ಬೆಂಗಳೂರು: ರಾಜ್ಯ ಬಿಜೆಪಿ ಘಟಕದ ಮಾಜಿ ವಕ್ತಾರ ಎಂ.ಜಿ. ಮಹೇಶ್ ಅವರ ಮೇಲಿದ್ದ ಆರು ವರ್ಷಗಳ ಉಚ್ಚಾಟನೆ ಆದೇಶವನ್ನು ರಾಜ್ಯ ಬಿಜೆಪಿ ಶಿಸ್ತು ಸಮಿತಿಯು ಇದೀಗ ಅಧಿಕೃತವಾಗಿ ಹಿಂಪಡೆದಿದೆ. ಜೂನ್ ತಿಂಗಳಿನಲ್ಲಿ ಅವರಿಗೆ ನೋಟಿಸ್ ನೀಡಲಾಗಿತ್ತು ಹಾಗೂ ಅವರು ನೀಡಿದ್ದ ಸಮಜಾಯಿಷಿ ಸಮಂಜಸವಾಗಿಲ್ಲ ಎಂಬ ಕಾರಣಕ್ಕೆ ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟನೆ ಮಾಡಿ ಆದೇಶ ಹೊರಡಿಸಲಾಗಿತ್ತು. ಆದರೆ, ಈ ನಿರ್ಧಾರವನ್ನು ಮರುಪರಿಶೀಲಿಸುವಂತೆ ಎಂ.ಜಿ. ಮಹೇಶ್ ಅವರು ನೀಡಿದ ವಿವರವಾದ ಹಾಗೂ ಸಮಗ್ರ ಉತ್ತರಕ್ಕೆ ಬಿಜೆಪಿ ಶಿಸ್ತು ಸಮಿತಿ ತೃಪ್ತಿ ವ್ಯಕ್ತಪಡಿಸಿದ್ದು, ಅವರ ಮೇಲಿದ್ದ ಉಚ್ಚಾಟನೆಯನ್ನು ರದ್ದುಗೊಳಿಸಿದೆ.
ಉಚ್ಚಾಟನೆ ಆದೇಶ ಹಿಂಪಡೆದಿರುವ ಕುರಿತು ಸ್ಪಷ್ಟನೆ ನೀಡಿರುವ ರಾಜ್ಯ ಶಿಸ್ತು ಸಮಿತಿಯ ಅಧ್ಯಕ್ಷ ಲಿಂಗರಾಜ್ ಪಾಟೀಲ್ ಅವರು, "ಮಹೇಶ್ ಅವರು ನೀಡಿದ ಮರುಪರಿಶೀಲನಾ ಉತ್ತರವು ಸಮಿತಿಗೆ ಸಮಾಧಾನ ತಂದಿದೆ. ಹೀಗಾಗಿ ಅವರ ಮೇಲಿದ್ದ ಉಚ್ಚಾಟನೆ ಆದೇಶವನ್ನು ವಾಪಸ್ ಪಡೆಯಲಾಗಿದೆ. ಇನ್ಮುಂದೆ ಅವರು ಪಕ್ಷದ ಎಲ್ಲಾ ಅಧಿಕೃತ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಲಿದ್ದಾರೆ. ಅವರ ಸುದೀರ್ಘ ಅನುಭವ ಮತ್ತು ಕ್ರಿಯಾಶೀಲತೆಯು ಬಿಜೆಪಿಯನ್ನು ಮತ್ತಷ್ಟು ಸದೃಢಗೊಳಿಸಲು ಶ್ರಮಿಸಲಿದೆ ಎಂಬ ಭರವಸೆ ಇದೆ" ಎಂದು ತಿಳಿಸಿದ್ದಾರೆ.