LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ರಾಜ್ಯದ ಗೃಹ ಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ಸರ್ಕಾರ ಗುಡ್ ನ್ಯೂಸ್

ಬೆಂಗಳೂರು: ರಾಜ್ಯ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷೆಯ ‘ಗೃಹಲಕ್ಷ್ಮಿ’ ಯೋಜನೆಯಡಿ ಮಹಿಳೆಯರ ಖಾತೆಗೆ ಜಮೆಯಾಗುವ ₹2,000 ಮೊತ್ತವನ್ನು ಯಾವುದೇ ಕಾರಣಕ್ಕೂ ಹಳೆಯ ಸಾಲದ ಕಂತು, ಬಡ್ಡಿ ಅಥವಾ ಇತರೆ ಬಾಕಿಗಳಿಗೆ ಜಮೆ ಮಾಡಿಕೊಳ್ಳಬಾರದು ಎಂದು ಮುಖ್ಯಮಂತ್ರಿಗಳ ಕಟ್ಟುನಿಟ್ಟಿನ ಸೂಚನೆ ಹಾಗೂ ಆದೇಶದ ಮೇರೆಗೆ ಸರ್ಕಾರವು ಮಹತ್ವದ ಆದೇಶ ಹೊರಡಿಸಿದೆ. ಈ ಸಂಬಂಧ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಾದ ಉಮಾ ಮಹಾದೇವನ್ ಅವರು ರಾಜ್ಯ ಮಟ್ಟದ ಬ್ಯಾಂಕರ್ಸ್ ಸಮಿತಿಗೆ (ಎಸ್‌ಎಲ್‌ಬಿಸಿ) ಖಡಕ್ ನಿರ್ದೇಶನ ನೀಡಿದ್ದಾರೆ.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷ ಹಾಗೂ ವಿಧಾನ ಪರಿಷತ್ ಶಾಸಕ ದಿನೇಶ್ ಗೂಳಿಗೌಡ ಅವರು ಸಲ್ಲಿಸಿದ್ದ ಮನವಿ ಪತ್ರಕ್ಕೆ ಮುಖ್ಯಮಂತ್ರಿಗಳು ತಕ್ಷಣವೇ ಸಕಾರಾತ್ಮಕವಾಗಿ ಸ್ಪಂದಿಸಿದ್ದರು. "ಬ್ಯಾಂಕ್ ಆಡಳಿತ ಮಂಡಳಿಗೆ ಪತ್ರ ಬರೆಯಿರಿ, ಗೃಹಲಕ್ಷ್ಮಿ ಫಲಾನುಭವಿಗಳ ಖಾತೆಯಿಂದ ಹಣವನ್ನು ಸಾಲದ ಕಂತಿಗೆ ಕಡಿತಗೊಳಿಸದಂತೆ ಸ್ಪಷ್ಟವಾಗಿ ತಿಳಿಸಿ" ಎಂದು ಮುಖ್ಯ ಕಾರ್ಯದರ್ಶಿಯವರಿಗೆ ಸಿಎಂ ನಿರ್ದೇಶನ ನೀಡಿದ್ದರು. ಮುಖ್ಯಮಂತ್ರಿಗಳ ಈ ಆದೇಶದ ಬೆನ್ನಲ್ಲೇ ಇದೀಗ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಉಮಾ ಮಹಾದೇವನ್ ಅವರು ರಾಜ್ಯ ಮಟ್ಟದ ಬ್ಯಾಂಕರ್ಸ್‌ ಸಮಿತಿಯ ಸಂಚಾಲಕರಿಗೆ ಅಧಿಕೃತ ಪತ್ರ ಬರೆದು, ರಾಜ್ಯದಲ್ಲಿರುವ ಎಲ್ಲಾ ವಾಣಿಜ್ಯ ಬ್ಯಾಂಕುಗಳು, ಸಹಕಾರಿ ಬ್ಯಾಂಕುಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಹಾಗೂ ಇತರೆ ಹಣಕಾಸು ಸಂಸ್ಥೆಗಳು ಕಡ್ಡಾಯವಾಗಿ ಪಾಲಿಸಬೇಕಾದ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಜಾರಿಗೊಳಿಸಿದ್ದಾರೆ.

ಸರ್ಕಾರ ನೀಡಿರುವ ಪ್ರಮುಖ ನಿರ್ದೇಶನಗಳು:

ಸಾಲಕ್ಕೆ ಹೊಂದಾಣಿಕೆ ನಿಷೇಧ: ಗೃಹಲಕ್ಷ್ಮಿ ಯೋಜನೆಯಡಿ ಫಲಾನುಭವಿಗಳ ಖಾತೆಗೆ ಜಮೆಯಾಗುವ ಮೊತ್ತವನ್ನು ಯಾವುದೇ ಕಾರಣಕ್ಕೂ ಸಾಲದ ಕಂತು, ಬಡ್ಡಿ ಅಥವಾ ಇತರೆ ಸಾಲದ ಬಾಕಿಗೆ ಹೊಂದಾಣಿಕೆ ಮಾಡಿಕೊಳ್ಳುವಂತಿಲ್ಲ.

ಆಟೋ ಡೆಬಿಟ್‌ಗೆ ನಿರ್ಬಂಧ: ಫಲಾನುಭವಿಯ ಖಾತೆಯಿಂದ ಸದರಿ ಮೊತ್ತವನ್ನು ಯಾವುದೇ ಕಾರಣಕ್ಕೂ ಸ್ವಯಂಚಾಲಿತವಾಗಿ ಡೆಬಿಟ್ (Auto-Debit) ಅಥವಾ ಹೊಂದಾಣಿಕೆ ಮಾಡದಂತೆ ಬ್ಯಾಂಕುಗಳು ಅಗತ್ಯ ತಾಂತ್ರಿಕ ಕ್ರಮಗಳನ್ನು ಕೈಗೊಳ್ಳಬೇಕು.

ಶಾಖಾ ಸಿಬ್ಬಂದಿಗೆ ಕಡ್ಡಾಯ ಸೂಚನೆ: ಗೃಹಲಕ್ಷ್ಮಿ ಹಣವು ಮಹಿಳೆಯರಿಗೆ ಸಂಪೂರ್ಣವಾಗಿ ತಲುಪುವಂತೆ ಎಲ್ಲಾ ಬ್ಯಾಂಕ್ ಶಾಖೆಗಳಿಗೆ ಹಾಗೂ ಸಂಬಂಧಪಟ್ಟ ಸಿಬ್ಬಂದಿಗೆ ಸ್ಪಷ್ಟ ಸೂಚನೆಗಳನ್ನು ರವಾನಿಸಬೇಕು.

ಕಡಿತವಾದ ಹಣ ತಕ್ಷಣ ಮರುಪಾವತಿ: ಫಲಾನುಭವಿಗಳ ಸ್ಪಷ್ಟ ಲಿಖಿತ ಒಪ್ಪಿಗೆಯಿಲ್ಲದೆ ಸಾಲದ ಬಾಕಿಗೆ ಈಗಾಗಲೇ ಕಡಿತಗೊಳಿಸಲಾಗಿರುವ ಹಣವನ್ನು ತಕ್ಷಣವೇ ಆಯಾ ಮಹಿಳೆಯರ ಖಾತೆಗೆ ಮರುಜಮೆ ಮಾಡಬೇಕು. ಈ ಕುರಿತು ಬ್ಯಾಂಕುಗಳಿಗೆ ಹಾಗೂ ಎಲ್ಲಾ ಜಿಲ್ಲಾ ಪಂಚಾಯಿತಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ (ಸಿಇಒ) ಈಗಾಗಲೇ ನಿರ್ದೇಶನ ನೀಡಲಾಗಿದೆ.

ಈ ಮೇಲ್ಕಂಡ ನಿರ್ದೇಶನಗಳನ್ನು ರಾಜ್ಯದ ಎಲ್ಲ ಬ್ಯಾಂಕುಗಳು ಹಾಗೂ ಹಣಕಾಸು ಸಂಸ್ಥೆಗಳು ಕಟ್ಟುನಿಟ್ಟಾಗಿ ಪಾಲಿಸುವಂತೆ ಸುತ್ತೋಲೆ ಹೊರಡಿಸಿ, ಕೈಗೊಂಡ ಕ್ರಮದ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಎಸ್‌ಎಲ್‌ಬಿಸಿ ಸಂಚಾಲಕರಿಗೆ ಸೂಚಿಸಲಾಗಿದೆ. ಈ ಪತ್ರದ ಪ್ರತಿಯನ್ನು ಮಾಹಿತಿ ಹಾಗೂ ಸೂಕ್ತ ಮುಂದಿನ ಕ್ರಮಕ್ಕಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳು, ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು (ಡಿಸಿ) ಹಾಗೂ ಎಲ್ಲಾ ಜಿಲ್ಲಾ ಪಂಚಾಯಿತಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ (ಸಿಇಒ) ರವಾನಿಸಲಾಗಿದೆ.

ದಿನೇಶ್ ಗೂಳಿಗೌಡ ಅವರ ಮನವಿಯಲ್ಲೇನಿತ್ತು?

ವಿಧಾನ ಪರಿಷತ್ ಶಾಸಕ ದಿನೇಶ್ ಗೂಳಿಗೌಡ ಅವರು ಮುಖ್ಯಮಂತ್ರಿಗಳಿಗೆ ಸಲ್ಲಿಸಿದ್ದ ಮನವಿ ಪತ್ರದಲ್ಲಿ, ಗೃಹಲಕ್ಷ್ಮಿ ಹಣ ಕಡಿತದಿಂದ ಬಡ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳನ್ನು ವಿಸ್ತೃತವಾಗಿ ವಿವರಿಸಿದ್ದರು:

 ಮೂಲ ಉದ್ದೇಶಕ್ಕೆ ಧಕ್ಕೆ: ಪ್ರತಿ ತಿಂಗಳು ಮಹಿಳೆಯರ ಖಾತೆಗೆ ಜಮೆಯಾಗುವ ₹2,000 ಹಣವು ಬಡ ಕುಟುಂಬಗಳ ನಿತ್ಯದ ಅಗತ್ಯಗಳು, ಮಕ್ಕಳ ಶಿಕ್ಷಣ ಹಾಗೂ ಮಹಿಳೆಯರ ಸ್ವಾವಲಂಬನೆಗೆ ಬಳಕೆಯಾಗಬೇಕಿದೆ. ಆದರೆ, ಬ್ಯಾಂಕುಗಳು ಹಾಗೂ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಹಳೆಯ ಸಾಲದ ನೆಪವೊಡ್ಡಿ ಹಣ ಕಡಿತಗೊಳಿಸುತ್ತಿರುವುದು ಯೋಜನೆಯ ಮೂಲ ಆಶಯಕ್ಕೆ ಧಕ್ಕೆ ತರುತ್ತಿದೆ.

 ಬ್ಯಾಂಕುಗಳಿಗೆ ಸರ್ಕಾರದ ಕಠಿಣ ಸುತ್ತೋಲೆ: ಎಸ್‌ಎಲ್‌ಬಿಸಿ ಮೂಲಕ ಎಲ್ಲಾ ಬ್ಯಾಂಕುಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿ, ಫಲಾನುಭವಿಗಳು ಹಣವನ್ನು ಮುಕ್ತವಾಗಿ ಡ್ರಾ ಮಾಡಲು ಅವಕಾಶ ಕಲ್ಪಿಸಬೇಕು.

 ಮೈಕ್ರೋ ಫೈನಾನ್ಸ್ ಹಾವಳಿಗೆ ಬ್ರೇಕ್: ಮಹಿಳೆಯರ ಖಾತೆಗೆ ಹಣ ಬಂದ ತಕ್ಷಣ ಸ್ಥಳದಲ್ಲೇ ಬಲವಂತವಾಗಿ ವಸೂಲಿ ಮಾಡುವ ಅಥವಾ ಬೆದರಿಕೆ ಒಡ್ಡುವ ಖಾಸಗಿ ಫೈನಾನ್ಸ್ ಸಂಸ್ಥೆಗಳ ವಿರುದ್ಧ ಸುಲಿಗೆ ಪ್ರಕರಣ ದಾಖಲಿಸಿ, ಪರವಾನಗಿ ರದ್ದುಪಡಿಸಬೇಕು.

 ಕಡಿತವಾದ ಹಣ ಮರುಪಾವತಿ: ಫಲಾನುಭವಿಗಳ ಲಿಖಿತ ಒಪ್ಪಿಗೆಯಿಲ್ಲದೆ ಕಡಿತ ಮಾಡಿಕೊಂಡ ಹಣವನ್ನು ತಕ್ಷಣವೇ ಮರುಜಮೆ ಮಾಡಲು ಬ್ಯಾಂಕುಗಳಿಗೆ ಜಿ.ಪಂ. ಸಿಇಒಗಳು ಸೂಚಿಸಬೇಕು.

 ಮೇಲುಸ್ತುವಾರಿ ಹಾಗೂ ಪ್ರಗತಿ ಪರಿಶೀಲನೆ: ಅಕ್ರಮ ಹಣ ಕಡಿತ ಪ್ರಕರಣಗಳ ಬಗ್ಗೆ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ನಿಗಾ ವಹಿಸಬೇಕು ಹಾಗೂ ಗ್ಯಾರಂಟಿ ಸಮಿತಿಗಳ ಪ್ರಗತಿ ಪರಿಶೀಲನಾ ಸಭೆಗಳಲ್ಲಿ ಇದನ್ನು ತಪ್ಪದೆ ಪರಿಶೀಲಿಸಬೇಕು ಎಂದು ದಿನೇಶ್ ಗೂಳಿಗೌಡ ಮುಕ್ಯಮಂತ್ರಿಗಳಿಗೆ ಮನವಿ ಮಾಡಿದ್ದರು

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಾಗರದ ತುಮರಿಯಲ್ಲಿ ಇಂದಿರಾ ವಸತಿ ಶಾಲೆಗೆ ಶಾಸಕ ಗೋಪಾಲಕೃಷ್ಣ ಬೇಳೂರು ಶಿಲಾನ್ಯಾಸNPS ಸ್ವಾಸ್ಥ್ಯ ಯೋಜನೆ: ಆರೋಗ್ಯ ನಿಧಿ ಜೊತೆಗೆ 30 ಲಕ್ಷ ರೂ.ವರೆಗೆ ಸೂಪರ್ ಟಾಪ್ಅಪ್ ವಿಮಾ ರಕ್ಷಣೆ37 ಎಸೆತಗಳಲ್ಲಿ ಸ್ಪೋಟಕ ಶತಕ ಸಿಡಿಸಿದ ಎಬಿ ಡಿವಿಲಿಯರ್ಸ್: ಆಸ್ಟ್ರೇಲಿಯಾ ವಿರುದ್ಧ ದಕ್ಷಿಣ ಆಫ್ರಿಕಾಗೆ 8 ವಿಕೆಟ್ ಜಯಉಪ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು: ಮತದಾರರಿಗೆ ಪ್ರಧಾನಿ ಮೋದಿ ಕೃತಜ್ಞತೆರಾಜ್ಯಸಭಾ ಚುನಾವಣೆ: ಮೂರು ರಾಜ್ಯಗಳಲ್ಲಿ 10 ಸ್ಥಾನಗಳನ್ನು ಅವಿರೋಧವಾಗಿ ಗೆದ್ದ ಬಿಜೆಪಿBIG BREAKING: ರಾಜ್ಯದ ಜಿಲ್ಲಾ, ತಾಲ್ಲೂಕು ಪಂಚಾಯ್ತಿ ಕ್ಷೇತ್ರವಾರು ಮೀಸಲಾತಿ ಕರಡು ಅಧಿಸೂಚನೆ ಪ್ರಕಟ: ಪರಿಶೀಲನೆ ಹೇಗೆ? ಇಲ್ಲಿದೆ ಮಾಹಿತಿಸಿಜೆಪಿ ಪ್ರತಿಭಟನೆ ಹಿನ್ನೆಲೆ ಇಂದು ರಾತ್ರಿ 10 ಗಂಟೆಯಿಂದ ಮಧ್ಯ ದೆಹಲಿಯಲ್ಲಿ ಇಂಟರ್ನೆಟ್ ಸೇವೆ ಸ್ಥಗಿತಹಬ್ಬಕ್ಕೆ ಉಚಿತ LPG ಸಿಲಿಂಡರ್, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ ಸೀರೆ ಸೇರಿ ಹಲವು ಯೋಜನೆಗಳಿಗೆ ಯೋಗಿ ಸಂಪುಟ ಅನುಮೋದನೆನಾವು ಪ್ರತಿಭಟನೆ ಮಾಡೇ ಮಾಡ್ತೇವೆ: ನಮ್ಮ ಆಂದೋಲನ ನಿಲ್ಲುವುದಿಲ್ಲ: ಮೂಲಭೂತ ಹಕ್ಕಿಗೆ ಅನುಮತಿ ಅಗತ್ಯವಿಲ್ಲ ಎಂದ ಸಿಜೆಪಿ ನಾಯಕ ಅಭಿಜಿತ್ ದಿಪ್ಕೆವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: JNU ಪ್ರಾಧ್ಯಾಪಕ, ಸಂಸದ ಅಂಗೋಮ್ಚಾ ಬಿಮೋಲ್ ಅಕೋಯಿಜಮ್ ವಜಾ