ಬೆಂಗಳೂರು: ಭಾರತೀಯ ಮಾರುಕಟ್ಟೆಯಲ್ಲಿ ಇಂದು ಚಿನ್ನ ಹಾಗೂ ಬೆಳ್ಳಿಯ ಬೆಲೆಗಳು ಯಾವುದೇ ಪ್ರಮುಖ ಏರಿಳಿತವಿಲ್ಲದೆ ತುಸು ಸ್ಥಿರತೆಯನ್ನು ಕಾಯ್ದುಕೊಂಡಿವೆ. ಆರಂಭಿಕ ವಹಿವಾಟಿನಲ್ಲಿ ಮಾರುಕಟ್ಟೆ ಶಾಂತವಾಗಿದ್ದು, ಕಳೆದ ನಾಲ್ಕು ದಿನಗಳಲ್ಲಿ 24 ಕ್ಯಾರೆಟ್ ಚಿನ್ನದ ದರವು 100 ಗ್ರಾಂಗೆ ಬರೋಬ್ಬರಿ 39,800 ರೂಪಾಯಿಗಳಷ್ಟು ಭಾರಿ ಕುಸಿತ ಕಂಡಿದೆ. ಸಾಂಪ್ರದಾಯಿಕವಾಗಿ ಅಕ್ಟೋಬರ್ ಮತ್ತು ನವೆಂಬರ್ ತಿಂಗಳುಗಳು ಹಬ್ಬ ಹಾಗೂ ಮದುವೆಗಳ ಸೀಸನ್ ಆಗಿರುವುದರಿಂದ ಆಭರಣಗಳಿಗೆ ಬೇಡಿಕೆ ಹೆಚ್ಚಿರುತ್ತದೆ. ಆದರೆ ಬೆಲೆಗಳು ಇಳಿಕೆ ಹಾದಿಯಲ್ಲಿರುವುದರಿಂದ, ಗ್ರಾಹಕರು ಮುಂದುಡುತ್ತಿದ್ದ ದೊಡ್ಡ ಮೊತ್ತದ ಆಭರಣ ಖರೀದಿಗಳನ್ನು ಮಾಡಲು ಇದು ಸಕಾಲವೆಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇಂಡಿಯಾ ಟುಡೇ ವರದಿ ಪ್ರಕಾರ, ಅಕ್ಟೋಬರ್ 16 ರಂದು ಭಾರತದಲ್ಲಿ 22 ಕ್ಯಾರೆಟ್ ಚಿನ್ನದ ದರವು 10 ಗ್ರಾಂಗೆ 1,35,150 ರೂ.ಗಳಷ್ಟಿದ್ದರೆ, 24 ಕ್ಯಾರೆಟ್ ಚಿನ್ನದ ದರವು 10 ಗ್ರಾಂಗೆ 1,47,440 ರೂ.ಗಳಲ್ಲಿ ಸ್ಥಿರವಾಗಿದೆ. ಹಾಗೆಯೇ, 18 ಕ್ಯಾರೆಟ್ ಚಿನ್ನದ ಬೆಲೆಯು 10 ಗ್ರಾಂಗೆ 1,10,580 ರೂ.ಗಳಾಗಿದೆ. ಇನ್ನು ಭಾರೀ ತೂಕದ ಆಭರಣಗಳನ್ನು ಖರೀದಿಸುವವರಿಗೆ ಅನುಕೂಲವಾಗುವಂತೆ, 100 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 14,74,400 ರೂ.ಗಳಿದ್ದರೆ, 22 ಕ್ಯಾರೆಟ್ ಚಿನ್ನದ ಬೆಲೆ 13,51,500 ರೂ.ಗಳಂತೆ ವಹಿವಾಟು ನಡೆಸುತ್ತಿದೆ. ಚೆನ್ನೈ, ಮುಂಬೈ, ಬೆಂಗಳೂರು ಮತ್ತು ಹೈದರಾಬಾದ್ ಸೇರಿದಂತೆ ಪ್ರಮುಖ ಮಹಾನಗರಗಳಲ್ಲೂ ಚಿನ್ನದ ದರಗಳು ಯಾವುದೇ ವ್ಯತ್ಯಾಸವಿಲ್ಲದೆ ಒಂದೇ ಸಮನಾಗಿ ಮುಂದುವರಿದಿವೆ.
ಬೆಳ್ಳಿ ಮಾರುಕಟ್ಟೆಯಲ್ಲೂ ಕೂಡ ಇಂದು ಯಾವುದೇ ಏರಿಳಿತ ಕಂಡುಬಂದಿಲ್ಲ. ನಿನ್ನೆಯ ವಹಿವಾಟಿನಂತೆ ಬೆಳ್ಳಿಯ ಬೆಲೆಯು ಯಥಾಸ್ಥಿತಿಯಲ್ಲಿದ್ದು, ದೇಶದಲ್ಲಿ 1 ಕೆಜಿ ಬೆಳ್ಳಿಯ ಬೆಲೆ 2,30,000 ರೂ.ಗಳಿದ್ದರೆ, 100 ಗ್ರಾಂ ಬೆಳ್ಳಿಯ ಬೆಲೆ 23,000 ರೂ.ಗಳಾಗಿ ದಾಖಲಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿಯುಎಸ್ ಷೇರುಗಳ ಮಾರಾಟದಿಂದಾಗಿ ಸುರಕ್ಷಿತ ಹೂಡಿಕೆಯ ಬೇಡಿಕೆ ಹೆಚ್ಚಾಗಿದ್ದು, ಶುಕ್ರವಾರದ ವಹಿವಾಟಿನಲ್ಲಿ ಚಿನ್ನವು ಔನ್ಸ್‌ಗೆ 4,150 ಡಾಲರ್ ಗಡಿ ದಾಟಿ ಮುನ್ನಡೆಯುತ್ತಿದೆ ಎಂದು ಟ್ರೇಡಿಂಗ್ ಎಕನಾಮಿಕ್ಸ್ ದತ್ತಾಂಶಗಳು ತಿಳಿಸಿವೆ.
ಮುಂದಿನ ದಿನಗಳಲ್ಲಿ ಚಿನ್ನ ಮತ್ತು ಬೆಳ್ಳಿ ಮಾರುಕಟ್ಟೆಯ ದಿಕ್ಕಿನ ಬಗ್ಗೆ ಮಾತನಾಡಿರುವ ರಿದ್ದಿಸಿದ್ಧಿ ಬುಲಿಯನ್ಸ್ ಲಿಂಡೆಡ್‌ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಇಂಡಿಯಾ ಬುಲಿಯನ್ ಅಂಡ್ ಜ್ಯುವೆಲ್ಲರ್ಸ್ ಅಸೋಸಿಯೇಷನ್ ಅಧ್ಯಕ್ಷ ಪೃಥ್ವಿರಾಜ್ ಕೊಠಾರಿ, ಅಮೆರಿಕದ ಹಣದುಬ್ಬರ ನಿರೀಕ್ಷೆಗಿಂತ ಹೆಚ್ಚಾಗಿರುವುದು ಫೆಡ್ ಬಡ್ಡಿ ದರ ಏರಿಕೆಯ ಸಾಧ್ಯತೆಗಳನ್ನು ಬಲಪಡಿಸಿದೆ ಎಂದಿದ್ದಾರೆ. ಜಾಗತಿಕ ಮಟ್ಟದಲ್ಲಿ ಹಾರ್ಮುಜ್ ಜಲಸಂಧಿ ಮತ್ತು ಇತರೆಡೆ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಹೆಚ್ಚಿರುವ ಹಿನ್ನೆಲೆಯಲ್ಲಿ, ಮಾರುಕಟ್ಟೆಯ ಇಳಿಕೆಯ ಹಂತಗಳನ್ನು ಹೂಡಿಕೆದಾರರು ಉತ್ತಮ ಖರೀದಿ ಅವಕಾಶಗಳಾಗಿ ಬಳಸಿಕೊಳ್ಳಬಹುದು ಎಂದು ಅವರು ವಿಶ್ಲೇಷಿಸಿದ್ದಾರೆ.