ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿರುವ ‘ಸ್ಟಿಂಗ್ ಆಪರೇಷನ್’ ಪ್ರಕರಣ ಇದೀಗ ನಾಯಕರ ನಡುವಿನ ಹಸಿಸರ ಸವಾಲು, ಆರೋಪ-ಪ್ರತ್ಯಾರೋಪಗಳಿಗೆ ಕಾರಣವಾಗಿದೆ. ಪ್ರಕರಣದ ಕುರಿತು ತನಿಖೆಗೆ ಆಗ್ರಹಿಸುತ್ತಿದ್ದಂತೆ ತಮ್ಮ ಪಕ್ಷವನ್ನು ಗುರಿಯಾಗಿಸಿಕೊಂಡು 'ಟಾರ್ಗೆಟ್ ಪಾಲಿಟಿಕ್ಸ್' ನಡೆಸಲಾಗುತ್ತಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಮೂರನೇ ಕಣ್ಣಿನ ಆಟಕ್ಕೆ ಮುಖ್ಯಮಂತ್ರಿಯೇ ಮೂಲ ಕಾರಣವಾಗಿದ್ದು, ಸಿಎಂ ಡಿಕೆ ಶಿವಕುಮಾರ್ ಅವರೇ 'ಸ್ಟಿಂಗ್ ಸಾಮ್ರಾಟ್' ಎಂದು ಗಂಭೀರ ಆರೋಪ ಮಾಡಿದ್ದಾರೆ. ತಾವು ಯಾವುದಕ್ಕೂ ಜಗ್ಗುವುದಿಲ್ಲ ಮತ್ತು ಬಗ್ಗುವುದಿಲ್ಲ ಎಂದು ಎಚ್‌ಡಿಕೆ ಬಹಿರಂಗ ಸವಾಲು ಎಸೆದಿದ್ದಾರೆ.
ಸ್ಟಿಂಗ್ ಆಪರೇಷನ್ ಬೆನ್ನಲ್ಲೇ ಸಿಸಿಬಿ ಪೊಲೀಸರು ಜೆಡಿಎಸ್‌ನ ಐಟಿ ಸೆಲ್ ಕಾರ್ಯಕರ್ತ ಶಂಕರ್ ಹಾಗೂ ಕ್ಲರ್ಕ್ ಮೋಹನ್ ಸೇರಿದಂತೆ ಮೂವರನ್ನು ವಶಕ್ಕೆ ಪಡೆದು ಅಜ್ಞಾತ ಸ್ಥಳದಲ್ಲಿ ಡಿಸಿಪಿ ರ‍್ಯಾಂಕ್ ಅಧಿಕಾರಿಯಿಂದ ತೀವ್ರ ವಿಚಾರಣೆ ನಡೆಸಿದ್ದಾರೆ. ಸಿದ್ದರಾಮಯ್ಯ ನೀಡಿದ್ದ ದೂರಿನ ಆಧಾರದಲ್ಲಿ ದಾಖಲಾದ ಎಫ್‌ಐಆರ್ ಹಿನ್ನೆಲೆಯಲ್ಲಿ ಈ ತನಿಖೆ ನಡೆಯುತ್ತಿದ್ದು, ಸ್ಟಿಂಗ್ ಹಿಂದಿನ ಸೂತ್ರಧಾರಿಯ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ. ಆದರೆ, ತನಿಖೆಯ ನೆಪದಲ್ಲಿ ಬರೀ ಜೆಡಿಎಸ್ ಕಾರ್ಯಕರ್ತರನ್ನೇ ಯಾಕೆ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಕುಮಾರಸ್ವಾಮಿ ನೇರವಾಗಿ ಪ್ರಶ್ನೆ ಮಾಡಿದ್ದಾರೆ.
ಇದೇ ವೇಳೆ ಹಳೆಯ ಘಟನೆಯನ್ನು ನೆನಪಿಸಿಕೊಂಡ ಕುಮಾರಸ್ವಾಮಿ, ಈ ಸ್ಟಿಂಗ್ ಆಪರೇಷನ್ ಕಳ್ಳಾಟ ಇಂದು ನಿನ್ನೆಯದಲ್ಲ ಎಂದಿದ್ದಾರೆ. ಕಳೆದ 2024ರ ಆಗಸ್ಟ್ 2ರಂದೇ ಶಾಸಕ ರಮೇಶ್ ಜಾರಕಿಹೊಳಿ ಅವರು ಈ ಬಗ್ಗೆ ಎಚ್ಚರಿಕೆ ನೀಡಿದ್ದರು. ಪ್ರಜ್ವಲ್ ರೇವಣ್ಣ ಪ್ರಕರಣದ ನಂತರ ಸಿದ್ದರಾಮಯ್ಯ ಹಾಗೂ ಡಾ. ಜಿ. ಪರಮೇಶ್ವರ್ ಅವರ ವಿಡಿಯೋಗಳೂ ಹೊರಬರಬಹುದು, ಆದ್ದರಿಂದ ಆ 'ಮಹಾನಾಯಕ'ನನ್ನು ಈಗಲೇ ಹುದ್ದೆಯಿಂದ ಇಳಿಸಿ ಮತ್ತು ಈ ವಿಡಿಯೋ ಪ್ರಕರಣಕ್ಕೆ ಇತಿಶ್ರೀ ಹಾಡಿ ಎಂದು ಎಚ್ಚರಿಸಿದ್ದರು. ಅಂದು ಆ ಎಚ್ಚರಿಕೆಯನ್ನು ನಿರ್ಲಕ್ಷಿಸಿದ್ದಕ್ಕೆ ಇಂದು ಇಂತಹ ಪರಿಸ್ಥಿತಿ ಬಂದೊದಗಿದೆ ಎಂದು ಅವರು ಕಿಡಿಕಾರಿದರು.
ತಮ್ಮ ವಿರುದ್ಧದ ತಂತ್ರಗಳ ಬಗ್ಗೆ ಟಾಂಗ್ ನೀಡಿದ ಎಚ್‌ಡಿಕೆ, ಯಾವುದೋ ಮಹಿಳೆಯ ಮುಖಕ್ಕೆ ಟವಲ್ ಕಟ್ಟಿ ಛೂ ಬಿಟ್ಟರೆ ಬಲೆಗೆ ಬೀಳಲು ತಾನೇನು ರೇವಣ್ಣ ಅಲ್ಲ ಎಂದು ಮಾರ್ಮಿಕವಾಗಿ ಹೇಳಿದರು. ರೇವಣ್ಣ ಅವರನ್ನು ಐದು ದಿನ ಜೈಲಿಗೆ ಕಳುಹಿಸಿದಂತೆ ನನ್ನನ್ನೂ ಕಳುಹಿಸಬಹುದು ಎಂದುಕೊಂಡಿದ್ದೀರಾ ಎಂದು ಸರ್ಕಾರಕ್ಕೆ ಕುಟುಕಿದ್ದಾರೆ. ಈ ಘಟನೆಗಳಿಂದಾಗಿ ರಾಜ್ಯದಲ್ಲಿ 'ಸ್ಟಿಂಗ್ ಆಪರೇಷನ್' ಸುತ್ತಲಿನ ರಾಜಕೀಯ ಕಾವು ಮತ್ತಷ್ಟು ಏರಿದೆ.