ಬೆಂಗಳೂರು: ಅಂತರ್ಜಾತಿ ವಿವಾಹಕ್ಕೆ ಪೋಷಕರ ವಿರೋಧ ಹಾಗೂ ಪ್ರಿಯಕರನೇ ಕೈಕೊಟ್ಟ ಹಿನ್ನೆಲೆಯಲ್ಲಿ ಮನನೊಂದ ಯುವತಿಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಸೂರ್ಯ ಎಂಬ ಪ್ರಿಯಕರನ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿವೆ. ಬೆಂಗಳೂರಿನಲ್ಲಿ ನಡೆದಿರುವ ಈ ಹೃದಯ ವಿದ್ರಾವಕ ಘಟನೆಯು ಸದ್ಯ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಚನ್ನರಾಯಪಟ್ಟಣ ತಾಲೂಕಿನ ಕಲ್ಲೇಸೋಮಹಳ್ಳಿ ಗ್ರಾಮದ ಸೂರ್ಯ (26) ಹಾಗೂ ಕಾಸರಗೋಡು ಮೂಲದ ಯುವತಿ ಬೆಂಗಳೂರಿನಲ್ಲಿ ಖಾಸಗಿ ಉದ್ಯೋಗದಲ್ಲಿದ್ದರು. ಪರಿಚಯದ ಬಳಿಕ ಕಳೆದ ಐದು ತಿಂಗಳಿಂದ ಇಬ್ಬರೂ ಲಿವ್-ಇನ್ ರಿಲೇಷನ್‌ಶಿಪ್‌ನಲ್ಲಿದ್ದರು. ಈ ವಿಷಯವನ್ನು ಸೂರ್ಯ ತನ್ನ ಪೋಷಕರಿಗೂ ತಿಳಿಸಿದ್ದು, ಮೊದಲು ಮದುವೆಗೆ ಒಪ್ಪಿಗೆ ಸೂಚಿಸಿದ್ದರು ಎನ್ನಲಾಗಿದೆ. ಆದರೆ, ಯುವತಿಯ ತಾಯಿ ಈ ಮದುವೆಗೆ ನಿರಾಕರಿಸಿ ಮಗಳ ಜೊತೆ ಸಂಪರ್ಕ ಕಡಿದುಕೊಂಡಿದ್ದರು. ನಂತರ ಸೂರ್ಯನ ಸ್ನೇಹಿತ ಪ್ರವೀಣ್ ಎಂಬಾತ ಸೂರ್ಯನ ಪೋಷಕರ ಬಳಿ ಯುವತಿಯ ಬಗ್ಗೆ ಇಲ್ಲಸಲ್ಲದ ವಿನಾಕಾರಣ ಅಪಪ್ರಚಾರ ಮಾಡಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ.
ಈ ಎಲ್ಲ ಬೆಳವಣಿಗೆಗಳ ನಡುವೆ, ಕಳೆದ ಸೆಪ್ಟೆಂಬರ್ 24ರಂದು ಸೂರ್ಯ ತನ್ನ ಮೊಬೈಲ್ ಫೋನ್ ಅಲ್ಲೇ ಬಿಟ್ಟು ದಿಢೀರ್ ನಾಪತ್ತೆಯಾಗಿದ್ದಾನೆ. ಆತನ ಪೋಷಕರನ್ನು ಸಂಪರ್ಕಿಸಿ ಪ್ರಶ್ನಿಸಿದಾಗ, "ನನಗೇನು ಗೊತ್ತಿಲ್ಲ, ಪದೇ ಪದೇ ಫೋನ್ ಮಾಡಿದರೆ ಸರಿಯಿರಲ್ಲ" ಎಂದು ಬೆದರಿಕೆ ಹಾಕಿದ್ದಲ್ಲದೆ, ಯುವತಿಯ ವಿರುದ್ಧವೇ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದರಿಂದ ತೀವ್ರ ಮಾನಸಿಕ ನೊಂದ ಯುವತಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಇಷ್ಟೆಲ್ಲಾ ಅನಾಹುತ ನಡೆದರೂ ಪ್ರಿಯಕರ ಸೂರ್ಯ ಮಾತ್ರ ಇನ್ನೂ ಪತ್ತೆಯಾಗಿಲ್ಲ. ಇದರಿಂದ ರೋಸಿಹೋಗಿರುವ ಯುವತಿ ವೀಡಿಯೋ ಒಂದನ್ನು ಮಾಡಿದ್ದು, "ಬರುವ ಗುರುವಾರದವರೆಗೂ ಕಾಯುತ್ತೇನೆ. ಸೂರ್ಯ ಬಂದು ನನ್ನನ್ನು ಮದುವೆಯಾಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ನನ್ನ ಸಾವಿಗೆ ಸೂರ್ಯ, ಆತನ ಪೋಷಕರು ಹಾಗೂ ಸ್ನೇಹಿತ ಪ್ರವೀಣ್ ಕಾರಣ" ಎಂದು ಕಣ್ಣೀರಿಟ್ಟಿದ್ದಾಳೆ. ಹದಿನೈದು ದಿನಗಳಿಂದ ನಿದ್ದೆ-ಊಟವಿಲ್ಲದೆ ನರಳುತ್ತಿದ್ದು, ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾನೆ ಎಂದು ಅಳಲು ತೋಡಿಕೊಂಡಿರುವ ಯುವತಿ, ಈ ಕುರಿತು ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಗೆ ಅಧಿಕೃತ ದೂರು ದಾಖಲಿಸಿದ್ದಾರೆ.