ಬೆಂಗಳೂರು : ಬೆಂಗಳೂರು ದಕ್ಷಿಣ ಜಿಲ್ಲೆಯ ಗಡಿ ಭಾಗದಲ್ಲಿ ಚಿರತೆ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ರಾಮನಗರ ತಾಲೂಕಿನ ಹುಣಸನಹಳ್ಳಿ ಬಳಿ ಬೆಳ್ಳಂಬೆಳಗ್ಗೆ ರಸ್ತೆಗೆ ಅಡ್ಡಲಾಗಿ ಚಿರತೆಯೊಂದು ಕಾಣಿಸಿಕೊಂಡು ಆತಂಕ ಸೃಷ್ಟಿಸಿದೆ. ನಿರ್ಜನ ರಸ್ತೆಯಲ್ಲಿ ರಾಜಾರೋಷವಾಗಿ ಓಡಾಡುತ್ತಿದ್ದ ಈ ಚಿರತೆಯ ಚಲನವಲನಗಳನ್ನು ಸ್ಥಳೀಯರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.
ದಿನದ ಬಿಡುವಿಲ್ಲದ ಚಟುವಟಿಕೆಗಳು ಆರಂಭವಾಗುವ ಮುನ್ನವೇ ರಸ್ತೆಯಲ್ಲಿ ಚಿರತೆ ಪ್ರತ್ಯಕ್ಷವಾಗಿರುವುದರಿಂದ ಅಕ್ಕಪಕ್ಕದ ಗ್ರಾಮಗಳ ಜನತೆ ತೀವ್ರ ಭಯಭೀತರಾಗಿದ್ದಾರೆ. ರೈತರು ಮತ್ತು ದಾರಿಯಲ್ಲಿ ಓಡಾಡುವ ಸಾರ್ವಜನಿಕರು ಆತಂಕದಿಂದ ದಿನ ಕಳೆಯುವಂತಾಗಿದ್ದು, ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಚಿರತೆಯನ್ನು ಸೆರೆಹಿಡಿಯಬೇಕು ಹಾಗೂ ಈ ಭಾಗದಲ್ಲಿ ಕಾವಲು ಹೆಚ್ಚಿಸಬೇಕು ಎಂದು ಗ್ರಾಮಸ್ಥರು ಕಳಕಳಿಯ ಮನವಿ ಮಾಡಿದ್ದಾರೆ.