LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಹುಟ್ಟುಹಬ್ಬದ ಗಿಫ್ಟ್ ರೂಪದಲ್ಲಿ ಮಗನಿಗೆ ಬಂದೂಕು ನೀಡಿದ್ದ ತಾಯಿ ; ಗುಂಡಿನ ದಾಳಿಗೆ ಅಪ್ರಾಪ್ತರೂ ಸೇರಿದಂತೆ ನಾಲ್ವರ ಬಲಿ !

ಅಮೆರಿಕದ ಓರೆಗಾನ್ ರಾಜ್ಯದಲ್ಲಿ ಇತ್ತೀಚೆಗೆ ನಡೆದ ಅತ್ಯಂತ ಭೀಕರ ಶಾಲಾ ಗುಂಡಿನ ದಾಳಿ ಪ್ರಕರಣವು ಇಡೀ ದೇಶವನ್ನು ಬೆಚ್ಚಿಬೀಳಿಸಿದೆ. ಕಳೆದ ವಾರ ಸಿಲ್ವರ್ ರೈಲ್ ಪ್ರಾಥಮಿಕ ಶಾಲೆಯಲ್ಲಿ ನಡೆದ ಈ ಶೂಟೌಟ್‌ನಲ್ಲಿ ಮೂವರು ಮಕ್ಕಳು ಸೇರಿದಂತೆ ಒಟ್ಟು ನಾಲ್ವರು ಪ್ರಾಣ ಕಳೆದುಕೊಂಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಹೊಸದೊಂದು ಸ್ಫೋಟಕ ಮಾಹಿತಿ ಹೊರಬಿದ್ದಿದ್ದು, ದಾಳಿಕೋರ ಹದಿಹರೆಯದ ಬಾಲಕನಿಗೆ ಸ್ವತಃ ಆತನ ತಾಯಿಯೇ ಬಂದೂಕನ್ನು ಹುಟ್ಟುಹಬ್ಬದ ಉಡುಗೊರೆಯಾಗಿ ನೀಡಿದ್ದಳು ಎಂಬುದು ತನಿಖೆಯಿಂದ ತಿಳಿದುಬಂದಿದೆ.

ಸಿಬಿಎಸ್ ನ್ಯೂಸ್ ವರದಿ ಮಾಡಿರುವ ಪ್ರಕಾರ, ಹದಿನಾರರ ಹರೆಯದ ಶೂಟರ್‌ನ ತಾಯಿ ಶೌಂಟೈ ನಿಕರ್ಸನ್ ಎಂಬುವವರು ಕಳೆದ ಆಗಸ್ಟ್ ತಿಂಗಳಲ್ಲಿ ಮ್ಯಾವರಿಕ್ 88 ಪಂಪ್-ಆಕ್ಷನ್ 12-ಗೇಜ್ ಶಾಟ್‌ಗನ್ ಅನ್ನು ಕಾನೂನುಬದ್ಧವಾಗಿ ಖರೀದಿಸಿದ್ದರು. ಮನರಂಜನಾ ಬಳಕೆಗಾಗಿ ಈ ಶಸ್ತ್ರಾಸ್ತ್ರವನ್ನು ತಮ್ಮ ಮಗ ಗ್ರಿಫಿನ್ ಜೆ. ಜಾನ್ II ಗೆ ಹುಟ್ಟುಹಬ್ಬದ ಗಿಫ್ಟ್ ಆಗಿ ನೀಡಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ಘಟನೆಯ ವಿವರ

ಕಳೆದ ಗುರುವಾರ ನಡೆದ ಈ ಭೀಕರ ಕೃತ್ಯದಲ್ಲಿ, ಈ ಹಿಂದೆ ಅದೇ ಶಾಲೆಯಲ್ಲಿ ವಿಶೇಷ ಅಗತ್ಯವಿರುವ ವಿದ್ಯಾರ್ಥಿಯಾಗಿ ಓದಿದ್ದ ಹದಿಹರೆಯದ ಬಾಲಕ ಶಾಲೆಯ ಮೇಲೆ ದಾಳಿ ನಡೆಸಿದ್ದಾನೆ. ಮೊದಲು ಆತ ರಸ್ತೆಯಲ್ಲಿ ಸಂಚರಿಸುತ್ತಿದ್ದ ಪಿಕಪ್ ಟ್ರಕ್ ಮೇಲೆ ಗುಂಡು ಹಾರಿಸಿದ್ದಾನೆ. ಇದರಿಂದ ಎಚ್ಚೆತ್ತುಕೊಂಡ ಟ್ರಕ್ ಚಾಲಕ ತುರ್ತು ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಬಳಿಕ ಶಾಲೆಯ ಲಾಕ್ ಮಾಡಲಾಗಿದ್ದ ಗಾಜಿನ ಬಾಗಿಲುಗಳನ್ನು ಒಡೆದು ಬಲವಂತವಾಗಿ ಒಳಪ್ರವೇಶಿಸಿದ್ದಾನೆ.

ಒಳಗೆ ನುಗ್ಗಿದ ತಕ್ಷಣ ಎಡಭಾಗದ ಮೊದಲ ತರಗತಿ ಕೊಠಡಿಗೆ ತೆರಳಿದ ಆತ ವಿವೇಚನೆಯಿಲ್ಲದೆ ಗುಂಡಿನ ದಾಳಿ ನಡೆಸಿದ್ದಾನೆ. ಈ ಅಮಾನವೀಯ ದಾಳಿಯಲ್ಲಿ ಐದು ವರ್ಷದ ರೋಮ್ ಸಮರ್ ಸೇರಿದಂತೆ ಎಂಟು ಮತ್ತು 11 ವರ್ಷ ವಯಸ್ಸಿನ ಮಕ್ಕಳು ಹಾಗೂ ಇಪ್ಪತ್ತೈದು ವರ್ಷದ ಮೇಗನ್ ಲ್ಯಾಂಬರ್ಟ್ ಎಂಬ ಶಿಕ್ಷಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಲ್ಲದೆ, ಏಳು ವರ್ಷದ ಬಾಲಕಿ ಮತ್ತು ಐವತ್ತೈದು ವರ್ಷದ ಶಿಕ್ಷಕರೊಬ್ಬರು ಗಾಯಗೊಂಡಿದ್ದಾರೆ. ದಾಳಿ ನಡೆದ ಸಂದರ್ಭದಲ್ಲಿ ಆ ಕೊಠಡಿಯಲ್ಲಿ ನಾಲ್ವರು ವಯಸ್ಕರು ಮತ್ತು ಐದು ಮಕ್ಕಳು ಸೇರಿದಂತೆ ಒಟ್ಟು ಒಂಬತ್ತು ಜನ ಉಪಸ್ಥಿತರಿದ್ದರು.

ಧೈರ್ಯ ಮೆರೆದ ಸ್ಥಳೀಯ ವ್ಯಕ್ತಿ

ಆರೋಪಿ ಬಾಲಕನ ಅಟ್ಟಹಾಸವನ್ನು ಸ್ಥಳೀಯ ವ್ಯಕ್ತಿಯೊಬ್ಬರು ಧೈರ್ಯದಿಂದ ತಡೆದಿದ್ದಾರೆ. ಟ್ರಕ್ ಮೇಲೆ ದಾಳಿ ನಡೆದುದನ್ನು ಗಮನಿಸಿ ಶಾಲೆಯೊಳಗೆ ಬಂದ ಮೂವತ್ತಾರು ವರ್ಷದ ಕೈಲುಬ್ ಗಿಯಾಮಂಕೋ ಎಂಬುವವರು ಶೂಟರ್‌ನನ್ನು ಎದುರಿಸಿದ್ದಾರೆ. ಆ ಸಂದರ್ಭದಲ್ಲಿ ಶಿಕ್ಷಕರೊಬ್ಬರು ಬಂದೂಕನ್ನು ಕಿತ್ತುಕೊಳ್ಳಲು ಹೆಣಗಾಡುತ್ತಿದ್ದರು. ಅದೇ ಸಮಯದಲ್ಲಿ ಇಬ್ಬರು ವಿದ್ಯಾರ್ಥಿಗಳ ತಂದೆಯಾಗಿರುವ ಗಿಯಾಮಂಕೋ ತರಗತಿ ಕೊಠಡಿಯೊಳಗೆ ನುಗ್ಗಿ ದಾಳಿಕೋರನನ್ನು ಗುಂಡಿಕ್ಕಿ ಹತ್ಯೆ ಮಾಡಿದರು.

ಪ್ರಸ್ತುತ ಈ ಘಟನೆಯ ಹಿಂದಿನ ನಿಖರವಾದ ಉದ್ದೇಶದ ಬಗ್ಗೆ ತನಿಖೆ ಮುಂದುವರಿದಿದೆ. ಹತ್ಯೆಗೀಡಾದ ಮಕ್ಕಳ ಪೋಷಕರು ಶಾಲೆಯ ಸುರಕ್ಷತಾ ಕ್ರಮಗಳ ಬಗ್ಗೆ ಹಾಗೂ ಹದಿಹರೆಯದ ಬಾಲಕನಿಗೆ ಬಂದೂಕು ಹೇಗೆ ಸಿಕ್ಕಿತು ಎಂಬುದನ್ನು ಪತ್ತೆಹಚ್ಚಲು ವಕೀಲರ ಸಹಾಯ ಪಡೆದಿದ್ದಾರೆ. ಇದರೊಂದಿಗೆ ಶಾಲಾ ಆಡಳಿತ ಮಂಡಳಿಯ ಹೊಣೆಗಾರಿಕೆಯ ಬಗ್ಗೆಯೂ ಪ್ರಾಸಿಕ್ಯೂಟರ್‌ಗಳು ಪರಿಶೀಲನೆ ನಡೆಸುತ್ತಿದ್ದಾರೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಂಧ ವಿದ್ಯಾರ್ಥಿಗಳ ಬಾಳಿಗೆ ಬೆಳಕಾದ ಯುವತಿ! ಧ್ವನಿ ಆಧಾರಿತ ಬ್ರೈಲ್ ಪ್ರಿಂಟರ್ ಆವಿಷ್ಕಾರಕ್ಕೆ ಜಾಗತಿಕ ಮನ್ನಣೆ100 ವರ್ಷವಾದರೂ ಬೆನ್ನುಮೂಳೆ ಗಟ್ಟಿಯಾಗಿರಬೇಕಾ? ಮಲಗುವಾಗ ಈ ಒಂದು ತಪ್ಪು ಮಾಡಬೇಡಿ!ಏಷ್ಯನ್ ಪ್ಯಾರಾ ಗೇಮ್ಸ್: ಈಜು ಸ್ಪರ್ಧೆಯಲ್ಲಿ ಕನ್ನಡಿಗ ನಿರಂಜನ್ ಮುಕುಂದನ್‌ಗೆ ಕಂಚಿನ ಪದಕ, ಡಿಸಿಎಂ ಅಭಿನಂದನೆಭಾರತವನ್ನು ವಿಭಜಿಸುವ ಪ್ರಯತ್ನಗಳನ್ನು ಎದುರಿಸಿ, ಶತ್ರುಗಳನ್ನು ಸೋಲಿಸಬೇಕು! ವಿಜಯದಶಮಿ ದಿನ ಪ್ರಧಾನಿ ಮೋದಿ ಸಂದೇಶSDRF ಪರಿಹಾರ ಮೊದಲು ಕೊಡಲು ಆಗ್ರಹ: ಸರಕಾರದಿಂದ ರೈತರಿಗೆ ದೋಖಾ- ಛಲವಾದಿ ನಾರಾಯಣಸ್ವಾಮಿಟೈಗರ್ ಶ್ರಾಫ್‌ಗೂ ಮುನ್ನ ಮತ್ತೊಬ್ಬ ಬಾಲಿವುಡ್ ನಟನಿಗೆ ಟಾರ್ಗೆಟ್! ಶೂಟರ್‌ಗಳಿಂದ ಸ್ಪೋಟಕ ಮಾಹಿತಿಗ್ರಾಹಕರಿಗೆ ಗುಡ್ ನ್ಯೂಸ್: 3 ಹೊಸ ಪ್ರಿಪೇಯ್ಡ್ ಪ್ಲಾನ್ ಪರಿಚಯಿಸಿದ ಏರ್ಟೆಲ್ವಿಜಯದಶಮಿ ದಿನವೇ ಎರಡನೇ ಮಗಳ ಹೆಸರನ್ನು ಘೋಷಿಸಿದ ದೀಪಿಕಾ–ರಣವೀರ್! ಏನದು ಹೆಸರು?BREAKING: ಈಜಿಪ್ಟ್ ಮರುಭೂಮಿ ಹೆದ್ದಾರಿಯಲ್ಲಿ ಭೀಕರ ದುರಂತ ; 13 ಮಂದಿ ಪ್ರವಾಸಿಗರ ದುರ್ಮರಣ !ಟೈಗರ್ ಶ್ರಾಫ್‌ಗೂ ಮುನ್ನ ಮತ್ತೊಬ್ಬ ಬಾಲಿವುಡ್ ನಟನನ್ನು ಟಾರ್ಗೆಟ್ ಮಾಡಲು ಸಂಚು! ಶೂಟರ್‌ಗಳಿಂದ ಸ್ಫೋಟಕ ಮಾಹಿತಿ