ಕನ್ನಡದಲ್ಲಿ ಶತ ಚಿತ್ರಗಳಲ್ಲಿ ನಟಿಸಿ ಸೆಂಚುರಿ ಸ್ಟಾರ್ ಎನಿಸಿಕೊಂಡಿರುವ ಶಿವರಾಜ್‌ಕುಮಾರ್ ಸದ್ಯ ಜೈಲರ್ ಚಿತ್ರದಲ್ಲಿ ನಟಿಸಿದ ಬಳಿಕ ಪರಭಾಷೆಗಳಲ್ಲಿ ವಿಪರೀತ ಕ್ರೇಜ್ ಪಡೆದುಕೊಂಡಿದ್ದಾರೆ. ತಮಿಳಿನ ಧನುಷ್, ತೆಲುಗಿನ ರಾಮ್ ಚರಣ್ ಚಿತ್ರಗಳಲ್ಲಿ ವಿಶೇಷ ಪಾತ್ರಗಳನ್ನು ನಿರ್ವಹಿಸಿರುವ ಶಿವಣ್ಣ ತಮಿಳು ಹಾಗೂ ತೆಲುಗು ಸ್ಟಾರ್ ನಟರ ಚಿತ್ರಗಳಿಗೂ ಬೇಕಾದ ಸ್ಟಾರ್ ಆಗಿ ಬದಲಾಗಿದ್ದಾರೆ.
ಹೀಗೆ ತಮಿಳು ಹಾಗೂ ತೆಲುಗು ಚಿತ್ರರಂಗಗಳಲ್ಲಿ ಮಿಂಚಿ ಇನ್ನೂ ಅನೇಕ ಆಫರ್‌ಗಳನ್ನು ಪಡೆದುಕೊಳ್ಳುತ್ತಿರುವ ಶಿವರಾಜ್‌ಕುಮಾರ್ ಸದ್ಯ ಬಾಲಿವುಡ್‌ಗೂ ಸಹ ಕಾಲಿಡಲು ಸಜ್ಜಾಗಿದ್ದಾರೆ. ಹೌದು, ನಿರ್ದೇಶಕ ಆರ್ ಚಂದ್ರು ನಿರ್ದೇಶನದ ಒರಿಜಿನಲ್ ಮಾನ್‌ಸ್ಟರ್ ಚಿತ್ರದ ಮೂಲಕ ಶಿವಣ್ಣ ಬಾಲಿವುಡ್ ಪ್ರವೇಶ ಮಾಡುತ್ತಿದ್ದಾರೆ.
ಮೂಲ ಕನ್ನಡದ ಚಿತ್ರವಾದ ಒರಿಜಿನಲ್ ಮಾನ್‌ಸ್ಟರ್ ಹಿಂದಿಯಲ್ಲೂ ಸಹ ಬಿಡುಗಡೆಯಾಗಲಿದ್ದು, ಆರ್ ಚಂದ್ರು ಇದು ಹಿಂದಿಯಲ್ಲೂ ಸಹ ಕನ್ನಡದ ಹಾಗೆ ದೊಡ್ಡ ಮಟ್ಟದ ರಿಲೀಸ್ ಕಾಣಲಿದೆ ಎಂದಿದ್ದಾರೆ.
ಹೀಗೆ ಕನ್ನಡ ಹಾಗೂ ಹಿಂದಿಯಲ್ಲಿ ಬಿಡುಗಡೆಯಾಗಲಿರುವ ಚಿತ್ರದ ಮೊದಲ ಕನ್ನಡ ಪತ್ರಿಕಾಗೋಷ್ಟಿ ಇತ್ತೀಚೆಗಷ್ಟೆ ಬೆಂಗಳೂರಿನಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಚಿತ್ರದ ಬಗ್ಗೆ ಮಾತನಾಡಿದ ಶಿವಣ್ಣಗೆ ಹಿಂದಿಯಲ್ಲೂ ಸಹ ಚಿತ್ರ ಬಿಡುಗಡೆಯಾಗಲಿರುವ ಕಾರಣ ಡಬಿಂಗ್ ನೀವೇ ಮಾಡ್ತೀರ, ಹಿಂದಿ ಬರುತ್ತಾ ಎಂಬ ಪ್ರಶ್ನೆ ಪತ್ರಕರ್ತರಿಂದ ಎದುರಾಯಿತು.
ಈ ಪ್ರಶ್ನೆಗೆ ಉತ್ತರಿಸಿದ ಶಿವರಾಜ್‌ಕುಮಾರ್ ‘ಯಾಕೆ? ನನ್ನ ಸೆಕೆಂಡ್ ಲಾಂಗ್‌ವೇಜ್ ಹಿಂದಿ. ಮೇ ಹಿಂದಿ ಬಾತ್ ಕರ್ ಸಕ್ತಾ ಹು ಯಾರ್. ಹಿಂದಿ ಸುಲಭದ ಭಾಷೆ ರೀ, ರಾಷ್ಟ್ರೀಯ ಭಾಷೆ ಬರದೇ ಏನು ಬರುತ್ತೆ ಬಿಡಿ’ ಎಂದಿದ್ದರು.
ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಕನ್ನಡಿಗರು ಶಿವರಾಜ್‌ಕುಮಾರ್ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಭಾರತಕ್ಕೆ ಯಾವುದೇ ರಾಷ್ಟ್ರೀಯ ಭಾಷೆ ಇಲ್ಲ, ಇತರೆ ಭಾಷೆಗಳ ಹಾಗೆ ಹಿಂದಿ ಸಹ ಒಂದು ಭಾಷೆಯಷ್ಟೇ ಎಂದು ಸಾಮಾಜಿಕ ಜಾಲತಾಣದಲ್ಲಿ ಶಿವಣ್ಣ ಹೇಳಿಕೆಯ ವಿಡಿಯೊ ಹಂಚಿಕೊಂಡು ಕಿಡಿಕಾರಿದ್ದರು.
ಹೀಗೆ ವಿಡಿಯೊ ವೈರಲ್ ಆಗಿ ಶಿವಣ್ಣ ವಿರುದ್ಧ ಟ್ರೋಲ್‌ಗಳು ವ್ಯಕ್ತವಾದ ಬೆನ್ನಲ್ಲೇ ಅದೇ ಪತ್ರಿಕಾಗೋಷ್ಟಿಯಲ್ಲಿ ಸ್ವತಃ ಶಿವಣ್ಣ ತಮ್ಮ ಹೇಳಿಕೆಯಲ್ಲಿ ತಪ್ಪಾಗಿದೆ ಎಂದು ಸ್ಪಷ್ಟನೆ ನೀಡಿದ ವಿಡಿಯೊ ಹೊರಬಿದ್ದಿದೆ. ನ್ಯೂಸ್ ಫಸ್ಟ್ ಜತೆ ಮಾತನಾಡಿದ ಶಿವಣ್ಣ ‘ಹಿಂದಿಯನ್ನು ರಾಷ್ಟ್ರ ಭಾಷೆ ಎಂದು ಹೇಳಿಬಿಟ್ಟಿದ್ದೇನೆ. ಅದು ದೇಶದ ಹಲವು ಭಾಷೆಗಳಲ್ಲಿ ಒಂದಷ್ಟೇ. ತಪ್ಪಾಗಿದೆ ಕ್ಷಮೆ ಇರಲಿ. ಅವರ ಭಾಷೆ ಅವರಿಗೆ ಕನ್ನಡ ನಮಗೆ. ಆದರೆ ಅಲ್ಲಿಗೆ ಹೋದಾಗ ಅದನ್ನು ಮಾತನಾಡುತ್ತೇವೆ, ಇಲ್ಲಿಗೆ ಬಂದಾಗ ಇದನ್ನು ಮಾತನಾಡುತ್ತೇವೆ’ ಎಂದು ತಿಳಿಸಿದ್ದಾರೆ.
ಭಾರತಕ್ಕೆ ಯಾವುದೇ ರಾಷ್ಟ್ರ ಭಾಷೆ ಇಲ್ಲ
ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಹಲವಾರು ಭಾಷೆಗಳಿದ್ದು, ಒಂದೊಂದು ರಾಜ್ಯದಲ್ಲೂ ಒಂದೊಂದು ಭಾಷೆ ಇದೆ. ಕರ್ನಾಟಕದಲ್ಲಿ ಕನ್ನಡ, ತಮಿಳುನಾಡಿನಲ್ಲಿ ತಮಿಳು, ಕೇರಳದಲ್ಲಿ ಮಲಯಾಳಂ ಹೇಗೋ ಹಾಗೆಯೇ ಹಿಂದಿ ಕೂಡ ಭಾರತದ ಒಂದು ಭಾಷೆಯೇ ಹೊರತು ಅದು ರಾಷ್ಟ್ರ ಭಾಷೆ ಅಲ್ಲವೇ ಅಲ್ಲ.