LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕಸ್ತೂರಿ ರಂಗನ್ ವರದಿ ಮುಂದಿಟ್ಟುಕೊಂಡು ಮಲೆನಾಡಿನ ರೈತರ ಬದುಕು ಕಿತ್ತುಕೊಳ್ಳಲು ಸಾಧ್ಯವಿಲ್ಲ: ಸಚಿವ ಮಧು ಬಂಗಾರಪ್ಪ ಗುಡುಗು

ಬೆಂಗಳೂರು : ಕಸ್ತೂರಿ ರಂಗನ್ ವರದಿ ಜಾರಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊರಡಿಸಿರುವ ಏಳನೇ ಕರಡು ಅಧಿಸೂಚನೆ ಕೇವಲ ಪರಿಸರದ ವಿಚಾರವಲ್ಲ. ಇದು ಮಲೆನಾಡಿನ ರೈತರ ಬದುಕು, ಸಾವಿರಾರು ಕುಟುಂಬಗಳ ಜೀವನೋಪಾಯ ಹಾಗೂ ಮಲೆನಾಡಿನ ಭವಿಷ್ಯದ ಪ್ರಶ್ನೆಯಾಗಿದೆ. ಹೀಗಾಗಿ ಮಲೆನಾಡಿನ ಜನರ ಪರವಾಗಿ ರಾಜ್ಯ ವಿಧಾನಮಂಡಲದ ನಿರ್ಧಾರ ಇರಬೇಕು ಎಂದು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಶ್ರೀ ಮಧು ಬಂಗಾರಪ್ಪ ಅವರು ಮನವಿ ಮಾಡಿದರು.

ಕಸ್ತೂರಿ ರಂಗನ್ ವರದಿ ವಿರೋಧಿಸಿ ರಾಜ್ಯ ಸರ್ಕಾರ ಕರೆದಿರುವ ವಿಶೇಷ ಅಧಿವೇಶನದ ಹಿನ್ನೆಲೆಯಲ್ಲಿ ವಿಧಾನ ಪರಿಷತ್‌ನಲ್ಲಿ ಮಾತನಾಡಿದ ಅವರು, ಪಶ್ಚಿಮ ಘಟ್ಟದ ಸಂರಕ್ಷಣೆಯ ಅಗತ್ಯವನ್ನು ಯಾರೂ ಪ್ರಶ್ನಿಸುತ್ತಿಲ್ಲ. ಆದರೆ ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ತಲೆತಲಾಂತರಗಳಿಂದ ಮಲೆನಾಡಿನಲ್ಲಿ ಬದುಕು ಕಟ್ಟಿಕೊಂಡಿರುವ ರೈತರು ಹಾಗೂ ಅಲ್ಲಿನ ಜನರ ಜೀವನವನ್ನು ಸಂಕಷ್ಟಕ್ಕೆ ಸಿಲುಕಿಸುವ ಯಾವುದೇ ಕ್ರಮವನ್ನು ಒಪ್ಪಲು ಸಾಧ್ಯವಿಲ್ಲ ಎಂದರು.

ಕರ್ನಾಟಕವನ್ನು ಬೇರೆ ರಾಜ್ಯಗಳೊಂದಿಗೆ ಹೋಲಿಕೆ ಮಾಡಲು ಸಾಧ್ಯವಿಲ್ಲ

ವಿರೋಧ ಪಕ್ಷದವರು ಬೇರೆ ಬೇರೆ ರಾಜ್ಯಗಳ ಉದಾಹರಣೆಗಳನ್ನು ನೀಡುತ್ತಿದ್ದಾರೆ. ಆದರೆ ಕರ್ನಾಟಕದ ಪರಿಸ್ಥಿತಿಯನ್ನು ಬೇರೆ ರಾಜ್ಯಗಳೊಂದಿಗೆ ಹೋಲಿಕೆ ಮಾಡಲು ಸಾಧ್ಯವಿಲ್ಲ. ಕರ್ನಾಟಕದ ಮಲೆನಾಡಿನ ಸಾಮಾಜಿಕ, ಆರ್ಥಿಕ ಮತ್ತು ಕೃಷಿ ಹಿನ್ನೆಲೆ ವಿಭಿನ್ನವಾಗಿದೆ ಎಂದು ಸಚಿವರು ಹೇಳಿದರು.

ನಾವು ಇಂದು ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಹಾಗೂ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರನ್ನು ಏಕೆ ನೆನಪಿಸಿಕೊಳ್ಳುತ್ತೇವೆ? ದೇವರಾಜ ಅರಸು ಅವರು ಭೂಮಿ ನೀಡಿದರು. ಎಸ್. ಬಂಗಾರಪ್ಪ ಅವರು ಬಗರ್ ಹುಕುಂ ಹಕ್ಕುಪತ್ರ ನೀಡಿದರು. ಈ ಸೌಲಭ್ಯಗಳನ್ನು ಯಾರಿಗೆ ನೀಡಲಾಯಿತು? ನೆಲಮೂಲ ಸಂಸ್ಕೃತಿಯೊಂದಿಗೆ ಬದುಕು ಕಟ್ಟಿಕೊಂಡಿದ್ದ ಬಡವರು, ಶ್ರಮಿಕರು ಹಾಗೂ ಭೂಮಿಯನ್ನು ಅವಲಂಬಿಸಿದ್ದ ಜನರಿಗೆ ನೀಡಲಾಯಿತು. ಅಂತಹ ಜನರನ್ನು ಇಂದು ಕಸ್ತೂರಿ ರಂಗನ್ ವರದಿಯ ಹೆಸರಿನಲ್ಲಿ ಒಕ್ಕಲೆಬ್ಬಿಸುವ ಪರಿಸ್ಥಿತಿ ನಿರ್ಮಾಣ ಮಾಡಬೇಕೇ ಎಂದು ಮಧು ಬಂಗಾರಪ್ಪ ಪ್ರಶ್ನಿಸಿದರು.

ಉಚಿತ ಪಂಪ್‌ಸೆಟ್‌ಗಳಿಂದ ಮಲೆನಾಡಿನ ಕೃಷಿಗೆ ಹೊಸ ಶಕ್ತಿ

ಎಸ್. ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನೀಡಿದ ಉಚಿತ ಪಂಪ್‌ಸೆಟ್ ಯೋಜನೆಯ ಪರಿಣಾಮವಾಗಿ ಶಿವಮೊಗ್ಗ ಜಿಲ್ಲೆಯ ಕೃಷಿ ಮತ್ತು ಅಡಕೆ ಬೆಳೆಯಲ್ಲಿ ದೊಡ್ಡ ಬದಲಾವಣೆ ಸಂಭವಿಸಿದೆ ಎಂದು ಸಚಿವರು ಹೇಳಿದರು.

1990ರಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಸುಮಾರು 14 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಅಡಕೆ ಬೆಳೆಯಲಾಗುತ್ತಿತ್ತು. ಬಂಗಾರಪ್ಪ ಅವರ ಉಚಿತ ಪಂಪ್‌ಸೆಟ್ ಯೋಜನೆಯ ನಂತರ ಇಂದು ಸುಮಾರು 1.48 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಅಡಕೆ ಬೆಳೆಯಲಾಗುತ್ತಿದೆ. ಈ ಬೆಳವಣಿಗೆಯ ಹಿಂದೆ ಸಾವಿರಾರು ರೈತರ ಪರಿಶ್ರಮವಿದೆ. ಇವರಲ್ಲಿ ಅನೇಕ ರೈತರು ಕಸ್ತೂರಿ ರಂಗನ್ ವರದಿ ವ್ಯಾಪ್ತಿಯಲ್ಲಿ ಬರುತ್ತಾರೆ.

“ಅವರಿಗೆ ಬದುಕು ಕಟ್ಟಿಕೊಟ್ಟಿದ್ದು ನಾವೇ. ಈಗ ಕಸ್ತೂರಿ ರಂಗನ್ ವರದಿ ಮುಂದಿಟ್ಟುಕೊಂಡು ಅವರ ಬದುಕನ್ನೇ ಮತ್ತೆ ಕಿತ್ತುಕೊಳ್ಳಬೇಕಾ?” ಎಂದು ಮಧು ಬಂಗಾರಪ್ಪ ಪ್ರಶ್ನಿಸಿದರು.

ಪಶ್ಚಿಮ ಘಟ್ಟವನ್ನು ಕಾಪಾಡುತ್ತಿರುವವರು ಮಲೆನಾಡಿನ ರೈತರು

ಪಶ್ಚಿಮ ಘಟ್ಟ ದಕ್ಷಿಣ ಭಾರತದ ಶ್ವಾಸಕೋಶ ಎಂದು ವಿರೋಧ ಪಕ್ಷದವರು ಹೇಳುತ್ತಾರೆ. ಪಶ್ಚಿಮ ಘಟ್ಟವನ್ನು ಸಂರಕ್ಷಿಸಬೇಕೆಂಬುದರಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಆದರೆ ಪಶ್ಚಿಮ ಘಟ್ಟವನ್ನು ಹಾಳು ಮಾಡುತ್ತಿರುವವರು ಮಲೆನಾಡಿನ ರೈತರು ಎಂಬ ರೀತಿಯಲ್ಲಿ ನೋಡುವುದು ಸರಿಯಲ್ಲ ಎಂದು ಸಚಿವರು ಹೇಳಿದರು.

ತಲೆತಲಾಂತರಗಳಿಂದ ಮಲೆನಾಡಿನ ಕಾಡು, ಪರಿಸರ ಹಾಗೂ ಪ್ರಕೃತಿಯೊಂದಿಗೆ ಅವಿನಾಭಾವ ಸಂಬಂಧ ಹೊಂದಿ ಬದುಕುತ್ತಿರುವವರು ಅಲ್ಲಿನ ಜನರು. ಕಾಡಿನ ಅಣಬೆ, ಬಿದಿರಿನ ಭತ್ತ ಸೇರಿದಂತೆ ಅಲ್ಲಿನ ನೈಸರ್ಗಿಕ ಸಂಪನ್ಮೂಲಗಳನ್ನು ಅವಲಂಬಿಸಿ ಬದುಕಿದ್ದ ಜನರು ಇಂದು ಕೃಷಿಯ ಮೂಲಕ ಜೀವನ ಕಟ್ಟಿಕೊಂಡಿದ್ದಾರೆ. ಪಶ್ಚಿಮ ಘಟ್ಟದ ಪರಿಸರವನ್ನು ಕಾಪಾಡಿಕೊಂಡು ಬಂದಿರುವ ಇದೇ ಜನರನ್ನು ಕಸ್ತೂರಿ ರಂಗನ್ ವರದಿಯ ಹೆಸರಿನಲ್ಲಿ ಸಂಕಷ್ಟಕ್ಕೆ ಸಿಲುಕಿಸುವುದು ನ್ಯಾಯಸಮ್ಮತವಲ್ಲ ಎಂದರು.

“ನನ್ನ ಕ್ಷೇತ್ರ ಸೊರಬ ವ್ಯಾಪ್ತಿಗೆ ಬರುವುದಿಲ್ಲ; ಆದರೂ ನಾನು ರೈತರ ಜೊತೆ ನಿಂತಿದ್ದೇನೆ”

ತಮ್ಮ ವಿಧಾನಸಭಾ ಕ್ಷೇತ್ರವಾದ ಸೊರಬ ಕಸ್ತೂರಿ ರಂಗನ್ ವರದಿ ವ್ಯಾಪ್ತಿಗೆ ಬರುವುದಿಲ್ಲ. ಆದರೂ ಶಿವಮೊಗ್ಗ ಜಿಲ್ಲೆಯ ಉಸ್ತುವಾರಿ ಸಚಿವನಾಗಿ ತೀರ್ಥಹಳ್ಳಿ ಮತ್ತು ಶಿಕಾರಿಪುರದಲ್ಲಿ ನಡೆದ ಬೃಹತ್ ಪಾದಯಾತ್ರೆಗಳಲ್ಲಿ ತಾವು ಭಾಗವಹಿಸಿದ್ದಾಗಿ ಮಧು ಬಂಗಾರಪ್ಪ ತಿಳಿಸಿದರು.

“ಶಿವಮೊಗ್ಗ ಜಿಲ್ಲೆಯ ಜನ ನನ್ನ ಜನ. ಅವರಿಗೆ ತೊಂದರೆಯಾದಾಗ ನಾನು ನೋಡಿಕೊಂಡು ಸುಮ್ಮನೆ ಕುಳಿತುಕೊಳ್ಳಬೇಕಾ?” ಎಂದು ಅವರು ಪ್ರಶ್ನಿಸಿದರು.

ತಾವು ಪಾದಯಾತ್ರೆಯಲ್ಲಿ ಭಾಗವಹಿಸಿದ್ದನ್ನು ವಿಧಾನಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಪ್ರಶ್ನಿಸಿ ಮಾತನಾಡಿದ್ದಾರೆ. ಅದಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಉತ್ತರ ನೀಡಿದ್ದಾರೆ ಎಂದು ಸಚಿವರು ತಿಳಿಸಿದರು.

ಹಳ್ಳಿ ಮಟ್ಟದಲ್ಲಿ ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಬೇಕು

ಕಸ್ತೂರಿ ರಂಗನ್ ವರದಿ ವ್ಯಾಪ್ತಿಗೆ ಬರುವ ರಾಜ್ಯದ ಪ್ರತಿಯೊಂದು ಹಳ್ಳಿಯಲ್ಲೂ ಸ್ಥಳೀಯ ರೈತರು, ಜನಪ್ರತಿನಿಧಿಗಳು, ಸಾರ್ವಜನಿಕರು ಹಾಗೂ ಸಂಬಂಧಪಟ್ಟ ತಜ್ಞರೊಂದಿಗೆ ಸಭೆ ನಡೆಸಿ, ಅಲ್ಲಿನ ವಾಸ್ತವ ಪರಿಸ್ಥಿತಿಯನ್ನು ಅರಿತುಕೊಂಡು ತೀರ್ಮಾನ ಕೈಗೊಳ್ಳಬೇಕು ಎಂದು ಮಧು ಬಂಗಾರಪ್ಪ ಒತ್ತಾಯಿಸಿದರು.

ವಿರೋಧ ಪಕ್ಷಗಳು ಕೇವಲ ಟೀಕೆ ಮಾಡುವ ಬದಲು ಮಲೆನಾಡಿನ ರೈತರ ಬದುಕು ಮತ್ತು ಪರಿಸರ ಸಂರಕ್ಷಣೆ ಎರಡನ್ನೂ ಕಾಪಾಡುವ ನಿಟ್ಟಿನಲ್ಲಿ ಸಕಾರಾತ್ಮಕ ಸಲಹೆಗಳನ್ನು ನೀಡಬೇಕು. ರೈತರಲ್ಲಿ ಭರವಸೆ ಮೂಡಿಸುವುದು ಹಾಗೂ ಮಲೆನಾಡಿನ ಜನರ ಹಿತವನ್ನು ರಕ್ಷಿಸುವ ಉದ್ದೇಶದಿಂದಲೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿಶೇಷ ಅಧಿವೇಶನ ಕರೆದಿದ್ದಾರೆ. ಈ ಕ್ರಮಕ್ಕಾಗಿ ಮುಖ್ಯಮಂತ್ರಿಗಳಿಗೆ ವಿಶೇಷ ಧನ್ಯವಾದಗಳನ್ನು ಸಲ್ಲಿಸುವುದಾಗಿ ಮಧು ಬಂಗಾರಪ್ಪ ಹೇಳಿದರು.

“ಪರಿಸರವನ್ನೂ ಉಳಿಸಬೇಕು, ಮಲೆನಾಡಿನ ರೈತರ ಬದುಕನ್ನೂ ಉಳಿಸಬೇಕು. ಈ ಎರಡನ್ನೂ ಸಮನ್ವಯಗೊಳಿಸುವ ಪರಿಹಾರವೇ ನಮ್ಮ ಗುರಿಯಾಗಬೇಕು” ಎಂಬ ಸಂದೇಶವನ್ನು ಸಚಿವರು ಕಲಾಪದಲ್ಲಿ ಮುಂದಿಟ್ಟರು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಂಡ್ಯದಲ್ಲಿ ಕಾಲುವೆಗೆ ಉರುಳಿದ ವಾಹನ: 24 ಗಾರ್ಮೆಂಟ್ಸ್‌ ಕಾರ್ಮಿಕರಿಗೆ ಗಾಯ, ತಪ್ಪಿದ ಭಾರಿ ದುರಂತಕಸ್ತೂರಿ ರಂಗನ್ ವರದಿ ಮುಂದಿಟ್ಟುಕೊಂಡು ಮಲೆನಾಡಿನ ರೈತರ ಬದುಕು ಕಿತ್ತುಕೊಳ್ಳಲು ಸಾಧ್ಯವಿಲ್ಲ: ಸಚಿವ ಮಧು ಬಂಗಾರಪ್ಪ ಗುಡುಗುJOB ALERT: 'PU ಕಾಲೇಜು ಉಪನ್ಯಾಸಕ'ರ ನೇಮಕಾತಿ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್: '814 ಹುದ್ದೆ' ಭರ್ತಿಗೆ ಅಧಿಸೂಚನೆ ಪ್ರಕಟಜೋಳದ ರಾಶಿ ಕಾಯುತ್ತಿದ್ದವರಿಗೆ ಬಡಿದ ಸಿಡಿಲು; ಓರ್ವ ರೈತ ದುರ್ಮರಣ, ಮತ್ತೋರ್ವನಿಗೆ ಗಂಭೀರ ಗಾಯಶಬರಿಮಲೆ ಯಾತ್ರೆ ಮುಗಿಸಿ ಮರಳುತ್ತಿದ್ದ ಅಯ್ಯಪ್ಪ ಮಾಲಧಾರಿ ಹೃದಯಾಘಾತದಿಂದ ನಿಧನಸಿಡಿಲು ಬಡಿದು ಬಿರುಕು ಬಿಟ್ಟ ದೇವಸ್ಥಾನದ ಮಹಾಗೋಪುರ, ಭಕ್ತರಲ್ಲಿ ಆತಂಕ!₹5,000 ಲಂಚ ಸ್ವೀಕರಿಸುವಾಗ ಮಂಗಳೂರಿನ ಬಜ್ಪೆ ಇನ್ಸ್‌ಪೆಕ್ಟರ್ ಬಾಲಕೃಷ್ಣ ಲೋಕಾಯುಕ್ತ ಬಲೆಗೆರೈಲ್ವೆ ಪ್ರಯಾಣಿಕರಿಗೆ ಮಹತ್ವದ ಮಾಹಿತಿ: ಈ ರೈಲುಗಳ ಸಂಚಾರ ರದ್ದು, ಮಾರ್ಗ ಬದಲಾವಣೆ, ಸಮಯ ಪರಿಷ್ಕರಣೆಸೌಜನ್ಯ ಪ್ರಕರಣ ಮರು ತನಿಖೆಗೆ ಸುಪ್ರೀಂ ಕೋರ್ಟ್ ಆದೇಶ: ಮುಕ್ತ ಮನಸ್ಸಿನಿಂದ ನಿರ್ಧಾರ ಸ್ವಾಗತಿಸಿದ ಧರ್ಮಸ್ಥಳ ಕ್ಷೇತ್ರಇಂದಿನ ವಿಶೇಷ ಅಧಿವೇಶನದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿದ್ದೇನು? ಇಲ್ಲಿದೆ ಓದಿ!