ಬಳ್ಳಾರಿ: ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ರಾಬಕೋವಿ) ರಾಬಕೋವಿ ಹಾಲು ಒಕ್ಕೂಟದಲ್ಲಿ ಅಕ್ರಮಗಳ ಸರಮಾಳೆ ಒಂದೊಂದಾಗಿ ಬೆಳಕಿಗೆ ಬರುತ್ತಿದೆ. ಸತ್ತ ಜಾನುವಾರುಗಳ ವಿಮಾ ಪರಿಹಾರದ ಹಣವನ್ನು ದುರುಪಯೋಗಪಡಿಸಿಕೊಂಡು, ಕೋಟ್ಯಂತರ ರೂಪಾಯಿ ಲೂಟಿ ಮಾಡಿರುವ ಗಂಭೀರ ಆರೋಪ ಕೇಳಿಬಂದಿದೆ. ಒಕ್ಕೂಟದ ಅಕೌಂಟೆಂಟ್ ಹಾಗೂ ನಿವೃತ್ತ ಮ್ಯಾನೇಜರ್ ನಡುವಿನ ದೂರವಾಣಿ ಸಂಭಾಷಣೆಯ ಆಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಒಕ್ಕೂಟದ ಒಳಗಿನ ಕರ್ಮಕಾಂಡವನ್ನು ಹೊರಹಾಕಿದೆ.
ವೈರಲ್ ಆಗಿರುವ ಆಡಿಯೋದಲ್ಲಿ ಒಕ್ಕೂಟದ ಅಕೌಂಟೆಂಟ್ ಉಮಾಮಹೇಶ್ವರಿ ಹಾಗೂ ನಿವೃತ್ತ ಮ್ಯಾನೇಜರ್ ವೆಂಕಟೇಶ್ ಪರಸ್ಪರ ಮಾತನಾಡಿರುವುದು ದಾಖಲಾಗಿದೆ. ಜಾನುವಾರುಗಳು ಮೃತಪಟ್ಟ ನಂತರ ಬರುವ ಇನ್ಸೂರೆನ್ಸ್ (ವಿಮೆ) ಹಣವನ್ನು ಮತ್ತು ಇತರೆ ಪರಿಹಾರ ಧನವನ್ನು ಅಕ್ರಮವಾಗಿ ಬೇರೆಡೆಗೆ ವರ್ಗಾವಣೆ ಮಾಡಿಕೊಂಡಿರುವ ಬಗ್ಗೆ ಈ ಸಂಭಾಷಣೆಯಲ್ಲಿ ಉಲ್ಲೇಖಿಸಲಾಗಿದೆ. ಹಿಂದಿನ ನಿರ್ದೇಶಕರ ಅವಧಿಯಲ್ಲಿ ಆರಂಭವಾದ ಈ ಭ್ರಷ್ಟಾಚಾರ ಈಗಲೂ ಮುಂದುವರೆದಿದ್ದು, ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ದುರ್ಬಳಕೆ ಮಾಡಿಕೊಂಡಿರುವ ಹಣವನ್ನು ಹೊಂದಿಸಲು ಅಕೌಂಟೆಂಟ್ ಪರದಾಡುತ್ತಿರುವುದು ಆಡಿಯೋದಿಂದ ಸ್ಪಷ್ಟವಾಗಿದೆ.
ಜಾನುವಾರುಗಳು ಸಾವನ್ನಪ್ಪಿದರೂ ಸಹ, ರೈತರಿಗೆ ಸಲ್ಲಬೇಕಾದ ಹಾಗೂ ವಿಮಾ ಕಂಪನಿಯಿಂದ ಬರಬೇಕಾದ ಪರಿಹಾರದ ಹಣವನ್ನು ಅಧಿಕಾರಿಗಳೇ ನುಂಗಿ ಹಾಕುತ್ತಿದ್ದಾರೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಬಡ ರೈತರ ಹೆಸರಿನಲ್ಲಿ ಬರುವ ಹಣವನ್ನು ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರೇ ಲೂಟಿ ಮಾಡುತ್ತಿರುವುದು ಹಾಲು ಒಕ್ಕೂಟದ ಆಡಳಿತ ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಹುಸಿಗೊಳಿಸಿದೆ. ಈ ಹಿಂದಿನ ವ್ಯವಸ್ಥಾಪಕ ನಿರ್ದೇಶಕರ (MD) ಅವಧಿಯಂತೆಯೇ ಪ್ರಸ್ತುತವೂ ಅಕ್ರಮಗಳು ಮುಂದುವರೆದಿವೆ ಎಂದು ದೂರುದಾರರು ದೂರಿದ್ದಾರೆ.
ಈ ಭ್ರಷ್ಟಾಚಾರ ಪ್ರಕರಣದ ಕುರಿತು ಕೂಲಂಕಷವಾಗಿ ತನಿಖೆ ನಡೆಸಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಧನಂಜಯ್ ಹಾಮಲ್ ಎಂಬುವವರು ಬಳ್ಳಾರಿಯ ಬ್ರೂಸ್ ಪೇಟೆ ಪೊಲೀಸ್ ಠಾಣೆ ಹಾಗೂ ಕೆಎಂಎಫ್ (KMF) ಅಧ್ಯಕ್ಷರಿಗೆ ಅಧಿಕೃತವಾಗಿ ದೂರು ದಾಖಲಿಸಿದ್ದಾರೆ. ಈ ಹಗರಣದಲ್ಲಿ ಭಾಗಿಯಾಗಿರುವ ಪ್ರಮುಖರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಮತ್ತು ರೈತರಿಗೆ ನ್ಯಾಯ ಒದಗಿಸಬೇಕು ಎಂಬ ಒತ್ತಾಯ ಜೋರಾಗಿದೆ.