ಬೆಂಗಳೂರು : ಬೆಂಗಳೂರು ಹೊರವಲಯದ ರಾಜಾನುಕುಂಟೆ ಬಳಿ ಹೈಟೆನ್ಷನ್ ವಿದ್ಯುತ್ ತಂತಿ ತಗುಲಿ ಇಬ್ಬರು ಮಕ್ಕಳು ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಹೃದಯವಿದ್ರಾವಕ ಘಟನೆ ವರದಿಯಾಗಿದೆ. ಕೊಟ್ರೇಶಿ ಹಾಗೂ ಸುಧಾ ದಂಪತಿಯ 13 ವರ್ಷದ ಪುತ್ರಿ ಸಾನ್ವಿ ಮತ್ತು 5 ವರ್ಷದ ಪುತ್ರ ಅಯಾನ್ ದುರ್ಘಟನೆಗೆ ಒಳಗಾದ ಮಕ್ಕಳಾಗಿದ್ದಾರೆ. ಎರಡು ತಿಂಗಳ ಹಿಂದಷ್ಟೇ ಈ ಕುಟುಂಬ ಬಾಡಿಗೆ ಮನೆಗೆ ಬಂದಿತ್ತು. ತಾಯಿ ದಿನಸಿ ತರಲು ಹೊರಗೆ ಹೋಗಿದ್ದ ವೇಳೆ ಈ ಅವಘಡ ಸಂಭವಿಸಿದೆ.
ಮನೆಯ ಮುಂದೆ ಹಾದುಹೋಗಿರುವ ಹೈಟೆನ್ಷನ್ ವೈರ್ ಬಳಿ 5 ವರ್ಷದ ಅಯಾನ್ ಮೆಜರ್ಮೆಂಟ್ ಟೇಪ್ ಬಳಸಿ ಆಟವಾಡುತ್ತಿದ್ದ. ಈ ವೇಳೆ ಮಗುವನ್ನು ಒಳಗಡೆ ಕರೆಯಲು ಹೋದ 13 ವರ್ಷದ ಸಾನ್ವಿ ಮೇಲೆ ಟೇಪ್ ತಗುಲಿದೆ. ತಕ್ಷಣವೇ ಇಬ್ಬರಿಗೂ ಭೀಕರ ವಿದ್ಯುತ್ ಪ್ರವಾಹ (ಕರೆಂಟ್ ಶಾಕ್) ಹೊಡೆದಿದ್ದು, ಅಪಘಾತದ ತೀವ್ರತೆಗೆ ಬಾಲಕಿ ಸಾನ್ವಿಯ ಬಲಗೈ ಕಟ್ ಆಗಿದೆ ಹಾಗೂ ಕಂದಮ್ಮ ಅಯಾನ್ ಸುಟ್ಟು ಗಾಯಗೊಂಡಿದ್ದಾನೆ. ಸದ್ಯ ಗಂಭೀರವಾಗಿ ಗಾಯಗೊಂಡಿರುವ ಇಬ್ಬರೂ ಮಕ್ಕಳನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಐಸಿಯುನಲ್ಲಿ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.
ಮಕ್ಕಳ ಸ್ಥಿತಿ ಅತ್ಯಂತ ಗಂಭೀರವಾಗಿದ್ದರೂ ಇತ್ತ ತಿರುಗಿ ನೋಡದ ಬೆಸ್ಕಾಂ (BESCOM) ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಹಾಗೂ ಮನೆಮಾಲೀಕ ಸೋಮಶೇಖರ್ ವಿರುದ್ಧ ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಣ್ಣೀರಿನಲ್ಲಿ ಕಾಲಕಳೆಯುತ್ತಿರುವ ಬಡ ದಂಪತಿಯ ಆಘಾತಕಾರಿ ಸ್ಥಿತಿ ಸ್ಥಳೀಯರಲ್ಲಿ ಮರುಕ ಹುಟ್ಟಿಸಿದೆ.