ಬೆಂಗಳೂರು: ಮಲೆನಾಡು ಭಾಗದಲ್ಲಿ ಹಿಂದೆ ಮೈಸೂರು ಮಹಾರಾಜರ ಕಾಲದಲ್ಲಿ ಹಾಗೂ ಕಾಗೋಡು ತಿಮ್ಮಪ್ಪ, ಎಸ್. ಬಂಗಾರಪ್ಪ ಮತ್ತು ಬಿ.ಎಸ್. ಯಡಿಯೂರಪ್ಪ ಅವರ ಅವಧಿಯಲ್ಲಿ ನೀಡಲಾಗಿದ್ದ ಹಕ್ಕುಪತ್ರಗಳನ್ನು ವಜಾ ಮಾಡಲಾಗುತ್ತಿದ್ದು, ರೈತರಿಗೆ ನೋಟಿಸ್ ನೀಡಿ ಒಕ್ಕಲೆಬ್ಬಿಸುವ ಕೆಲಸ ನಡೆಯುತ್ತಿದೆ ಎಂದು ಸಾಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ವಿಧಾನಸಭೆಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ವಿಶೇಷ ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸಿ ಮಾತನಾಡಿದ ಅವರು, ಮಲೆನಾಡಿನ ರೈತರ ಹಾಗೂ ಶರಾವತಿ ಸಂತ್ರಸ್ತರ ಸಂಕಷ್ಟಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟು, ಸದನದ ಗಮನಕ್ಕೆ ತಂದರು.
ಶಾಸಕ ಗೋಪಾಲಕೃಷ್ಣ ಬೇಳೂರು ಅವರ ಮಾತಿನ ಪ್ರಮುಖ ಅಂಶಗಳು:
ಮಹಾರಾಜರ ಕಾಲದ ಹಕ್ಕುಪತ್ರ ರದ್ದು: ಮಲೆನಾಡಿನಲ್ಲಿ ಹಿಂದೆ ಮಹಾರಾಜರ ಕಾಲದಲ್ಲಿ ನೀಡಲಾಗಿದ್ದ ಹಾಗೂ ಕಾಗೋಡು ತಿಮ್ಮಪ್ಪ, ಬಂಗಾರಪ್ಪ, ಯಡಿಯೂರಪ್ಪ ಅವರ ಕಾಲದಲ್ಲಿ ನೀಡಿದ್ದ ಹಕ್ಕುಪತ್ರಗಳನ್ನು ಸಹ ಇವತ್ತು ವಜಾ ಮಾಡಲಾಗುತ್ತಿದೆ. ರೈತರಿಗೆ ಸತತವಾಗಿ ನೋಟಿಸ್ ನೀಡುವ ಮೂಲಕ ಅವರನ್ನು ಜಮೀನಿನಿಂದ ಒಕ್ಕಲೆಬ್ಬಿಸುವ ಕೆಲಸ ನಡೆಯುತ್ತಿದೆ.
ಶರಾವತಿ ಸಂತ್ರಸ್ತರ ಕಣ್ಣೀರು: ನಾಡಿಗೆ ಬೆಳಕು ನೀಡಲು ಶರಾವತಿ ಡ್ಯಾಂ ನಿರ್ಮಾಣಕ್ಕಾಗಿ ತಮ್ಮ ಆಸ್ತಿ-ಪಾಸ್ತಿ ಹಾಗೂ ಜಮೀನುಗಳನ್ನು ತ್ಯಾಗ ಮಾಡಿದ ಶರಾವತಿ ಮುಳುಗಡೆ ಸಂತ್ರಸ್ತ ರೈತರು ಇಂದಿಗೂ ಸಂಕಷ್ಟದಲ್ಲಿದ್ದಾರೆ. ಸುಮಾರು 9,000 ಹೆಕ್ಟೇರ್ ಭೂಮಿಯ ಹಕ್ಕುಪತ್ರಗಳು ವಜಾಗೊಂಡಿದ್ದು, ಸಂತ್ರಸ್ತ ರೈತರು ಸುಪ್ರೀಂ ಕೋರ್ಟ್ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸುಪ್ರೀಂ ಕೋರ್ಟ್ ಆದೇಶ ಮತ್ತು ತನಿಖೆ: ಈ ಹಿಂದೆ ಸಿದ್ದರಾಮಯ್ಯನವರ ಸರ್ಕಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಮಧು ಬಂಗಾರಪ್ಪ, ಕಾಗೋಡು ತಿಮ್ಮಪ್ಪ ಹಾಗೂ ಅಧಿಕಾರಿಗಳ ಜತೆ ಚರ್ಚಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಕೋರ್ಟ್ ನೀಡಿದ ಆದೇಶದಂತೆ ಡಿಸಿ ನೇತೃತ್ವದಲ್ಲಿ ಜಾಗದ ಸರ್ವೆ ನಡೆಸಿ ವರದಿ ಸಲ್ಲಿಕೆಯಾಗಿದ್ದು, ವಿಚಾರಣೆ ಹಂತದಲ್ಲಿದೆ.
ರೈತರ ಬದುಕು ಅನಿಶ್ಚಿತ: ಸುಪ್ರೀಂ ಕೋರ್ಟ್ ಏನಾದರೂ ರೈತರ ಪರವಾಗಿ ಆದೇಶ ನೀಡಿದರೆ ಮಾತ್ರ ಅವರ ಬದುಕು ಉಳಿಯುತ್ತದೆ. ಇಲ್ಲವಾದರೆ ಸಾವಿರಾರು ರೈತರ ಕುಟುಂಬಗಳು ಬೀದಿಗೆ ಬಿದ್ದು, ವಿಷ ಕುಡಿಯುವಂತಹ ಭೀಕರ ಪರಿಸ್ಥಿತಿ ಎದುರಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕಸ್ತೂರಿ ರಂಗನ್ ವರದಿ ಮತ್ತು ಗ್ರಾಮ ಸಭೆ: ಕೇರಳ ಸೇರಿದಂತೆ ನೆರೆ ರಾಜ್ಯಗಳು ಕಸ್ತೂರಿ ರಂಗನ್ ವರದಿ ಜಾರಿಗೆ ಸಂಬಂಧಿಸಿದಂತೆ ಮುನ್ನೆಚ್ಚರಿಕೆ ವಹಿಸಿ ತಮ್ಮ ಹಕ್ಕುಗಳನ್ನು ಪಡೆದುಕೊಂಡಿವೆ. ಆದರೆ ನಮ್ಮಲ್ಲಿ ವರದಿ ಜಾರಿಯಾದ ಮೇಲೆ ಗ್ರಾಮ ಸಭೆಗಳನ್ನು ಕರೆದು ಸಾರ್ವಜನಿಕರ ಅಭಿಪ್ರಾಯ ಪಡೆದು ನಿರ್ಧಾರ ಕೈಗೊಳ್ಳಬೇಕಿತ್ತು ಎಂದು ಅಭಿಪ್ರಾಯಪಟ್ಟರು.
ಮಲೆನಾಡು ಭಾಗದ ರೈತರ ಹಾಗೂ ಮುಳುಗಡೆ ಸಂತ್ರಸ್ತರ ಭೂಮಿ ಹಕ್ಕನ್ನು ರಕ್ಷಿಸಲು ಸರ್ಕಾರ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಸದನವನ್ನು ಒತ್ತಾಯಿಸಿದರು.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು..