದಾನಿತ ಹಾಗೂ ಅನುದಾನರಹಿತ ಶಾಲಾ ಶಿಕ್ಷಕರ ವೇತನವನ್ನು ಬಿಡುಗಡೆ ಮಾಡದೆ ತಡೆಹಿಡಿಯಬಾರದು ಎಂದು ಸಮಿತಿಯು ಸರ್ಕಾರಕ್ಕೆ ನಿರ್ದೇಶಿಸಿದೆ.
-
ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಅವಕಾಶ (Provisional Renewal): ನವೀಕರಣ ಸಮಸ್ಯೆಗಳಿಂದಾಗಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳನ್ನು 'ಖಾಸಗಿ ಅಭ್ಯರ್ಥಿ'ಗಳಾಗಿ ಪರೀಕ್ಷೆಗೆ ಕೂರಿಸುವುದನ್ನು ತಡೆದು, ತಾತ್ಕಾಲಿಕ ಮಾನ್ಯತೆ ನವೀಕರಣ (Provisional Renewal) ನೀಡಿ ಅದೇ ಶಾಲೆಯ ಹೆಸರಿನಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಬೇಕು.
-
RTE ಮರುಪಾವತಿ ಹಾಗೂ ಕನಿಷ್ಠ ವಿದ್ಯಾರ್ಥಿ ಸಂಖ್ಯೆ: ಜನನ ಪ್ರಮಾಣ ಕುಸಿತದಿಂದಾಗಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿರುವುದರಿಂದ ಮಾನ್ಯತೆ ನವೀಕರಣಕ್ಕೆ ಅಗತ್ಯವಿರುವ ಕನಿಷ್ಠ ವಿದ್ಯಾರ್ಥಿಗಳ ಸಂಖ್ಯೆಯನ್ನು 25 ರಿಂದ 20 ಕ್ಕೆ ಇಳಿಸಬೇಕು. ಅಲ್ಲದೆ, ಶಾಲಾ ಮಾನ್ಯತೆಯ ನೆಪವೊಡ್ಡಿ ತಡೆಹಿಡಿಯಲಾದ RTE ಶುಲ್ಕ ಮರುಪಾವತಿಯನ್ನು ತಕ್ಷಣವೇ ಬಿಡುಗಡೆ ಮಾಡಬೇಕು.
-
ಒಂದೇ ಬಾರಿಯ ಪರಿಹಾರ (One Time Settlement): ಹಿಂದಿನ ವರ್ಷಗಳಲ್ಲಿ ತಾಂತ್ರಿಕ ಕಾರಣಗಳಿಂದ ಮಾನ್ಯತೆ ನವೀಕರಣ ಪಡೆಯಲಾಗದ ಶಾಲೆಗಳಿಗೆ ಪ್ರಸ್ತುತ ವರ್ಷ ಅರ್ಜಿ ಸಲ್ಲಿಸಲು 'SATS' ತಂತ್ರಾಂಶದಲ್ಲಿ 'ಒಂದು ಬಾರಿಯ ಪರಿಹಾರ' (OTS) ಅವಕಾಶ ಕಲ್ಪಿಸಬೇಕು.
ಶೈಕ್ಷಣಿಕ ವ್ಯವಸ್ಥೆಗೆ ಹಾಗೂ ವಿದ್ಯಾರ್ಥಿಗಳ ನಿರಂತರ ಕಲಿಕೆಗೆ ಯಾವುದೇ ಧಕ್ಕೆಯಾಗದಂತೆ, 'Ease of Doing Business' ಮಾದರಿಯಲ್ಲಿ ಶಿಕ್ಷಣ ಇಲಾಖೆಯು ನಿಯಮಗಳನ್ನು ಸರಳೀಕರಿಸಿ ಅನುಷ್ಠಾನಗೊಳಿಸಬೇಕೆಂದು ಸಮಿತಿಯು ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು...