ಚಿತ್ರ ನಿರ್ಮಾಪಕ ವಾಶು ಭಗ್ನಾನಿ ಹಾಗೂ ಪನೋರಮಾ ಸ್ಟುಡಿಯೋಸ್‌ಗೆ ಸಂಬಂಧಿಸಿದಂತೆ ಐಟಿ ಇಲಾಖೆ ನಡೆಸುತ್ತಿರುವ ವಿದೇಶಿ ಚಿತ್ರ ನಿಧಿ ಅಕ್ರಮ ವ್ಯವಹಾರಗಳ ತನಿಖೆಯ ನಡುವೆ, ತಮ್ಮ ವಿರುದ್ಧ ಹರಿದಾಡುತ್ತಿರುವ ಸುದ್ದಿಗಳ ಕುರಿತು ಖ್ಯಾತ ನಟಿ ರಕುಲ್ ಪ್ರೀತ್ ಸಿಂಗ್ ಸಾಮಾಜಿಕ ಜಾಲತಾಣಗಳಲ್ಲಿ ಸ್ಪಷ್ಟನೆ ನೀಡಿದ್ದಾರೆ. ತಮಗೆ ಸಂಬಂಧಿಸಿದಂತೆ ಯಾವುದೇ ಐಟಿ ದಾಳಿ ನಡೆದಿಲ್ಲ ಎಂದು ಸ್ಪಷ್ಟಪಡಿಸಿರುವ ನಟಿ, ಸತ್ಯಾಸತ್ಯತೆ ಪರಿಶೀಲಿಸದೇ ಸುಳ್ಳು ಸುದ್ದಿ ಬಿತ್ತರಿಸುತ್ತಿರುವ ಮಾಧ್ಯಮಗಳು ಹಾಗೂ ಆನ್‌ಲೈನ್ ವರದಿಗಾರರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸೋಮವಾರ ಇನ್‌ಸ್ಟಾಗ್ರಾಮ್‌ನಲ್ಲಿ ದೀರ್ಘ ಬರಹ ಹಂಚಿಕೊಂಡಿರುವ ರಕುಲ್, “ನಾನು ಸೇನಾ ಹಿನ್ನೆಲೆಯಿಂದ ಬಂದವಳು, ಸಿನಿರಂಗದಲ್ಲಿ ನನಗೆ ಯಾವುದೇ ಗಾಡ್‌ಫಾದರ್ ಇರಲಿಲ್ಲ. ಸಂಪೂರ್ಣ ಸ್ವಂತ ಶ್ರಮದಿಂದ ಈ ಹಂತಕ್ಕೆ ಬೆಳೆದಿದ್ದೇನೆ. ಒಬ್ಬ ಜವಾಬ್ದಾರಿಯುತ ಹಾಗೂ ಕಾಯ್ದೆ ಪಾಲಿಸುವ ಪ್ರಜೆಯಾಗಿ ನನ್ನ ೨೦ನೇ ವಯಸ್ಸಿನಿಂದಲೂ ಬಾಕಿ ಇಲ್ಲದೆ ತೆರಿಗೆ ಪಾವತಿಸುತ್ತಾ ಬಂದಿದ್ದೇನೆ,” ಎಂದು ಮಾರ್ಮಿಕವಾಗಿ ಉತ್ತರಿಸಿದ್ದಾರೆ.
ಮುಂದುವರಿದು ಮಾತನಾಡಿದ ಅವರು, “ನನ್ನ ವೈಯಕ್ತಿಕ ಸಾಮರ್ಥ್ಯದಲ್ಲಾಗಲೀ ಅಥವಾ ಯಾವುದೇ ನಿರ್ಮಾಣ ಸಂಸ್ಥೆಯ ಪರವಾಗಿಯಾಗಲೀ ನಾನು ಯಾವುದೇ ರೀತಿಯ ಅಕ್ರಮ ವಿದೇಶಿ ಹಣ ವರ್ಗಾವಣೆಯಲ್ಲಿ ತೊಡಗಿಸಿಕೊಂಡಿಲ್ಲ. ಭಾರತದಲ್ಲಾಗಲಿ ಅಥವಾ ವಿದೇಶದಲ್ಲಾಗಲಿ ಯಾರ ಬೆನಾಮಿ ಆಸ್ತಿಯನ್ನೂ ನಾನು ಹೊಂದಿಲ್ಲ. ನನಗೆ ಯಾರೂ ಎಂದೂ ಯಾವುದೇ ಆಸ್ತಿಯನ್ನು ಉಡುಗೊರೆಯಾಗಿ ನೀಡಿಲ್ಲ, ಹಾಗೆ ನೀಡುವ ದುಬಾರಿ ಗಿಫ್ಟ್‌ಗಳನ್ನು ಸ್ವೀಕರಿಸದಿರುವುದು ನನ್ನ ತತ್ವ,” ಎಂದು ಖಡಕ್ ಆಗಿ ಸ್ಪಷ್ಟಪಡಿಸಿದ್ದಾರೆ. ಮಾಧ್ಯಮ ಸಂಸ್ಥೆಗಳಿಗೆ ವ್ಯವಹಾರಿಕ ಒತ್ತಡಗಳಿರಬಹುದು, ಆದರೆ ಅದು ಯಾರದ್ದೋ ಗೌರವ ಮತ್ತು ಜೀವನೋಪಾಯಕ್ಕೆ ಧಕ್ಕೆ ತರುವಂತಿರಬಾರದು ಎಂದಿರುವ ನಟಿ, ತಮ್ಮ ವಿರುದ್ಧ ಹರಿದಾಡುತ್ತಿರುವ ಸುಳ್ಳು ಹಾಗೂ ಕಲ್ಪಿತ ವರದಿಗಳನ್ನು ತಕ್ಷಣವೇ ಹಿಂಪಡೆಯುವಂತೆ ವಿನಂತಿಸಿದ್ದಾರೆ.