ತುಮಕೂರು : ತುಮಕೂರು ದಸರಾ ಮಹೋತ್ಸವದ ವೇದಿಕೆಯಲ್ಲಿ ಸ್ಯಾಂಡಲ್ವುಡ್ ನಟಿ ರಚಿತಾ ರಾಮ್ ಅವರೊಂದಿಗೆ ಅಭಿಮಾನಿಯೊಬ್ಬ ಅನುಚಿತವಾಗಿ ವರ್ತಿಸಿರುವ ಘಟನೆ ವರದಿಯಾಗಿದೆ. ಕಾರ್ಯಕ್ರಮದ ನಿಮಿತ್ತ ವೇದಿಕೆಗೆ ಬಂದಿದ್ದ ನಟಿಯೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಯತ್ನಿಸಿದ ಅತಿತ್ಸಾಹಿ ಅಭಿಮಾನಿಯೊಬ್ಬ, ಭದ್ರತಾ ಸಿಬ್ಬಂದಿಯ ಕಣ್ಣುತಪ್ಪಿಸಿ ವೇದಿಕೆ ಹತ್ತಿದ್ದಾನೆ. ಅಷ್ಟೇ ಅಲ್ಲದೆ, ನಟಿಯ ಅನುಮತಿಯಿಲ್ಲದೆ ಅವರ ಹೆಗಲ ಮೇಲೆ ಕೈಹಾಕಿ ಬಲವಂತವಾಗಿ ಸೆಲ್ಫಿ2 ತೆಗೆದುಕೊಳ್ಳಲು ಮುಂದಾಗಿದ್ದಾನೆ.
ಈ ಅನಿರೀಕ್ಷಿತ ಹಾಗೂ ಅತಿರೇಕದ ವರ್ತನೆಯಿಂದ ವಿಚಲಿತರಾದ ನಟಿ ರಚಿತಾ ರಾಮ್, ಕೂಡಲೇ ಆ ಅಭಿಮಾನಿಯ ನಡೆಗೆ ತೀವ್ರ ಅಸಮಾಧಾನಗೊಂಡು ಗರಂ ಆಗಿದ್ದಾರೆ. ತಕ್ಷಣವೇ ಎಚ್ಚೆತ್ತ ಬೌನ್ಸರ್ಸ್ಗಳು ಮತ್ತು ಸ್ಥಳದಲ್ಲಿದ್ದ ಪೊಲೀಸರು ಮಧ್ಯಪ್ರವೇಶಿಸಿ, ಆತನನ್ನು ವೇದಿಕೆಯಿಂದ ಕೆಳಗೆ ಕಳುಹಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಸೆಲ್ಫಿ ಕ್ರೇಜ್ ಹೆಚ್ಚಾಗಿರುವ ಇಂತಹ ಸಂದರ್ಭಗಳಲ್ಲಿ ಸೆಲೆಬ್ರಿಟಿಗಳ ವೈಯಕ್ತಿಕ ಭದ್ರತೆ ಮತ್ತು ಗೌರವಕ್ಕೆ ಧಕ್ಕೆಯಾಗುತ್ತಿರುವುದು ಈ ಘಟನೆಯಿಂದ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.