ಬೆಂಗಳೂರು: ಕಾಲೇಜಿನಲ್ಲಿ ಗಣೇಶ ಪ್ರತಿಷ್ಠಾಪಿಸಿದ್ದೇವೆ ಎಂದು ಮನೆಯಲ್ಲಿ ಸುಳ್ಳು ಹೇಳಿ ಸ್ನೇಹಿತರೊಂದಿಗೆ ಹೆಸರಘಟ್ಟ ಕೆರೆಗೆ ಈಜಲು ತೆರಳಿದ್ದ ಇಪ್ಪತ್ತು ವರ್ಷದ ಕಾಲೇಜು ವಿದ್ಯಾರ್ಥಿಯೊಬ್ಬ ನೀರಿನಲ್ಲಿ ಮುಳುಗಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನಲ್ಲಿ ನಡೆದಿದೆ. ಬೆಂಗಳೂರಿನ ಕಾಮಾಕ್ಷಿಪಾಳ್ಯದ ನಿವಾಸಿ ವಿಶ್ವನಾಥ್ ಮತ್ತು ಭವ್ಯ ದಂಪತಿಯ ಪುತ್ರ ಹರ್ಷ (20) ಮೃತ ದುರ್ದೈವಿ.
ಸೋಮವಾರ ಮನೆಯಲ್ಲಿ ದೇವರ ಪೂಜೆ ಮುಗಿಸಿ ಹೊರಟ ಹರ್ಷ, ತಾಯಿಗೆ ಕಾಲೇಜಿನಲ್ಲಿ ಗಣೇಶ ಕೂರಿಸಿದ್ದೇವೆ ಎಂದು ತಿಳಿಸಿದ್ದನು. ಆದರೆ ಕಾಲೇಜಿಗೆ ಹೋಗುವ ಬದಲು ಸ್ನೇಹಿತರೊಂದಿಗೆ ಹೆಸರಘಟ್ಟ ಕೆರೆಗೆ ತೆರಳಿದ್ದ ಆತನಿಗೆ ಈಜು ಸರಿಯಾಗಿ ಬಾರದ ಕಾರಣ ನೀರಿನ ಆಳಕ್ಕೆ ಕುಸಿದು ಪ್ರಾಣ ಕಳೆದುಕೊಂಡಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಸೋಲದೇವನಹಳ್ಳಿ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ, ಮುಳುಗು ತಜ್ಞ ಈಶ್ವರ್ ಮಲ್ಪೆ ಅವರ ನೆರವಿನಿಂದ ಶೋಧ ನಡೆಸಿ ಮೃತದೇಹವನ್ನು ಹೊರತೆಗೆದಿದ್ದಾರೆ.
ಪ್ರಸ್ತುತ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಈ ಸಂಬಂಧ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಕಣ್ಣುಮುಚ್ಚಿ ತೆರೆಯುವುದರೊಳಗೆ ಏಕೈಕ ಮಗನನ್ನು ಕಳೆದುಕೊಂಡ ಪೋಷಕರ ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.