ಗಂಗಾವತಿ: ದ್ವೈತ ಸಿದ್ಧಾಂತದ ಪ್ರತಿಪಾದಕರಾದ ಜಗದ್ಗುರು ಶ್ರೀ ಮಧ್ವಾಚಾರ್ಯರ ಜಯಂತಿಯನ್ನು ಇನ್ಮುಂದೆ ಪ್ರತಿವರ್ಷ ಅಧಿಕೃತವಾಗಿ ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಿಸಲು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಸರ್ಕಾರದ ಈ ನಿರ್ಧಾರವನ್ನು ಸ್ವಾಗತಿಸಿರುವ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ನಿರ್ದೇಶಕ ಪಿ.ಎಂ. ಮಾಲತೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರನ್ನು ಖುದ್ದಾಗಿ ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಿದರು.
ಗಂಗಾವತಿಯಲ್ಲಿ ಸಚಿವರನ್ನು ಭೇಟಿ ಮಾಡಿದ ನಿಯೋಗವು, ದೀರ್ಘಕಾಲದ ಬೇಡಿಕೆಯನ್ನು ಈಡೇರಿಸಿದ್ದಕ್ಕಾಗಿ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿತು. ಪ್ರತಿ ವರ್ಷ ಅಕ್ಟೋಬರ್ 21ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದಲೇ ರಾಜ್ಯಾದ್ಯಂತ ಶ್ರೀ ಮಧ್ವಾಚಾರ್ಯ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ಸರ್ಕಾರ ಆದೇಶ ಪ್ರಕಟಿಸಿದೆ.
ಶ್ರೀ ರಾಮಾನುಜಾಚಾರ್ಯ ಜಯಂತಿ ಆಚರಣೆಗೂ ಆಗ್ರಹ
ಇದೇ ವೇಳೆ ಸಚಿವರಿಗೆ ಮನವಿ ಪತ್ರ ಸಲ್ಲಿಸಿದ ಪಿ.ಎಂ. ಮಾಲತೇಶ್, "ಸಾಮಾಜಿಕ ಸಮಾನತೆ ಮತ್ತು ಭಕ್ತಿ ಸಿದ್ಧಾಂತವನ್ನು ಪಸರಿಸಿದ ಮಹಾನ್ ಸಂತ ಶ್ರೀ ರಾಮಾನುಜಾಚಾರ್ಯರ ಜಯಂತಿಯನ್ನೂ ಸಹ ಸರ್ಕಾರಿ ಮಟ್ಟದಲ್ಲಿ ಅಧಿಕೃತವಾಗಿ ಆಚರಿಸಲು ಸೂಕ್ತ ಆದೇಶ ಹೊರಡಿಸಬೇಕು" ಎಂದು ಮನವಿ ಮಾಡಿದರು.
ರಾಜ್ಯೋತ್ಸವ ಪ್ರಶಸ್ತಿಗೆ ಎಂ.ಎನ್. ಸುಂದರ್ ರಾಜ್ ಹೆಸರು ಶಿಫಾರಸು
ಸಾಹಿತ್ಯ ಕ್ಷೇತ್ರದಲ್ಲಿ ಸುದೀರ್ಘ ಸೇವೆ ಸಲ್ಲಿಸಿರುವ ಹಿರಿಯ ಸಾಹಿತಿ ಎಂ.ಎನ್. ಸುಂದರ್ ರಾಜ್ ಅವರ ಸಾಹಿತ್ಯಿಕ ಕೊಡುಗೆಯನ್ನು ಪರಿಗಣಿಸಿ, ಈ ಬಾರಿಯ ಪ್ರತಿಷ್ಠಿತ 'ಕನ್ನಡ ರಾಜ್ಯೋತ್ಸವ ಪ್ರಶಸ್ತಿ'ಗೆ ಅವರ ಹೆಸರನ್ನು ಆಯ್ಕೆ ಮಾಡಬೇಕೆಂದು ಸಚಿವರಿಗೆ ಇದೇ ಸಂದರ್ಭದಲ್ಲಿ ಕೋರಲಾಯಿತು.
ಈ ಸಂದರ್ಭದಲ್ಲಿ ಹಿರಿಯ ಸಾಹಿತಿಗಳಾದ ಎಂ.ಎನ್. ಸುಂದರ್ ರಾಜ್, ಶಂಕರ ಚೈತನ್ಯ ವೇದಿಕೆಯ ಕಾರ್ಯದರ್ಶಿಗಳು ಹಾಗೂ ತಾಲ್ಲೂಕು ಬ್ರಾಹ್ಮಣ ಸೇವಾ ಸಂಘದ ಮಾಜಿ ಅಧ್ಯಕ್ಷರಾದ ಸಂತೋಷ ಕುಮಾರ್ ಸೇರಿದಂತೆ ಸಮುದಾಯದ ಪ್ರಮುಖರು ಹಾಜರಿದ್ದರು.