ಬೆಂಗಳೂರು: ರಾಜ್ಯದಲ್ಲಿ ಭಾರೀ ಸಂಚಲನ ಮೂಡಿಸಿದ್ದ 2003ರ ಕುಖ್ಯಾತ ಶುಭಾ ಶಂಕರ್ ಕೊಲೆ ಪ್ರಕರಣವು ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ವಿಧಾನಸೌಧದಲ್ಲಿಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ, ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ದೋಷಿಗಳಾದ ಶುಭಾ ಶಂಕರ್ ಮತ್ತು ಡಿ. ಅರುಣ್ ವರ್ಮ ಅವರಿಗೆ ಕ್ಷಮಾದಾನ ನೀಡುವ ಕುರಿತು ಚರ್ಚೆ ನಡೆಯುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ತಮ್ಮ ಭಾವಿ ಪತಿ ಗಿರೀಶ್ ಕೊಲೆ ಪ್ರಕರಣದಲ್ಲಿ ದೋಷಿಯಾಗಿರುವ ಶುಭಾ ಶಂಕರ್ ಹಾಗೂ ಸಹ-ಅಪರಾಧಿ ಡಿ. ಅರುಣ್ ವರ್ಮ ಅವರು ಶಿಕ್ಷೆಯಿಂದ ವಿನಾಯಿತಿ ಕೋರಿ ರಾಜ್ಯಪಾಲರಿಗೆ ಕ್ಷಮಾದಾನ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಸರ್ಕಾರದ ಪರಿಶೀಲನೆಗೆ ಕಳುಹಿಸಲಾಗಿದ್ದು, ಇಂದು ನಡೆಯುವ ಸಂಪುಟ ಸಭೆಯಲ್ಲಿ ಈ ಕುರಿತು ಗಂಭೀರ ಚರ್ಚೆ ನಡೆದು ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.