ಬೆಂಗಳೂರು: ಆಯುಧ ಪೂಜೆ ಹಾಗೂ ವಿಜಯದಶಮಿ ಹಬ್ಬದ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿಯ ಪ್ರತಿಷ್ಠಿತ ಕೆ.ಆರ್. ಮಾರುಕಟ್ಟೆಯಲ್ಲಿ ಹಬ್ಬದ ಖರೀದಿ ಭರಾಟೆ ಜೋರಾಗಿ ನಡೆದಿದೆ. ಮುಂಜಾನೆಯಿಂದಲೇ ನೂರಾರು ಸಂಖ್ಯೆಯಲ್ಲಿ ಮಾರುಕಟ್ಟೆಗೆ ಆಗಮಿಸಿದ ಸಾರ್ವಜನಿಕರು ಪೂಜೆಗೆ ಅಗತ್ಯವಿರುವ ಹೂವು, ಹಣ್ಣು, ನಿಂಬೆಹಣ್ಣು, ಕುಂಬಳಕಾಯಿ ಹಾಗೂ ಬಾಳೆಕಂದುಗಳನ್ನು ಉತ್ಸಾಹದಿಂದ ಖರೀದಿಸುತ್ತಿದ್ದಾರೆ. ಬೆಂಗಳೂರು ಗ್ರಾಮಾಂತರ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ರೈತರು ನೇರವಾಗಿ ಮಾರುಕಟ್ಟೆಗೆ ಬಂದು ತಾಜಾ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವುದರಿಂದ ವ್ಯಾಪಾರ-ವ್ಯವಹಾರ ಅತ್ಯಂತ ಚುರುಕಾಗಿ ಸಾಗಿದೆ.
ಹಬ್ಬದ ವಿಶೇಷ ಖರೀದಿಗೆ ಜನಸಾಗರವೇ ಹರಿದುಬಂದಿರುವ ಕಾರಣ ಕೆ.ಆರ್. ಮಾರುಕಟ್ಟೆಯ ಸುತ್ತಮುತ್ತಲಿನ ರಸ್ತೆಗಳಲ್ಲಿ ತೀವ್ರ ಸ್ವರೂಪದ ಟ್ರಾಫಿಕ್ ಜಾಮ್ ಉಂಟಾಗಿದೆ. ವಾಹನ ಸವಾರರು ಮತ್ತು ಸಾರ್ವಜನಿಕರು ಸಂಚಾರ ದಟ್ಟಣೆಯಿಂದ ಪರದಾಡುವಂತಾಗಿದ್ದು, ಪೊಲೀಸರು ಹಾಗೂ ಸಂಚಾರ ಸಿಬ್ಬಂದಿ ವಾಹನ ಸಂಚಾರವನ್ನು ಸುಗಮಗೊಳಿಸಲು ಹರಸಾಹಸ ಪಡುತ್ತಿದ್ದಾರೆ.