ಕೊಪ್ಪಳ: ಕೋತಿಯೊಂದು ತಳ್ಳಿದ ಪರಿಣಾಮ ವೃದ್ಧೆಯೊಬ್ಬರು ಕುಸಿದುಬಿದ್ದು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಕೊಪ್ಪಳ ನಗರದ ಬಿ.ಟಿ. ಪಾಟೀಲ್ ನಗರದಲ್ಲಿ ನಡೆದಿದೆ. ಬಿ.ಟಿ. ಪಾಟೀಲ್ ನಗರದ ನಿವಾಸಿ ನಜಮುನಿಸಾ ಬೇಗಂ (91) ಮೃತಪಟ್ಟ ದುರದೃಷ್ಟಕರ ವೃದ್ಧೆಯಾಗಿದ್ದಾರೆ. ತಮ್ಮ ಮನೆಯ ಮುಂದೆ ನಿಂತಿದ್ದ ವೇಳೆಯಲ್ಲಿ ಏಕಾಏಕಿ ಬಂದ ಕೋತಿಯೊಂದು ನಜಮುನಿಸಾ ಬೇಗಂ ಅವರ ಮೇಲೆ ದಾಳಿ ನಡೆಸಿ ಜೋರಾಗಿ ತಳ್ಳಿದೆ. ಇದರಿಂದಾಗಿ ಕೆಳಗೆ ಬಿದ್ದು ತಲೆಗೆ ತೀವ್ರ ಪೆಟ್ಟು ಬಿದ್ದು, ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಘಟನೆ ಸಂಭವಿಸಿದ ತಕ್ಷಣ ವೃದ್ಧೆಯನ್ನು ಎಬ್ಬಿಸಲು ಹಾಗೂ ರಕ್ಷಿಸಲು ಧಾವಿಸಿ ಬಂದ ಮತ್ತೊಬ್ಬ ಮಹಿಳೆಯ ಮೇಲೂ ಕೋತಿ ದಾಳಿ ಮಾಡಲು ಯತ್ನಿಸಿದೆ. ಪ್ರಸ್ತುತ ಈ ಇಡೀ ಭೀಕರ ಘಟನೆಯ ದೃಶ್ಯಗಳು ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಮತ್ತು ಕಳವಳ ಮೂಡಿಸಿದೆ. ಪ್ರದೇಶದಲ್ಲಿ ಕೋತಿಗಳ ಕಾಟ ಹೆಚ್ಚಾಗಿದ್ದು, ಅರಣ್ಯ ಇಲಾಖೆ ಹಾಗೂ ನಗರಸಭೆ ಅಧಿಕಾರಿಗಳು ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.