ಬೆಂಗಳೂರು: ಬೆಂಗಳೂರಿನ ಮೈಸೂರು ರಸ್ತೆಯಲ್ಲಿರುವ ಪ್ರಸಿದ್ಧ ಗಾಳಿ ಆಂಜನೇಯಸ್ವಾಮಿ ದೇವಸ್ಥಾನವನ್ನು ಮುಜರಾಯಿ ಇಲಾಖೆಯ ಸುಪರ್ದಿಗೆ ಒಪ್ಪಿಸಿ 2025ರ ಜುಲೈ 8ರಂದು ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಕರ್ನಾಟಕ ಹೈಕೋರ್ಟ್ ರದ್ದುಪಡಿಸಿದೆ. ದೇವಸ್ಥಾನ ಟ್ರಸ್ಟ್ನ ಸಂಚಾಲಕ ಬಿ.ಪಿ. ನಾಗರಾಜು ಹಾಗೂ ಇತರ ಟ್ರಸ್ಟಿಗಳು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ಏಕಸದಸ್ಯ ಪೀಠ ಈ ಮಹತ್ವದ ತೀರ್ಪು ನೀಡಿದೆ.
ಸರ್ಕಾರದ ಆದೇಶದಲ್ಲಿ ಕಾನೂನು ಲೋಪಗಳು ಕಂಡುಬಂದಿರುವ ಹಿನ್ನೆಲೆಯಲ್ಲಿ ಅದನ್ನು ರದ್ದುಪಡಿಸಲಾಗಿದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ. ಆದಾಗ್ಯೂ, ಪ್ರಕರಣದಲ್ಲಿ ಕೇಳಿಬಂದಿರುವ ಆರೋಪಗಳ ಕುರಿತು ಸಂಬಂಧಪಟ್ಟ ಇಲಾಖೆ ಹಾಗೂ ಪ್ರಾಧಿಕಾರವು ತನಿಖೆ ನಡೆಸಿ ಕಾನೂನುರೀತ್ಯಾ ಕ್ರಮ ಕೈಗೊಳ್ಳಲು ಈ ತೀರ್ಪು ಯಾವುದೇ ಅಡ್ಡಿಯಾಗುವುದಿಲ್ಲ ಎಂದು ನ್ಯಾಯಾಲಯ ತಿಳಿಸಿದೆ. ಅಲ್ಲದೆ, ಅರ್ಜಿದಾರರು ಮತ್ತು ಪ್ರತಿವಾದಿಗಳ ಎಲ್ಲಾ ಆಕ್ಷೇಪಣೆಗಳನ್ನು ಮುಕ್ತವಾಗಿರಿಸಲಾಗಿದೆ.
ಸರ್ಕಾರದ ಆದೇಶವೇ ರದ್ದಾಗಿರುವುದರಿಂದ, ಅದರ ಆಧಾರದ ಮೇಲೆ ದೇವಾಲಯಕ್ಕೆ ನೇಮಕ ಮಾಡಲಾಗಿದ್ದ ಆಡಳಿತಾಧಿಕಾರಿಯ ನೇಮಕಾತಿ ಪ್ರಕ್ರಿಯೆಯೂ ಸಹ ರದ್ದಾಗಲಿದೆ. ನ್ಯಾಯಾಲಯದ ಆದೇಶವು ವೆಬ್ಸೈಟ್ನಲ್ಲಿ ಪ್ರಕಟಗೊಂಡ ಒಂದು ವಾರದೊಳಗೆ ಆಡಳಿತಾಧಿಕಾರಿಯು ದೇವಸ್ಥಾನದ ಆಡಳಿತ ನಿರ್ವಹಣೆಯನ್ನು ಸಂಬಂಧಪಟ್ಟ ಟ್ರಸ್ಟಿಗಳಿಗೆ ಮರಳಿಸಬೇಕು ಎಂದು ನ್ಯಾಯಪೀಠ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.