ಬೆಂಗಳೂರು : ನಗರ ಹಾಗೂ ಪಟ್ಟಣಗಳಲ್ಲಿ ವಾಸಿಸುವ ಬಹುತೇಕ ಜನರು ಬಾಡಿಗೆ ಮನೆಗಳಲ್ಲೇ ಇರುತ್ತಾರೆ. ಉದ್ಯೋಗ ಬದಲಾವಣೆ ಅಥವಾ ಇತರ ವೈಯಕ್ತಿಕ ಕಾರಣಗಳಿಂದ ಆಗಾಗ ಮನೆ ಬದಲಾಯಿಸುವುದು ಸಾಮಾನ್ಯ. ಹೀಗೆ ಮನೆ ಬದಲಾಯಿಸಿದಾಗ ವಿಳಾಸವೂ ಬದಲಾಗುವುದರಿಂದ ಆಧಾರ್ ಕಾರ್ಡ್ ಸೇರಿದಂತೆ ಇತರ ಪ್ರಮುಖ ದಾಖಲೆಗಳನ್ನು ಅಪ್‌ಡೇಟ್ ಮಾಡಿಕೊಳ್ಳುವುದು ಎಷ್ಟು ಮುಖ್ಯವೋ, ಎಲ್‌ಪಿಜಿ (LPG) ಗ್ಯಾಸ್ ಕನೆಕ್ಷನ್ ವಿಳಾಸವನ್ನು ಬದಲಾಯಿಸಿಕೊಳ್ಳುವುದೂ ಅಷ್ಟೇ ಅಗತ್ಯ. ಹೊಸ ಕನೆಕ್ಷನ್ ಪಡೆಯುವ ಬದಲು, ಇರುವ ಕನೆಕ್ಷನ್‌ಗೇ ವಿಳಾಸವನ್ನು ಸುಲಭವಾಗಿ ವರ್ಗಾಯಿಸಿಕೊಳ್ಳಬಹುದು. ಇದರಿಂದ ಸಿಲಿಂಡರ್ ಡೋರ್ ಡೆಲಿವರಿ ಪಡೆಯುವಲ್ಲಿ ಯಾವುದೇ ಸಮಸ್ಯೆ ಎದುರಾಗುವುದಿಲ್ಲ.
ಅಗತ್ಯವಿರುವ ದಾಖಲೆಗಳು:
ಆಧಾರ್ ಕಾರ್ಡ್
ಹೊಸ ಮನೆಯ ವಿಳಾಸ ಪುರಾವೆ (ಕರೆಂಟ್ ಬಿಲ್, ಬಾಡಿಗೆ ಕರಾರು ಪತ್ರ ಇತ್ಯಾದಿ)
ಗ್ಯಾಸ್ ಪಾಸ್‌ಬುಕ್ / ಗ್ರಾಹಕರ ಪುಸ್ತಕ
ಸಬ್‌ಸ್ಕ್ರಿಪ್ಷನ್ ವೋಚರ್ (SV)
ಕೆವೈಸಿ (KYC) ಫಾರ್ಮ್
ಒಂದೇ ನಗರದಲ್ಲಿ ಬೇರೆ ಏರಿಯಾಕ್ಕೆ ವಿಳಾಸ ಬದಲಾಯಿಸುವುದು ಹೇಗೆ?
ಪ್ರಸ್ತುತ ನಿಮಗೆ ಸಿಲಿಂಡರ್ ವಿತರಿಸುತ್ತಿರುವ ಗ್ಯಾಸ್ ಏಜೆನ್ಸಿ ಕಚೇರಿಗೆ ಭೇಟಿ ನೀಡಿ 'ಟ್ರಾನ್ಸ್‌ಫರ್ ಟರ್ಮಿನೇಷನ್ ವೋಚರ್' (TTV) ಪಡೆದುಕೊಳ್ಳಿ.
ನಂತರ, ನೀವು ಸ್ಥಳಾಂತರಗೊಂಡಿರುವ ಹೊಸ ಏರಿಯಾದ ಅಧಿಕೃತ ಗ್ಯಾಸ್ ಏಜೆನ್ಸಿಗೆ ತೆರಳಿ ಆ ವೋಚರ್ ಅನ್ನು ಸಲ್ಲಿಸಿ.
ಇದರ ಜೊತೆಗೆ ನಿಮ್ಮ ಹೊಸ ವಿಳಾಸದ ದಾಖಲೆ ಮತ್ತು ಕೆವೈಸಿ ಫಾರ್ಮ್ ಸಲ್ಲಿಸಿದರೆ, ಕೆಲವೇ ನಿಮಿಷಗಳಲ್ಲಿ ನಿಮ್ಮ ಹೊಸ ವಿಳಾಸ ಅಪ್‌ಡೇಟ್ ಆಗುತ್ತದೆ.
ಮುಂದಿನ ಬಾರಿ ಸಿಲಿಂಡರ್ ಬುಕ್ ಮಾಡಿದಾಗ ಹೊಸ ವಿಳಾಸಕ್ಕೆ ನೇರವಾಗಿ ಡೆಲಿವರಿ ಸಿಗಲಿದೆ.
ಬೇರೆ ನಗರಕ್ಕೆ ಸ್ಥಳಾಂತರಗೊಳ್ಳುತ್ತಿದ್ದರೆ ಏನು ಮಾಡಬೇಕು?
ಒಂದು ವೇಳೆ ನೀವು ಬೇರೆ ಊರಿಗೆ ಹೋಗುತ್ತಿದ್ದರೆ, ನಿಮ್ಮಲ್ಲಿರುವ ಸಿಲಿಂಡರ್ ಮತ್ತು ರೆಗ್ಯುಲೇಟರ್ ಅನ್ನು ಪ್ರಸ್ತುತ ಏಜೆನ್ಸಿಗೆ ವಾಪಸ್ ನೀಡಬೇಕು. ಏಜೆನ್ಸಿಯವರು ನೀವು ಠೇವಣಿ ಇಟ್ಟಿದ್ದ ಸೆಕ್ಯೂರಿಟಿ ಹಣವನ್ನು ಹಿಂತಿರುಗಿಸಿ, ಟರ್ಮಿನೇಷನ್ ವೋಚರ್ ನೀಡುತ್ತಾರೆ. ಹೊಸ ನಗರಕ್ಕೆ ಹೋದ ಬಳಿಕ ಅಲ್ಲಿನ ಸಮೀಪದ ಏಜೆನ್ಸಿಗೆ ಈ ವೋಚರ್ ಮತ್ತು ವಿಳಾಸ ದಾಖಲೆಗಳನ್ನು ನೀಡಿ ಹೊಸ ಸಿಲಿಂಡರ್ ಹಾಗೂ ರೆಗ್ಯುಲೇಟರ್ ಪಡೆದುಕೊಳ್ಳಬಹುದು.
ಪಿಎನ್‌ಜಿ (PNG) ಸಂಪರ್ಕಕ್ಕೆ ಬದಲಾಗುವುದು ಹೇಗೆ?
ಪೈಪ್ಡ್ ನ್ಯಾಚುರಲ್ ಗ್ಯಾಸ್ (PNG) ಸಂಪರ್ಕ ಪಡೆಯಲು ಬಯಸಿದರೆ, ಮೊದಲು ನಿಮ್ಮ ಎಲ್‌ಪಿಜಿ ಸಂಪರ್ಕವನ್ನು ರದ್ದುಗೊಳಿಸಬೇಕಾಗುತ್ತದೆ. ಇದಕ್ಕಾಗಿ ಸಿಲಿಂಡರ್ ಅನ್ನು ಏಜೆನ್ಸಿಗೆ ಒಪ್ಪಿಸಿ ರಶೀದಿ ಪಡೆದ ನಂತರ, ನಿಮ್ಮ ಬಡಾವಣೆಯಲ್ಲಿ ಪಿಎನ್‌ಜಿ ಪೂರೈಸುವ ಕಂಪನಿಯನ್ನು ಸಂಪರ್ಕಿಸಿ ಹೊಸ ಸಂಪರ್ಕ ಪಡೆಯಬಹುದು.