ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಹಾಗೂ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಮೂಲಕ ಸಚಿವ ಪ್ರಿಯಾಂಕ್ ಖರ್ಗೆ ಕುಟುಂಬದ ಸಿದ್ಧಾರ್ಥ ವಿಹಾರ ಟ್ರಸ್ಟ್ಗೆ ಭೂಮಿ ಹಂಚಿಕೆ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. 2026ರ ಆಗಸ್ಟ್ 18 ರಂದು ಹೊರಡಿಸಲಾಗಿದ್ದ ಹಿಂದಿನ ಆದೇಶವನ್ನು ಹೈಕೋರ್ಟ್ ಹಿಂಪಡೆದಿದ್ದು, ಈ ಪ್ರಕರಣದ ಕುರಿತು ಮರು ವಿಚಾರಣೆ ನಡೆಸುವುದಾಗಿ ಸ್ಪಷ್ಟಪಡಿಸಿದೆ.
ಟ್ರಸ್ಟ್ನ ಟ್ರಸ್ಟಿ ರಾಹುಲ್ ಖರ್ಗೆ (ಸಚಿವ ಪ್ರಿಯಾಂಕ್ ಖರ್ಗೆ ಸಹೋದರ) ಅವರು ಸಲ್ಲಿಸಿದ್ದ ಮರುಪೀಲನಾ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ, ಈ ಹಿಂದೆ ವಿಶೇಷ ನ್ಯಾಯಾಲಯಕ್ಕೆ ನೀಡಿದ್ದ ನಿರ್ದೇಶನವನ್ನು ರದ್ದುಪಡಿಸಿದೆ. ಅಲ್ಲದೆ, ಮೂಲ ಅರ್ಜಿಯಲ್ಲಿ ಪ್ರತಿವಾದಿಗಳಾಗಿರುವ ರಾಹುಲ್ ಖರ್ಗೆ ಹಾಗೂ ಇತರರ ವಾದವನ್ನು ಅಕ್ಟೋಬರ್ 30ರಂದು ಆಲಿಸುವುದಾಗಿ ಕೋರ್ಟ್ ತಿಳಿಸಿದೆ.
ಪ್ರಕರಣದ ಹಿನ್ನೆಲೆ ಏನು? ಏರೋಸ್ಪೇಸ್ ಅಥವಾ ಸಂಶೋಧನಾ ಕ್ಷೇತ್ರದಲ್ಲಿ ಯಾವುದೇ ಪೂರ್ವಾನುಭವವಿಲ್ಲದಿದ್ದರೂ ಸಹ, ಸಿದ್ದಾರ್ಥ ವಿಹಾರ ಟ್ರಸ್ಟ್ಗೆ ಕೆಐಎಡಿಬಿಯು ದೇವನಹಳ್ಳಿಯ ಏರೋಸ್ಪೇಸ್ ಪಾರ್ಕ್ನಲ್ಲಿ ಜಮೀನು ಮಂಜೂರು ಮಾಡಿದೆ ಎಂಬ ಆರೋಪ ಕೇಳಿಬಂದಿತ್ತು. ಇದರೊಂದಿಗೆ, ಬನಶಂಕರಿ 6ನೇ ಹಂತದಲ್ಲಿ ಅಂದಾಜು 8,125 ಚದರ ಮೀಟರ್ ವಿಸ್ತೀರ್ಣದ ನಾಗರಿಕ ಸೌಲಭ್ಯ (ಸಿಎ) ನಿವೇಶನವನ್ನು ಬಿಡಿಎ ವತಿಯಿಂದ ಮಂಜೂರು ಮಾಡಿಸಿಕೊಳ್ಳಲಾಗಿದೆ.
ಈ ಟ್ರಸ್ಟ್ ಅನ್ನು ಪರಿಶಿಷ್ಟ ಜಾತಿಯ ಸಮುದಾಯದ ಅಭಿವೃದ್ಧಿಗಾಗಿ ಮಾತ್ರ ಸ್ಥಾಪಿಸಲಾಗಿದೆ ಎಂದು ಬಿಂಬಿಸಿ, ಬಿಡಿಎಯಿಂದ ಶೇ. 50ರಷ್ಟು ಭಾರೀ ರಿಯಾಯಿತಿಯಲ್ಲಿ ಜಮೀನು ಪಡೆಯಲಾಗಿದೆ. ಆದರೆ ವಾಸ್ತವವಾಗಿ ಈ ಟ್ರಸ್ಟ್ ನಿರ್ದಿಷ್ಟವಾಗಿ ಪರಿಶಿಷ್ಟ ಜಾತಿಗಾಗಿ ಮಾತ್ರವಲ್ಲದೆ, ಎಲ್ಲಾ ಜಾತಿ, ಧರ್ಮ ಹಾಗೂ ವರ್ಗಗಳ ಜನರ ಹಿತಕ್ಕಾಗಿ ಸ್ಥಾಪಿಸಲ್ಪಟ್ಟಿದೆ ಎಂದು ದೂರುದಾರರು ಆರೋಪಿಸಿದ್ದರು. ಈ ಸಂಬಂಧ ನ್ಯಾಯಾಲಯದಲ್ಲಿ ಕಾನೂನು ಹೋರಾಟ ಮುಂದುವರಿದಿದೆ.