ಬೆಂಗಳೂರು: ಮದುವೆಯಾಗುವುದಾಗಿ ನಂಬಿಸಿ ಯುವತಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಜೀವಬೆದರಿಕೆ ಹಾಕಿದ ಗಂಭೀರ ಆರೋಪದಡಿ ಮದ್ದಾವಣಪುರ ದೇವವೀರ ಸಂಸ್ಥಾನ ಮಠದ ಗುರುನಂಜೇಶ್ವರ ಶಿವಾಚಾರ್ಯ ಸ್ವಾಮೀಜಿ ಆಲಿಯಾಸ್ ದಯಾನಂದ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತ ಯುವತಿ ನೀಡಿದ ದೂರಿನನ್ವಯ ಬೆಂಗಳೂರಿನ ಈಶಾನ್ಯ ವಿಭಾಗದ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ತನಿಖೆ ಚುರುಕುಗೊಂಡಿದೆ.
ಬಾಲ್ಯದಿಂದಲೇ ಮಠದೊಂದಿಗೆ ಒಡನಾಟ
ದೂರಿನಲ್ಲಿ ಉಲ್ಲೇಖವಾಗಿರುವ ಮಾಹಿತಿಯ ಪ್ರಕಾರ, ಸಂತ್ರಸ್ತೆಯು ಆರೋಪಿ ಸ್ವಾಮೀಜಿಗೆ ದೂರದ ಸಂಬಂಧಿಯಾಗಿದ್ದು, 10 ವರ್ಷದ ಬಾಲಕಿಯಾಗಿದ್ದಾಗಿನಿಂದಲೇ ಹುಣಸಮಾರನಹಳ್ಳಿ ಮಠದ ಬಳಿ ತನ್ನ ಅತ್ತೆಯ ಮನೆಯಲ್ಲಿ ವಾಸವಾಗಿದ್ದರು. ಅಲ್ಲದೆ, ಹುಣಸಮಾರನಹಳ್ಳಿ ಮಠಕ್ಕೆ ಸೇರಿದ ಶಿಕ್ಷಣ ಸಂಸ್ಥೆಗಳಲ್ಲೇ ಆಕೆ ಶಾಲಾ-ಕಾಲೇಜು ವ್ಯಾಸಂಗವನ್ನೂ ಪೂರ್ಣಗೊಳಿಸಿದ್ದರು. ಈ ಹಿನ್ನೆಲೆಯಲ್ಲಿ ಗುರುನಂಜೇಶ್ವರ ಸ್ವಾಮೀಜಿ ಹಾಗೂ ಅವರ ಕುಟುಂಬದ ಸದಸ್ಯರೊಂದಿಗೆ ಯುವತಿಗೆ ಆಪ್ತ ಒಡನಾಟವಿತ್ತು.
ಮೈಸೂರು ಪ್ರವಾಸ ಮತ್ತು ಮದುವೆಯ ಭರವಸೆ
2023 ರಲ್ಲಿ ಸ್ವಾಮೀಜಿ ಮತ್ತು ಕುಟುಂಬದ ಸದಸ್ಯರೊಂದಿಗೆ ಸಂತ್ರಸ್ತೆಯೂ ಮೈಸೂರು ಪ್ರವಾಸಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಆರೋಪಿ ಸ್ವಾಮೀಜಿ ಯುವತಿಯ ಫೋಟೋಗಳನ್ನು ತೆಗೆದುಕೊಂಡಿದ್ದರು. ಆ ಬಳಿಕ ಫೋನ್ ಕರೆ ಮತ್ತು ಮೆಸೇಜ್‌ಗಳ ಮೂಲಕ ಯುವತಿಯೊಂದಿಗೆ ಸಂಪರ್ಕ ಸಾಧಿಸಿ ಸಲುಗೆ ಬೆಳೆಸಿಕೊಂಡಿದ್ದರು. "ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ, ಮದುವೆಯಾಗುತ್ತೇನೆ" ಎಂದು ನಂಬಿಸಿ ಆಕೆಯ ವಿಶ್ವಾಸ ಗಳಿಸಿದ್ದರು.
ಸಿಸಿಟಿವಿ ಆಫ್ ಮಾಡಿ ಲೈಂಗಿಕ ದೌರ್ಜನ್ಯ, ಜೀವಬೆದರಿಕೆ
ಸ್ವಾಮೀಜಿಯ ಮಾತುಗಳನ್ನು ನಂಬಿದ ಯುವತಿಯೊಂದಿಗೆ 2025 ರಿಂದ ಆರೋಪಿ ದೈಹಿಕ ಸಂಪರ್ಕ ಬೆಳೆಸಿದ್ದರು. ಮಠದ ಸಿಸಿಟಿವಿ ಕ್ಯಾಮೆರಾಗಳನ್ನು ಆಫ್ ಮಾಡಿ ಕೃತ್ಯವೆಸಗಿದ್ದಲ್ಲದೆ, ಕಾರಿನಲ್ಲಿ ಹೊರಗೆ ಕರೆದೊಯ್ದು ಲೈಂಗಿಕವಾಗಿ ಬಳಸಿಕೊಂಡಿದ್ದರು ಎನ್ನಲಾಗಿದೆ. ನಂತರ ಯುವತಿ ಮದುವೆಯಾಗುವಂತೆ ಒತ್ತಾಯಿಸಿದಾಗ ಸ್ವಾಮೀಜಿ ವಿವಾಹವಾಗಲು ನಿರಾಕರಿಸಿದ್ದರು. ವಿಷಯವನ್ನು ಯಾರಿಗಾದರೂ ಬಾಯಿಬಿಟ್ಟರೆ ಜೀವಸಹಿತ ಉಳಿಸುವುದಿಲ್ಲ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದರು.
ಹಣ ಪಡೆದು ಜಾಗ ಖಾಲಿ ಮಾಡಲು ಆಪ್ತನಿಂದ ಎಚ್ಚರಿಕೆ
2026ರ ಏಪ್ರಿಲ್ 2 ರಂದು ಗುರುನಂಜೇಶ್ವರ ಸ್ವಾಮೀಜಿಯ ಆಪ್ತ ಜಗದೀಶ್ ಎಂಬಾತ ಯುವತಿಯ ಬಳಿ ಬಂದು, "ಸ್ವಾಮೀಜಿ ನಿನ್ನನ್ನು ಮದುವೆಯಾಗಲು ಸಾಧ್ಯವಿಲ್ಲ. ನೀನು ಬೇರೆ ಯಾರನ್ನಾದರೂ ಮದುವೆಯಾಗಿ ಹೋಗು, ಇಲ್ಲದಿದ್ದರೆ ನಾವು ಕೊಡುವ ಹಣವನ್ನು ಪಡೆದುಕೊಂಡು ತಕ್ಷಣವೇ ಮನೆ ಖಾಲಿ ಮಾಡು" ಎಂದು ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಮಹಿಳಾ ಠಾಣೆಗೆ ದೂರು, ಆರೋಪಿ ಸ್ವಾಮೀಜಿ ಸೆರೆ
ಮದುವೆಯಾಗುವುದಾಗಿ ವಂಚಿಸಿ ಲೈಂಗಿಕ ಶೋಷಣೆ ನಡೆಸಿದಲ್ಲದೆ ಜೀವಬೆದರಿಕೆ ಹಾಕಿದ್ದರಿಂದ ಕಂಗಾಲಾದ ಸಂತ್ರಸ್ತೆ, ತಮಗೆ ನ್ಯಾಯ ದೊರಕಿಸಿಕೊಡುವಂತೆ ಈಶಾನ್ಯ ವಿಭಾಗದ ಮಹಿಳಾ ಠಾಣೆಗೆ ದೂರು ನೀಡಿದ್ದಾರೆ. ಯುವತಿಯ ದೂರಿನನ್ವಯ ಗುರುನಂಜೇಶ್ವರ ಶಿವಾಚಾರ್ಯ ಸ್ವಾಮೀಜಿ ಹಾಗೂ ಆತನ ಆಪ್ತ ಜಗದೀಶ್ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಪ್ರಮುಖ ಆರೋಪಿ ಗುರುನಂಜೇಶ್ವರ ಸ್ವಾಮೀಜಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.