LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಪದಚ್ಯುತಿಗೆ ಮಾಜಿ ಸಿಎಂ ಸಿದ್ಧರಾಮಯ್ಯ ಒತ್ತಾಯ

ಬೆಂಗಳೂರು: ಸಂವಿಧಾನದ ರಕ್ಷಕರಾಗಿರುವ ಸನ್ಮಾನ್ಯ ರಾಷ್ಟ್ರಪತಿಗಳು ಜ್ಞಾನೇಶ್ ಕುಮಾರ್ ಅವರನ್ನು ತಕ್ಷಣವೇ ಪದಚ್ಯುತಗೊಳಿಸಿ, ಅವರ ವಿರುದ್ಧ ತನಿಖೆ ನಡೆಸುವಂತೆ ಕೇಂದ್ರ ಸರ್ಕಾರಕ್ಕೆ ಆದೇಶ ನೀಡಬೇಕು ಎಂಬುದಾಗಿ ಮಾಜಿ ಸಿಎಂ ಸಿದ್ಧರಾಮಯ್ಯ ಅವರು ಒತ್ತಾಯಿಸಿದ್ದಾರೆ.

ಇಂದು ಅವರು ತಮ್ಮ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದ್ದು, ನಿಷ್ಪಕ್ಷಪಾತ ಮತ್ತು ಪಾರದರ್ಶಕ ಮತದಾನವೇ ಭಾರತದ ಪ್ರಜಾಪ್ರಭುತ್ವದ ಆತ್ಮ. ಪ್ರಜೆಗಳ ಮತದ ಹಕ್ಕನ್ನು ರಕ್ಷಿಸಬೇಕಾದ ಜವಾಬ್ದಾರಿ ಹೊತ್ತಿರುವ ಸಾಂವಿಧಾನಿಕ ಸಂಸ್ಥೆ ಚುನಾವಣಾ ಆಯೋಗ. ಆದರೆ ಇಂದು ಅದೇ ಚುನಾವಣಾ ಆಯೋಗದೊಳಗಿನಿಂದ ಹೊರಬರುತ್ತಿರುವ ಬೆಳವಣಿಗೆಗಳು ದೇಶದ ಪ್ರತಿಯೊಬ್ಬ ಪ್ರಜಾಪ್ರಭುತ್ವವಾದಿಯನ್ನೂ ಆತಂಕಕ್ಕೀಡು ಮಾಡುವಂತಿದೆ ಎಂದಿದ್ದಾರೆ.

ಇಂಗ್ಲೀಷ್ ವೃತ್ತಪತ್ರಿಕೆಯೊಂದರ ತನಿಖಾ ವರದಿಯ ಪ್ರಕಾರ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ನೇತೃತ್ವದ ಮೂವರು ಸದಸ್ಯರ ಆಯೋಗದಲ್ಲಿ ಇಬ್ಬರು ಚುನಾವಣಾ ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಕಳೆದ 10 ತಿಂಗಳಲ್ಲಿ ಕನಿಷ್ಠ 14 ಬಾರಿ ಆಯೋಗದ ನಿರ್ಧಾರಗಳು ಮತ್ತು ಕ್ರಮಗಳ ಕುರಿತು ಲಿಖಿತ ಆಕ್ಷೇಪ ದಾಖಲಿಸಿದ್ದಾರೆ. ಇವು ಸಾಮಾನ್ಯ ಭಿನ್ನಾಭಿಪ್ರಾಯಗಳಲ್ಲ. ಹೊಸ ಮತದಾರರ ನೋಂದಣಿ, ಮತದಾರರ ಹೆಸರುಗಳ ಸೇರ್ಪಡೆ ಮತ್ತು ತೆಗೆದುಹಾಕುವಿಕೆ, ಚುನಾವಣಾ ಪಟ್ಟಿಯ ಡೇಟಾಬೇಸ್‌ನ ನಿಯಂತ್ರಣ ಮತ್ತು SIR ಪ್ರಕ್ರಿಯೆಗೆ ಸಂಬಂಧಿಸಿದ ಗಂಭೀರ ಆಕ್ಷೇಪಗಳು.

ಹೊಸ ಮತದಾರರ ನೋಂದಣಿಗೆ ಬಳಸುವ Form-6ನಲ್ಲಿ ನಿಯಮಬದ್ಧ ಬದಲಾವಣೆ ಮಾಡದೆ ಹೊಸ ಪ್ರಶ್ನೆಯನ್ನು ಸೇರಿಸಿರುವುದನ್ನು ಚುನಾವಣಾ ಆಯುಕ್ತರೊಬ್ಬರು ಅನಧಿಕೃತ ಮತ್ತು ಕಾನೂನು ಬಾಹಿರ (unauthorised and illegal) ಎಂದು ಆಕ್ಷೇಪಿಸಿರುವುದಾಗಿ ವರದಿ ಹೇಳಿದೆ. ಮತ್ತೊಂದೆಡೆ, ಚುನಾವಣಾ ಪಟ್ಟಿಯ ಡೇಟಾಬೇಸ್ ಕ್ರಮೇಣ ಕೇಂದ್ರೀಕೃತವಾಗುತ್ತಿರುವ ಬಗ್ಗೆ ಹಾಗೂ ಕಾನೂನಿನ ಪ್ರಕಾರ ಅಧಿಕಾರ ಹೊಂದಿರುವ ಸ್ಥಳೀಯ ಚುನಾವಣಾಧಿಕಾರಿಗಳ ಪ್ರವೇಶವನ್ನು ನಿರ್ಬಂಧಿಸಲಾಗುತ್ತಿರುವ ಬಗ್ಗೆಯೂ ಬೆಳಕು ಚೆಲ್ಲಿದೆ

ಇದು ಅತ್ಯಂತ ಗಂಭೀರ ವಿಚಾರ

ಮತದಾರರ ಪಟ್ಟಿಯ ನಿರ್ವಹಣೆ ಒಂದು ಪಾರದರ್ಶಕ, ವಿಕೇಂದ್ರೀಕೃತ ಮತ್ತು ಕಾನೂನುಬದ್ಧ ಪ್ರಕ್ರಿಯೆಯಾಗಿರಬೇಕು. ಆದರೆ ಚುನಾವಣಾ ಆಯೋಗದ ಇಬ್ಬರು ಸದಸ್ಯರೇ ಡೇಟಾಬೇಸ್‌ನ ಹಂತಹಂತವಾದ ಕೇಂದ್ರೀಕರಣದ (gradual centralisation) ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಮತದಾರರ ಪಟ್ಟಿಯಂತಹ ಅತ್ಯಂತ ಸೂಕ್ಷ್ಮ ವ್ಯವಸ್ಥೆಯ ನಿಯಂತ್ರಣ ಯಾರ ಕೈಯಲ್ಲಿದೆ? ಯಾವ ಅಧಿಕಾರದ ಅಡಿಯಲ್ಲಿ ಬದಲಾವಣೆಗಳನ್ನು ಮಾಡಲಾಗುತ್ತಿದೆ? ರಾಜ್ಯ ಮಟ್ಟದ ಕಾನೂನುಬದ್ಧ ಅಧಿಕಾರಿಗಳಿಗೆ ಸಂಪೂರ್ಣ ಪ್ರವೇಶ ಏಕೆ ಇಲ್ಲ? ಎಂಬ ಪ್ರಶ್ನೆಗಳಿಗೆ ಆಯೋಗ ಉತ್ತರ ನೀಡಬೇಕು. 

ಪಶ್ಚಿಮ ಬಂಗಾಳದ SIR ಪ್ರಕ್ರಿಯೆಯಲ್ಲೂ ಇದೇ ರೀತಿಯ ಗಂಭೀರ ಪ್ರಶ್ನೆಗಳು ಎದ್ದಿವೆ. ನ್ಯಾಯಾಂಗ ಅಧಿಕಾರಿಗಳು ಮತದಾರರನ್ನು ಪಟ್ಟಿಗೆ ಸೇರಿಸಿದ ನಂತರ, ಅವರ ಸೇರ್ಪಡೆಯನ್ನು ರದ್ದುಮಾಡುವಂತೆ 16 ಲಕ್ಷ ಮೇಲ್ಮನವಿಗಳನ್ನು ಯಾರು ಸಲ್ಲಿಸಿದರು? ಯಾರ ಅನುಮತಿಯ ಮೇರೆಗೆ ಸಲ್ಲಿಸಿದರು? ಎಂಬ ಪ್ರಶ್ನೆಗಳನ್ನು ಚುನಾವಣಾ ಆಯುಕ್ತ ಸುಖಬೀರ್ ಸಿಂಗ್ ಸಂಧು ಅವರು ಸ್ವತಃ ಅಧಿಕಾರಿಗಳಿಗೆ ಕೇಳಿದ್ದಾರೆ ಎಂಬುದು ಈ ತನಿಖಾ ವರದಿಯ ಮೂಲಕ ಬಹಿರಂಗವಾಗಿದೆ. ಅವರ ಪ್ರಕಾರ ತಾವು & ಮತ್ತೊಬ್ಬ ಚುನಾವಣಾ ಆಯುಕ್ತರು ಹಾಗೂ ಪಶ್ಚಿಮ ಬಂಗಾಳದ ಮುಖ್ಯ ಚುನಾವಣಾಧಿಕಾರಿಯೂ ಈ ಪ್ರಕ್ರಿಯೆಯ ಆಧಾರದ ಬಗ್ಗೆ ಮಾಹಿತಿ ಹೊಂದಿರಲಿಲ್ಲ.

ಇನ್ನೂ ಆತಂಕಕಾರಿ ಸಂಗತಿಯೆಂದರೆ, ಆಯೋಗದ ಇಬ್ಬರು ಸದಸ್ಯರು ತಮ್ಮ ಅನುಮತಿಯಿಲ್ಲದೆ ಚುನಾವಣಾ ಆಯೋಗದ ಹೆಸರಿನಲ್ಲಿ ಹಲವು ರೀತಿಯ ಸಂವಹನ ನಡೆಯುತ್ತಿರುವ, ನಿರ್ಧಾರ ಕೈಗೊಳ್ಳಲಾಗುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಚುನಾವಣಾ ಆಯೋಗದ ಕಾರ್ಯವೈಖರಿ ಸಂವಿಧಾನ ಮತ್ತು ಕಾನೂನಿನ ಪ್ರಕಾರ ಸಾಂಸ್ಥಿಕವಾಗಿರಬೇಕೇ ಹೊರತು ಒಬ್ಬ ವ್ಯಕ್ತಿಯ ನಿರ್ಧಾರಕ್ಕೆ ಸೀಮಿತವಾಗಬಾರದು.

ಇಂತಹ ಬೆಳವಣಿಗೆಗಳ ನಡುವೆ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ನೇತೃತ್ವದ ಕಾರ್ಯವೈಖರಿಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ಗಂಭೀರ ಪ್ರಶ್ನೆಗಳು ಉದ್ಭವಿಸಿರುವುದು ಸಹಜ.

ಚುನಾವಣಾ ಆಯೋಗ ಯಾರ ಪರವೂ ಇರಬಾರದು. ಅದು ಸಂವಿಧಾನದ ಪರ, ಮತದಾರನ ಪರ ಇರಬೇಕು. ಕೇಂದ್ರ ಸರ್ಕಾರಕ್ಕೆ ಅನುಕೂಲವಾಗುವ ರೀತಿಯಲ್ಲಿ ಚುನಾವಣಾ ವ್ಯವಸ್ಥೆಯ ನಿಯಮಗಳು, ಮತದಾರರ ಪಟ್ಟಿಗಳು ಅಥವಾ ಚುನಾವಣಾ ಪ್ರಕ್ರಿಯೆಗಳು ಬದಲಾಗುತ್ತಿವೆ ಎಂಬ ಅನುಮಾನವೇ ಮೂಡದಂತೆ ಸಂಸ್ಥೆಯ ಸ್ವಾಯತ್ತತೆ ಮತ್ತು ಪಾರದರ್ಶಕತೆಯನ್ನು ಕಾಪಾಡುವ ಅಗತ್ಯ ಇಂದು ಇದೆ.

ಇಂದು ದೇಶದ ಜನರಿಗೆ ಬೇಕಿರುವುದು ಚುನಾವಣಾ ಆಯೋಗದ ಮೇಲೆ ವಿಶ್ವಾಸ. ಆದರೆ ಆಯೋಗದೊಳಗೇ ಇಬ್ಬರು ಸದಸ್ಯರು ಪದೇಪದೇ ಆಕ್ಷೇಪ ವ್ಯಕ್ತಪಡಿಸುತ್ತಿರುವುದು ಜನರ ದೇಶದ ಚುನಾವಣಾ ಆಯೋಗ ಮತ್ತು ಚುನಾವಣಾ ಪ್ರಕ್ರಿಯೆಯ ಮೇಲೆ ವಿಶ್ವಾಸ ಕಳೆದುಕೊಳ್ಳುವಂತೆ ಮಾಡುತ್ತದೆ. 

ಪ್ರಜಾಪ್ರಭುತ್ವದಲ್ಲಿ ಚುನಾವಣೆಯ ಸೋಲು ಅಥವಾ ಗೆಲುವು ಮುಖ್ಯವಲ್ಲ. ಮತದಾರರ ಪಟ್ಟಿಯಿಂದ ಒಬ್ಬ ಅರ್ಹ ನಾಗರಿಕನ ಹೆಸರನ್ನು ಅನ್ಯಾಯವಾಗಿ ತೆಗೆದುಹಾಕಿದರೂ ಅದು ಕೇವಲ ಒಂದು ಹೆಸರಿನ ಅಳಿಸುವಿಕೆಯಾಗಿರುವುದಿಲ್ಲ, ಅದು ಒಬ್ಬ ನಾಗರಿಕನ ಸಂವಿಧಾನಬದ್ಧ ಮತದಾನದ ಹಕ್ಕನ್ನು ಕಸಿದುಕೊಂಡಂತೆ ಆಗುತ್ತದೆ.

ಇದು ಬರೀ ಚುನಾವಣಾ ಪ್ರಕ್ರಿಯೆಗೆ ಸಂಬಂಧಿಸಿದ ವಿಚಾರವಲ್ಲ, ಭಾರತದ ಭವಿಷ್ಯ ಮತ್ತು ಪ್ರಜಾಪ್ರಭುತ್ವದ ಅಳಿವು - ಉಳಿವಿನ ಪ್ರಶ್ನೆ. ಹೀಗಾಗಿ ಚುನಾವಣಾ ಆಯೋಗದ ಇತ್ತೀಚಿನ ಕಾರ್ಯವೈಖರಿ, SIR ಪ್ರಕ್ರಿಯೆ, ಮತದಾರರ ಪಟ್ಟಿಯಲ್ಲಿನ ಬದಲಾವಣೆಗಳು ಮತ್ತು ಆಯೋಗದೊಳಗಿನ ಭಿನ್ನಾಭಿಪ್ರಾಯಗಳ ಕುರಿತು ಸಂಪೂರ್ಣ ಪಾರದರ್ಶಕತೆ, ಸಾರ್ವಜನಿಕ ವಿವರಣೆ ಮತ್ತು ಅಗತ್ಯವಿದ್ದರೆ ಸ್ವತಂತ್ರ ಪರಿಶೀಲನೆ ನಡೆಯಬೇಕು. 

ಚುನಾವಣಾ ಆಯೋಗವು ಯಾವುದೇ ಸರ್ಕಾರವೊಂದರ ಕೈಗೊಂಬೆಯಾಗಬಾರದು. ಭಾರತದ ಪ್ರಜಾಪ್ರಭುತ್ವವನ್ನು ಬಲಪಡಿಸಲು, ಚುನಾವಣಾ ವ್ಯವಸ್ಥೆಯ ವಿಶ್ವಾಸಾರ್ಹತೆಯನ್ನು ಕಾಪಾಡಲು ಮತ್ತು ಪ್ರತಿಯೊಬ್ಬ ಅರ್ಹ ಮತದಾರನ ಮತದಾನದ ಹಕ್ಕನ್ನು ರಕ್ಷಿಸಲು ಜವಾಬ್ದಾರಿಯಾಗಿರಬೇಕು. ಆಯೋಗವು ಈ ಕಾರ್ಯದಲ್ಲಿ ವಿಫಲವಾದರೆ ದೇಶದ ಪ್ರಜ್ಞಾವಂತ ಪ್ರಜೆಗಳಾದ ನಾವು ಧ್ವನಿ ಎತ್ತಲೇಬೇಕು, ಎತ್ತುತ್ತೇವೆ ಕೂಡ.

ಆದ್ದರಿಂದ, ಚುನಾವಣಾ ಆಯೋಗದ ನಿರ್ಧಾರಗಳಲ್ಲಿ ಮುಖ್ಯ ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್ ಅವರ ಸರ್ವಾಧಿಕಾರಿ ನಡೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಇಂತಹ ಅಧಿಕಾರಿಗಳಿಂದ ದೇಶದಲ್ಲಿ ಸ್ವತಂತ್ರ, ನಿಷ್ಪಕ್ಷಪಾತ, ಪಾರದರ್ಶಕ ಚುನಾವಣೆಗಳು ನಡೆಯಲು ಖಂಡಿತಾ ಸಾಧ್ಯವಿಲ್ಲ. ಮುಖ್ಯ ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್ ಅವರ ಸರ್ವಾಧಿಕಾರಿ ನಡೆಯಿಂದ ಮತದಾನದ ಸಾಂವಿಧಾನಿಕ ಹಕ್ಕಿಗೆ ಚ್ಯುತಿ ಬಂದಿದೆ. 

ಇಂತಹ ಅಧಿಕಾರಿಗಳಿಂದ ದೇಶದಲ್ಲಿ ಸ್ವತಂತ್ರ, ನಿಷ್ಪಕ್ಷಪಾತ, ಪಾರದರ್ಶಕ ಚುನಾವಣೆಗಳು ನಡೆಯಲು ಖಂಡಿತಾ ಸಾಧ್ಯವಿಲ್ಲ. ಈ ಸಾಂವಿಧಾನಿಕ ದ್ರೋಹವನ್ನು ಗಂಭೀರವಾಗಿ ಪರಿಗಣಿಸಿ ಸಂವಿಧಾನದ ರಕ್ಷಕರಾಗಿರುವ ಸನ್ಮಾನ್ಯ ರಾಷ್ಟ್ರಪತಿಗಳು ಜ್ಞಾನೇಶ್ ಕುಮಾರ್ ಅವರನ್ನು ತಕ್ಷಣವೇ ಪದಚ್ಯುತಗೊಳಿಸಿ ಅವರ ವಿರುದ್ಧ ತನಿಖೆ ನಡೆಸುವಂತೆ ಕೇಂದ್ರ ಸರ್ಕಾರಕ್ಕೆ ಆದೇಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಕ್ಲ್ಯಾಂಡ್ ಆಯ್ತು, ಈಗ ವೆಲ್ಲಿಂಗ್ಟನ್‌ನಲ್ಲೂ ವರುಣನದ್ದೇ ಆರ್ಭಟ: ಎರಡನೇ ಏಕದಿನ ಪಂದ್ಯಕ್ಕೆ ಕಂಟಕವಾದ ಹವಾಮಾನ!ಸೇವೆಯಲ್ಲಿರುವ ಅಗ್ನಿವೀರರಿಗೆ ಮಾತ್ರ ಹೊಸ ಬದಲಾವಣೆ‘ರಾಮಾಯಣ’ ಸಿನಿಮಾ ನೋಡಿ ಭಾವುಕರಾದ ಅನುಪಮ್ ಖೇರ್: ಭಾರತೀಯ ಚಿತ್ರರಂಗದ ಸರ್ವಶ್ರೇಷ್ಠ ಸಿನಿಮಾ ಎಂದ ನಟ!ಮುಂಬೈ ಅಂತರ ಶಾಲಾ ಬಾಸ್ಕೆಟ್‌ಬಾಲ್ ಧಮಾಕಾ: ಡಾನ್ ಬೊಸ್ಕೊ ಮಣಿಸಿ ಟ್ರೋಫಿ ಎತ್ತಿಹಿಡಿದ ಅಂಡೇರಿಯಾ ಎಂಪಿಎಸ್!Motorola Signature 27 Snapdragon 8 Elite Extreme Gen 6 ಮತ್ತು 200MP ಟೆಲಿಫೋಟೋ ಲೆನ್ಸ್‌ನೊಂದಿಗೆ ಅನಾವರಣಬಾಲಿವುಡ್ ಅಂಗಳದಲ್ಲಿ ಹೊಸ ಲವ್ ಸ್ಟೋರಿ: ಗೆಳತಿ ಜೊತೆ ಮನೀಶ್ ಮಲ್ಹೋತ್ರಾ ಪಾರ್ಟಿಯಲ್ಲಿ ಮಾಧುರಿ ದೀಕ್ಷಿತ್ ಮಗ!ಬ್ಯಾಂಕ್ ಲಾಕರ್’ ನಲ್ಲಿ ಇಟ್ಟಿದ್ದ ₹47 ಲಕ್ಷದ ಚಿನ್ನಾಭರಣ ನಾಪತ್ತೆ! ಮಹಿಳೆಯ ಹೋರಾಟಕ್ಕೆ ಕೊನೆಗೂ ಸಿಕ್ತು ಜಯ!ರಾಮಾಯಣ’ದಲ್ಲಿ ರಾಮನಾಗಿ ರಣಬೀರ್, ರಾವಣನಾಗಿ ಯಶ್; ಇಬ್ಬರಲ್ಲಿ ಶ್ರೀಮಂತ ನಟ ಯಾರು?ಕೈ ಕೈ ಹಿಡಿದು ಬಂದ ಐಶ್ವರ್ಯಾ ರೈ–ಅಭಿಷೇಕ್ ಜೋಡಿ; ರೊಮ್ಯಾಂಟಿಕ್ ಕ್ಷಣ ವೈರಲ್! ವಿಚ್ಛೇದನದ ವದಂತಿಗಳಿಗೆ ಬ್ರೇಕ್?ಆಸೀಸ್ ಕ್ರಿಕೆಟರ್ ಗೆ ಕೊಕೇನ್ ಶಾಕ್: ತಪ್ಪು ಒಪ್ಪಿಕೊಂಡು ನಿಷೇಧ ಪೂರ್ಣಗೊಳಿಸಿದ ಕ್ರಿಸ್ ಲಿನ್!