ಬೆಂಗಳೂರು : ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಬಳಿ ಮೊಬೈಲ್ ಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ತೀವ್ರಗೊಂಡಿದೆ. ಸಿಸಿಬಿ ದಾಳಿ ವೇಳೆ ಪ್ರಜ್ವಲ್ ಸೆಲ್‌ನಲ್ಲಿ ಮೊಬೈಲ್, ಪೆನ್‌ಡ್ರೈವ್, ಸಿಮ್ ಹಾಗೂ ನೋಟ್‌ಬುಕ್ ಸಿಕ್ಕಿದ್ದು, ಆರಂಭದಲ್ಲಿ ಮೊಬೈಲ್ ತನ್ನದೇ ಎಂದಿದ್ದ ಅವರು ಬಳಿಕ ಪ್ರತಾಪ್‌ಗೆ ಸೇರಿದ್ದು ಎಂದು ಹೇಳಿಕೆ ಬದಲಿಸಿದ್ದರು. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಪೊಲೀಸರು ಪ್ರಜ್ವಲ್ ಅವರನ್ನು ಎರಡು ದಿನಗಳ ಕಾಲ ಬಾಡಿ ವಾರೆಂಟ್ ಮೇಲೆ ಕಸ್ಟಡಿಗೆ ಪಡೆದಿದ್ದಾರೆ.
ಪರಪ್ಪನ ಅಗ್ರಹಾರ ಪೊಲೀಸ್ ಇನ್ಸ್‌ಪೆಕ್ಟರ್ ನವೀನ್ ನೇತೃತ್ವದಲ್ಲಿ ತನಿಖೆ ಮುಂದುವರಿದಿದ್ದು, ಪೊಲೀಸರು ಆರೋಪಿಗಳನ್ನು ಎದುರುಬದುರು ಕೂರಿಸಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಜೈಲಿನೊಳಗೆ ಮೊಬೈಲ್ ಮತ್ತು ಸಿಮ್ ಕಾರ್ಡ್ ಪೂರೈಸಿದ ಆರೋಪದ ಮೇರೆಗೆ ಐವರನ್ನು ವಶಕ್ಕೆ ಪಡೆಯಲಾಗಿದ್ದು, ಇಬ್ಬರು ಮೊಬೈಲ್ ನೀಡಿದರೆ, ಇಬ್ಬರು ಸಿಮ್ ಕಾರ್ಡ್‌ಗಳನ್ನು ಒದಗಿಸಿದ್ದಾರೆ ಎನ್ನಲಾಗಿದೆ. ಮತ್ತೊಬ್ಬ ಜೈಲು ವಾರ್ಡನ್ ಮೂಲಕ ಈ ವಸ್ತುಗಳು ಪ್ರಜ್ವಲ್ ಕೈ ಸೇರಿವೆ ಎಂಬ ಶಂಕೆ ವ್ಯಕ್ತವಾಗಿದ್ದು, ಈ ನಿಟ್ಟಿನಲ್ಲಿ ಪೊಲೀಸರು ಮುಕ್ತವಾಗಿ ಮಾಹಿತಿ ಕಲೆಹಾಕುತ್ತಿದ್ದಾರೆ.
ಪೊಲೀಸ್ ಠಾಣೆಯಲ್ಲೇ ಪ್ರಾಥಮಿಕ ವಿಚಾರಣೆ ನಡೆಸಿ ರಾತ್ರಿ ಕಳೆದ ಬಳಿಕ, ಇಂದು ಬೆಳಿಗ್ಗೆಯಿಂದಲೇ ಪ್ರಜ್ವಲ್ ರೇವಣ್ಣ ಅವರಿಗೆ ಪೊಲೀಸರು ಬಲವಾದ ಡ್ರಿಲ್ ಆರಂಭಿಸಿದ್ದಾರೆ. ಮೊಬೈಲ್‌ನ ಪಾಸ್‌ವರ್ಡ್ ಬಹಿರಂಗಪಡಿಸುವಂತೆ ಹಾಗೂ ಪೆನ್‌ಡ್ರೈವ್, ನೋಟ್‌ಬುಕ್‌ನಲ್ಲಿ ಪತ್ತೆಯಾದ ಮಹತ್ವದ ನಂಬರ್‌ಗಳ ಮೂಲದ ಬಗ್ಗೆ ಪೊಲೀಸರು ಸರಣಿ ಪ್ರಶ್ನೆಗಳನ್ನು ಕೇಳಿದ್ದಾರೆ. ಜೈಲಿನ ಹೈ ಸೆಕ್ಯುರಿಟಿ ವಲಯದೊಳಗೆ ನಿಷೇಧಿತ ವಸ್ತುಗಳು ಹೇಗೆ ಪ್ರವೇಶಿಸಿದವು ಮತ್ತು ಇದರ ಹಿಂದೆ ಯಾರ ಕೈವಾಡವಿದೆ ಎಂಬುದರ ಕುರಿತು ತನಿಖೆಯಿಂದ ಮತ್ತಷ್ಟು ಸ್ಫೋಟಕ ಸತ್ಯಗಳು ಹೊರಬರುವ ಸಾಧ್ಯತೆಯಿದೆ.
ಎಫ್‌ಎಸ್‌ಎಲ್ (FSL) ತನಿಖೆಯಲ್ಲೂ ಮೊಬೈಲ್ ಹಾಗೂ ಪೆನ್‌ಡ್ರೈವ್‌ನಲ್ಲಿ ಪ್ರಜ್ವಲ್‌ಗೆ ಆಪ್ತರಾಗಿರುವ ಮತ್ತು ಸಂಪರ್ಕ ಹೊಂದಿರುವ ಹಲವು ನಿರ್ಣಾಯಕ ದಾಖಲೆಗಳು ಹಾಗೂ ನಂಬರ್‌ಗಳು ಲಭ್ಯವಾಗಿವೆ ಎಂದು ತಿಳಿದುಬಂದಿದೆ. ಮೊಬೈಲ್ ಪಾಸ್‌ವರ್ಡ್‌ನಿಂದ ಹಿಡಿದು ಪೆನ್‌ಡ್ರೈವ್‌ನಲ್ಲಿರುವ ಕಡತಗಳು ಮತ್ತು ಜೈಲಿನ ಕೋಣೆಗೆ ಮೊಬೈಲ್ ತಲುಪಿದ ಸಂಪೂರ್ಣ ಹಾದಿಯ ಬಗ್ಗೆ ಪೊಲೀಸರು ಇಂಚಿಂಚೂ ಮಾಹಿತಿ ಕಲೆಹಾಕುತ್ತಿದ್ದು, ಪ್ರಕರಣದ ತನಿಖೆ ರಾಜ್ಯಾದ್ಯಂತ ತೀವ್ರ ಕುತೂಹಲ ಮೂಡಿಸಿದೆ.