LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಇಂದಿನ ವಿಶೇಷ ಅಧಿವೇಶನದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿದ್ದೇನು? ಇಲ್ಲಿದೆ ಓದಿ! 

ಬೆಂಗಳೂರು: ವಿಧಾನಸಭೆಯ ವಿಶೇಷ ಚರ್ಚೆಯ ವೇಳೆ ಕಸ್ತೂರಿ ರಂಗನ್ ವರದಿ ಮತ್ತು ಪಶ್ಚಿಮ ಘಟ್ಟ ಕರಡು ಅಧಿಸೂಚನೆ ಕುರಿತು ಸಾಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಮಲೆನಾಡಿನ ರೈತರ ಪರವಾಗಿ ಧ್ವನಿ ಎತ್ತಿದರು. ಮಲೆನಾಡಿನ ಜನರ ಬದುಕು, ಭೂಮಿ ಮತ್ತು ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಕಸ್ತೂರಿ ರಂಗನ್ ವರದಿಯನ್ನು ಯಾವುದೇ ಕಾರಣಕ್ಕೂ ಜಾರಿಗೆ ತರಬಾರದು ಹಾಗೂ ಕೇಂದ್ರದ ಈ ಕರಡು ಮಸೂದೆಗೆ ಸಂಪೂರ್ಣ ಅಂತ್ಯ ಹಾಡಬೇಕು ಎಂದು ಅವರು ಸದನದಲ್ಲಿ ಗಟ್ಟಿಯಾಗಿ ಆಗ್ರಹಿಸಿದರು.

ಇಂದಿನಿಂದ ಕಸ್ತೂರಿ ರಂಗನ್ ವರದಿ ಹಾಗೂ ಮಲೆನಾಡಿನ ರೈತರ ಸಮಸ್ಯೆ ಬಗ್ಗೆ ವಿಶೇಷ ಅಧಿವೇಶನ ಆರಂಭಗೊಂಡಿದೆ. ಈ ವಿಶೇಷ ಅಧಿವೇಶನದಲ್ಲಿ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಮಲೆನಾಡಿನ ರೈತರ ಸಮಸ್ಯೆ, ಶರಾವತಿ ಮುಳುಗಡೆ ಸಂತ್ರಸ್ತರ ಭೂ ಮಂಜೂರಾತಿ ಸಮಸ್ಯೆ, ಕಸ್ತೂರಿ ರಂಗನ ವರದಿಯ ಬಗ್ಗೆ ಸುದೀರ್ಘವಾಗಿ ಸದನದಲ್ಲಿ ಮಾತನಾಡಿದರು. ಅವರ ಮಾತಿನ ಹೈಲೈಟ್ಸ್ ಮುಂದಿದೆ ಓದಿ.

ಮುಖ್ಯಮಂತ್ರಿಗಳಿಗೆ ಅಭಿನಂದನೆ ಹಾಗೂ ಮಲೆನಾಡಿನ ಪರಿಸ್ಥಿತಿ

ಭಾಷಣದ ಆರಂಭದಲ್ಲಿ ತಮಗೆ ಮಾತನಾಡಲು ಅವಕಾಶ ನೀಡಿದ್ದಕ್ಕೆ ಅಧ್ಯಕ್ಷರಿಗೆ ಧನ್ಯವಾದ ತಿಳಿಸಿದ ಅವರು, ಮಲೆನಾಡು ಭಾಗಕ್ಕೆ ಖುದ್ದಾಗಿ ಭೇಟಿ ನೀಡಿ ರೈತರ ಅಹವಾಲುಗಳನ್ನು ಆಲಿಸಿ ಧೈರ್ಯ ತುಂಬಿದ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಿದರು. ಶಿವಮೊಗ್ಗ ಜಿಲ್ಲೆ ಒಂದರಲ್ಲೇ 1,497 ಹಳ್ಳಿಗಳು ಈ ಯೋಜನೆಯ ವ್ಯಾಪ್ತಿಗೆ ಬರುತ್ತಿದ್ದು, ಇದರಿಂದ ಜನರು ಅತ್ಯಂತ ಭೀತಿಗೆ ಒಳಗಾಗಿದ್ದಾರೆ ಎಂದು ತಿಳಿಸಿದರು.

ಅರಣ್ಯ ಇಲಾಖೆ ಧೋರಣೆ ಹಾಗೂ ಶರಾವತಿ ಮುಳುಗಡೆ ಸಂತ್ರಸ್ತರ ಕಣ್ಣೀರು

ಮಲೆನಾಡಿನಲ್ಲಿ ಹಿಂದೆ ಶರಾವತಿ, ಸಾವೆಹಕ್ಲು ಹಾಗೂ ಮಾಣಿ ಜಲಾಶಯಗಳ ನಿರ್ಮಾಣಕ್ಕೆ ಭೂಮಿ ನೀಡಿದ ಶರಾವತಿ ಮುಳುಗಡೆ ಸಂತ್ರಸ್ತರಿಗೆ ಇಂದಿಗೂ ಹಕ್ಕುಪತ್ರ ಸಿಕ್ಕಿಲ್ಲ. ಇದರ ಮಧ್ಯೆ ಕಸ್ತೂರಿ ರಂಗನ್, ಡೀಮ್ಡ್ ಫಾರೆಸ್ಟ್ ಹಾಗೂ ಅರಣ್ಯ ಇಲಾಖೆಯ ಕಠಿಣ ನಿಯಮಗಳಿಂದ ರೈತರು ಜಮೀನಿಗೆ ಕತ್ತಿ ಹಿಡಿದುಕೊಂಡು ಹೋಗಲು ಹೆದರುವ ಸ್ಥಿತಿ ನಿರ್ಮಾಣವಾಗಿದೆ. ಬ್ರಿಟಿಷರನ್ನೇನೋ ದೇಶದಿಂದ ಓಡಿಸಿದೆವು, ಆದರೆ ಈಗ ಮಲೆನಾಡಿನಲ್ಲಿ ಅರಣ್ಯ ಇಲಾಖೆಯವರನ್ನು ಓಡಿಸುವಂತಹ ಪರಿಸ್ಥಿತಿ ಬಂದಿದೆ ಎಂದು ಸಚಿವರ ಹಾಗೂ ಸರ್ಕಾರದ ಗಮನಕ್ಕೆ ತಂದರು.

ಬೇಸೂರಿನ ಪ್ರಸ್ತಾಪಿತ ಅಣು ವಿದ್ಯುತ್ ಸ್ಥಾವರಕ್ಕೆ ವಿರೋಧ

ಸಾಗರ ತಾಲೂಕಿನ ಬೇಸೂರು ಗ್ರಾಮದಲ್ಲಿ ಶರಾವತಿ ಜಲಾಶಯದ ಪಕ್ಕದಲ್ಲೇ ಕೇಂದ್ರ ಸರ್ಕಾರ ಅಣು ವಿದ್ಯುತ್ ಸ್ಥಾವರ ತರಲು ಸ್ಯಾಂಕ್ಷನ್ ಕಳುಹಿಸಿತ್ತು. ಸ್ಥಳೀಯ ರೈತರ ತೀವ್ರ ಪ್ರತಿಭಟನೆ ಹಾಗೂ ಹೋರಾಟದ ನಂತರ, ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಯೋಜನೆಯನ್ನು ವಜಾಗೊಳಿಸಿ ಕೇಂದ್ರಕ್ಕೆ ಆಕ್ಷೇಪಣೆ ಸಲ್ಲಿಸಲು ಸೂಚಿಸಿದ್ದರು. ಇಂತಹ ಆತಂಕಗಳ ನಡುವೆ ಈಗ ಕಸ್ತೂರಿ ರಂಗನ್ ವರದಿ ಮತ್ತೆ ತಲೆನೋವಾಗಿ ಪರಿಣಮಿಸಿದೆ ಎಂದರು.

ಕೇರಳ ಮಾದರಿ ಹಾಗೂ ಸ್ಯಾಟಲೈಟ್ ಸರ್ವೆ ಅನ್ಯಾಯ

ಕೇರಳ ಸರ್ಕಾರ 2013ರಲ್ಲೇ ಸ್ಯಾಟಲೈಟ್ ಸರ್ವೆಯನ್ನು ತಿರಸ್ಕರಿಸಿ, ಸ್ಥಳೀಯ ಗ್ರಾಮಸಭೆಗಳು ಹಾಗೂ ಸಾರ್ವಜನಿಕರ ಅಭಿಪ್ರಾಯ ಪಡೆದು ರೈತರ ಹಕ್ಕನ್ನು ಕಾಯ್ದುಕೊಂಡಿದೆ. ಆದರೆ ನಮ್ಮಲ್ಲಿ ಯಾವುದೇ ಗ್ರೌಂಡ್ ರಿಯಾಲಿಟಿ (ಸ್ಥಳ ಪರಿಶೀಲನೆ) ಮಾಡದೆ ಕೇವಲ ಸ್ಯಾಟಲೈಟ್ ಸರ್ವೆ ಆಧಾರದಲ್ಲಿ ಸಾವಿರಾರು ಹಳ್ಳಿಗಳನ್ನು ಕಸ್ತೂರಿ ರಂಗನ್ ವರದಿಯಡಿ ಪರಿಸರ ಸೂಕ್ಷ್ಮ ಪ್ರದೇಶವೆಂದು ಸೇರಿಸಿ ರೈತರಿಗೆ ತೀವ್ರ ಅನ್ಯಾಯ ಎಸಗಲಾಗಿದೆ. ಇದನ್ನು ತಿರಸ್ಕರಿಸುವಂತೆ ಶಾಸಕ ಗೋಪಾಲಕೃಷ್ಣ ಬೇಳೂರು ಸದನವನ್ನು ಆಗ್ರಹಿಸಿದರು.

ವನ್ಯಮೃಗಗಳ ಉಪಟಾಳ ಹಾಗೂ ಹಕ್ಕುಪತ್ರಗಳ ವಜಾ

ಮಲೆನಾಡಿನಲ್ಲಿ ಪ್ರಸ್ತುತ ಕಾಡುಹಂದಿ, ಆನೆ, ಕಾಡುಕೋಣ ಹಾಗೂ ಕೋತಿಗಳ ಕಾಟದಿಂದ ಕೃಷಿ ಮಾಡಲಾಗದೆ ರೈತರು ಊರು ಬಿಡುವ ಹಂತಕ್ಕೆ ತಲುಪಿದ್ದಾರೆ. ಇದರ ಜೊತೆಗೆ ಮಹಾರಾಜರ ಕಾಲದಲ್ಲಿ ಹಾಗೂ ಬಂಗಾರಪ್ಪ, ಕಾಗೋಡು ತಿಮ್ಮಪ್ಪ ಮತ್ತು ಯಡಿಯೂರಪ್ಪ ಅವರ ಅವಧಿಯಲ್ಲಿ ನೀಡಲಾಗಿದ್ದ ಹಕ್ಕುಪತ್ರಗಳನ್ನೂ ವಜಾ ಮಾಡಿ ರೈತರಿಗೆ ನೋಟೀಸ್ ನೀಡಲಾಗುತ್ತಿದೆ. ಶರಾವತಿ ಯೋಜನೆಯ 9,000 ಹೆಕ್ಟೇರ್ ಭೂಮಿಯ ಹಕ್ಕುಪತ್ರ ರದ್ದಾಗಿ ಕೇಸ್ ಸುಪ್ರೀಂ ಕೋರ್ಟ್‌ನಲ್ಲಿದ್ದು, ತೀರ್ಪು ವಿರುದ್ಧವಾಗಿ ಬಂದರೆ ಸಂತ್ರಸ್ತರು ವಿಷ ಕುಡಿಯುವ ಸ್ಥಿತಿ ಬರಲಿದೆ ಎಂಬ ಆಘಾತಕಾರಿ ವಿಚಾರವನ್ನು ಪ್ರಸ್ತಾಪಿಸಿದರು.

ಕೇಂದ್ರದ 11 ಸಭೆಗಳ ವಿಚಾರ ಹಾಗೂ ಜನಪ್ರತಿನಿಧಿಗಳಿಗೆ ಪ್ರಶ್ನೆ

ಕಸ್ತೂರಿ ರಂಗನ್ ವರದಿ ವಿಚಾರವಾಗಿ ಕೇಂದ್ರ ಪರಿಸರ ಇಲಾಖೆಯು ಈವರೆಗೆ 11 ಬಾರಿಗೆ ಸಭೆಗಳನ್ನು ಕರೆದಿತ್ತು. ಆದರೆ, ಆ 11 ಸಭೆಗಳಿಗೆ ಸಂಸದರಾಗಲಿ ಅಥವಾ ಮಂತ್ರಿಗಳಾಗಲಿ ತೆರಳಿ ರೈತರ ಪರವಾಗಿ ಸೂಕ್ತವಾಗಿ ಧ್ವನಿ ಎತ್ತಿ ಅಬ್ಜೆಕ್ಷನ್ ಸಲ್ಲಿಸಿಲ್ಲ. ಅಲ್ಲಿ ಆಕ್ಷೇಪಣೆ ಸಲ್ಲಿಸಿದ್ದರೆ ಇವತ್ತು ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು..

ಸದನಕ್ಕೆ ಹಾಗೂ ಸರ್ಕಾರಕ್ಕೆ ಸ್ಪಷ್ಟ ಆಗ್ರಹ

ಕಾಡು, ನದಿ ಹಾಗೂ ಜೀವವೈವಿಧ್ಯತೆಯನ್ನು ರಕ್ಷಿಸುವುದು ಎಷ್ಟು ಮುಖ್ಯವೋ, ರೈತರ ಬದುಕು ಅಷ್ಟೇ ಮುಖ್ಯ. ಈ ವಿಶೇಷ ಅಧಿವೇಶನದ ಚರ್ಚೆಯ ನಂತರ ರಾಜ್ಯ ಸರ್ಕಾರ ಹಾಗೂ ಎಲ್ಲಾ ಪಕ್ಷದ ನಾಯಕರು ಸೇರಿ ದೆಹಲಿಗೆ ನಿಯೋಗ ತೆರಳಿಯಾದರೂ ಸರಿ, ಕಸ್ತೂರಿ ರಂಗನ್ ಕರಡು ವರದಿಯನ್ನು ಮತ್ತೆ ಬಾರದಂತೆ ಸಂಪೂರ್ಣವಾಗಿ ರದ್ದುಗೊಳಿಸಬೇಕು. ರೈತರ ಬದುಕಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಒತ್ತಾಯಿಸಿ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.

ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು...

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಂಡ್ಯದಲ್ಲಿ ಕಾಲುವೆಗೆ ಉರುಳಿದ ವಾಹನ: 24 ಗಾರ್ಮೆಂಟ್ಸ್‌ ಕಾರ್ಮಿಕರಿಗೆ ಗಾಯ, ತಪ್ಪಿದ ಭಾರಿ ದುರಂತಕಸ್ತೂರಿ ರಂಗನ್ ವರದಿ ಮುಂದಿಟ್ಟುಕೊಂಡು ಮಲೆನಾಡಿನ ರೈತರ ಬದುಕು ಕಿತ್ತುಕೊಳ್ಳಲು ಸಾಧ್ಯವಿಲ್ಲ: ಸಚಿವ ಮಧು ಬಂಗಾರಪ್ಪ ಗುಡುಗುJOB ALERT: 'PU ಕಾಲೇಜು ಉಪನ್ಯಾಸಕ'ರ ನೇಮಕಾತಿ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್: '814 ಹುದ್ದೆ' ಭರ್ತಿಗೆ ಅಧಿಸೂಚನೆ ಪ್ರಕಟಜೋಳದ ರಾಶಿ ಕಾಯುತ್ತಿದ್ದವರಿಗೆ ಬಡಿದ ಸಿಡಿಲು; ಓರ್ವ ರೈತ ದುರ್ಮರಣ, ಮತ್ತೋರ್ವನಿಗೆ ಗಂಭೀರ ಗಾಯಶಬರಿಮಲೆ ಯಾತ್ರೆ ಮುಗಿಸಿ ಮರಳುತ್ತಿದ್ದ ಅಯ್ಯಪ್ಪ ಮಾಲಧಾರಿ ಹೃದಯಾಘಾತದಿಂದ ನಿಧನಸಿಡಿಲು ಬಡಿದು ಬಿರುಕು ಬಿಟ್ಟ ದೇವಸ್ಥಾನದ ಮಹಾಗೋಪುರ, ಭಕ್ತರಲ್ಲಿ ಆತಂಕ!₹5,000 ಲಂಚ ಸ್ವೀಕರಿಸುವಾಗ ಮಂಗಳೂರಿನ ಬಜ್ಪೆ ಇನ್ಸ್‌ಪೆಕ್ಟರ್ ಬಾಲಕೃಷ್ಣ ಲೋಕಾಯುಕ್ತ ಬಲೆಗೆರೈಲ್ವೆ ಪ್ರಯಾಣಿಕರಿಗೆ ಮಹತ್ವದ ಮಾಹಿತಿ: ಈ ರೈಲುಗಳ ಸಂಚಾರ ರದ್ದು, ಮಾರ್ಗ ಬದಲಾವಣೆ, ಸಮಯ ಪರಿಷ್ಕರಣೆಸೌಜನ್ಯ ಪ್ರಕರಣ ಮರು ತನಿಖೆಗೆ ಸುಪ್ರೀಂ ಕೋರ್ಟ್ ಆದೇಶ: ಮುಕ್ತ ಮನಸ್ಸಿನಿಂದ ನಿರ್ಧಾರ ಸ್ವಾಗತಿಸಿದ ಧರ್ಮಸ್ಥಳ ಕ್ಷೇತ್ರಇಂದಿನ ವಿಶೇಷ ಅಧಿವೇಶನದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿದ್ದೇನು? ಇಲ್ಲಿದೆ ಓದಿ!