ಸಾಗರ: ಮಲೆನಾಡಿನ ಹೆಬ್ಬಾಗಿಲು ಸಾಗರ ನಗರದಲ್ಲಿ ಇದೇ ಮೊದಲ ಬಾರಿಗೆ ಬೃಹತ್ ಮಟ್ಟದ ಜಿಲ್ಲಾ ಕೃಷಿ ಮೇಳವನ್ನು ಆಯೋಜಿಸಲಾಗಿದೆ ಎಂದು ಆಪ್ಸ್ ಕೋಸ್ ಅಧ್ಯಕ್ಷರಾದ ಇಂದೂಧರ ಗೌಡ ತಿಳಿಸಿದ್ದಾರೆ.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಐದು ದಿನಗಳ ಕಾಲ ಕೃಷಿ ಸಂಭ್ರಮ
ಈ ಕೃಷಿ ಮೇಳವು ಸಾಗರದ ನೆಹರೂ ಮೈದಾನದಲ್ಲಿ ಅಕ್ಟೋಬರ್ 22ರಂದು ಸಂಜೆ 5 ಗಂಟೆಗೆ ವಿದ್ಯುಕ್ತವಾಗಿ ಉದ್ಘಾಟನೆಗೊಳ್ಳಲಿದೆ. ಒಟ್ಟು ಐದು ದಿನಗಳ ಕಾಲ ನಿರಂತರವಾಗಿ ನಡೆಯಲಿರುವ ಈ ಮೇಳವು ರೈತರಿಗೆ ಕೃಷಿ ಜಗತ್ತಿನ ವಿಸ್ಮಯಗಳನ್ನು ಪರಿಚಯಿಸಲಿದೆ ಎಂದರು.
ಸಂಘ-ಸಂಸ್ಥೆಗಳ ಒಗ್ಗೂಡುವಿಕೆ
ಜನಸ್ನೇಹಿ ಗೆಳೆಯರ ಬಳಗದ ನೇತೃತ್ವದಲ್ಲಿ ನಮ್ಮ ಸಂಸ್ಥೆಗಳ ಸಹಯೋಗ ಕೋರಿ ಬಂದಾಗ, ರೈತರಿಗೆ ಉಪಯುಕ್ತವಾಗುವ ಇಂತಹ ಕಾರ್ಯಕ್ರಮ ಮಾಡಲೇಬೇಕೆಂಬ ಹಂಬಲ ನಮಗೂ ಇತ್ತು. ಈ ಹಿನ್ನೆಲೆಯಲ್ಲಿ ಸುಧೀರ್ ಶೆಟ್ಟಿ, ಶರತ್, ಮಂಜುನಾಥ್ ಹಾಗೂ ಪ್ರಭಾಕರ್ ಅವರ ತಂಡದೊಂದಿಗೆ ಆಪ್ಸ್ ಕೋಸ್, ತೋಟಗಾರ್ಸ್, ಮ್ಯಾಮ್ಕೋಸ್‌ನಂತಹ ಪ್ರಮುಖ ಸಹಕಾರಿ ಸಂಸ್ಥೆಗಳು ಕೈಜೋಡಿಸಿವೆ. ಜೊತೆಗೆ ಜಿಲ್ಲಾ ರೈತ ಸಂಘದ ಅಧ್ಯಕ್ಷರಾದ ದಿನೇಶ್ ಅವರ ಬೆಂಬಲವೂ ಈ ಕಾರ್ಯಕ್ರಮಕ್ಕೆ ದೊರೆತಿದೆ ಎಂದು ಅವರು ವಿವರಿಸಿದರು.
ಅತ್ಯಾಧುನಿಕ ಕೃಷಿ ಯಂತ್ರೋಪಕರಣಗಳ ಪ್ರದರ್ಶನ
ಹಿಂದೆ ಎತ್ತು ಹಾಗೂ ಸಾಂಪ್ರದಾಯಿಕ ಉಪಕರಣಗಳಲ್ಲೇ ಜೀವನ ಸಾಗಿಸುತ್ತಿದ್ದ ಕಾಲವಿತ್ತು, ಆದರೆ ಇಂದು ಕೃಷಿ ಕ್ಷೇತ್ರ ಸಂಪೂರ್ಣ ಯಾಂತ್ರೀಕರಣದತ್ತ ಸಾಗುತ್ತಿದೆ. ರೈತರ ಶ್ರಮವನ್ನು ಕಡಿಮೆ ಮಾಡಲು ಮಾರುಕಟ್ಟೆಗೆ ಬಂದಿರುವ ಅಡಿಕೆ ಸುಲಿಯುವ ನೂತನ ಯಂತ್ರಗಳು, ಅಡಿಕೆ ಕೊಯ್ಯುವ ದೋಟಿಗಳು, ಮಿನಿ ಟ್ರ್ಯಾಕ್ಟರ್‌ಗಳು ಹಾಗೂ ಕಳೆ ತೆಗೆಯುವ ಆಧುನಿಕ ಯಂತ್ರೋಪಕರಣಗಳು ಒಂದೇ ಸೂರಿನಡಿ ಈ ಮೇಳದಲ್ಲಿ ರೈತರಿಗೆ ಲಭ್ಯವಾಗಲಿವೆ ಎಂದರು.
ರೈತ ಬಾಂಧವರಿಗೆ ಮುಕ್ತ ಆಹ್ವಾನ
ಈ ಕಾರ್ಯಕ್ರಮವು ಕೇವಲ ಸಾಗರ ತಾಲೂಕಿಗೆ ಮಾತ್ರ ಸೀಮಿತವಾಗಿರದೆ ಇಡೀ ಜಿಲ್ಲಾ ಮಟ್ಟದ ಬೃಹತ್ ಕೃಷಿ ಮೇಳವಾಗಿದೆ. ಆದ್ದರಿಂದ ಜಿಲ್ಲೆಯ ಎಲ್ಲಾ ತಾಲೂಕುಗಳ ರೈತ ಬಾಂಧವರು ಹಾಗೂ ವ್ಯಾಪಾರಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಈ ಕೃಷಿ ಮೇಳದ ಸದುಪಯೋಗ ಪಡೆದುಕೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

ಜನಸ್ನೇಹಿ ಇವೆಂಟ್ಸ್‌ನ ಪ್ರಭಾಕರ ಪೂಜಾರಿ ಹೇಳಿದ್ದೇನು?
ಸಾಗರ ಪಟ್ಟಣದ ನೆಹರೂ ಮೈದಾನದಲ್ಲಿ ನಾಳೆಯಿಂದ ಅಕ್ಟೋಬರ್.26ರವರೆಗೆ ಬೃಹತ್ ಮಟ್ಟದ ‘ಮಲೆನಾಡ ಸುಗ್ಗಿ ಮತ್ತು ಕೃಷಿ ಮೇಳ’ ಆಯೋಜಿಸಲಾಗಿದೆ ಎಂದು ಜನಸ್ನೇಹಿ ಇವೆಂಟ್ಸ್‌ನ ಪ್ರಭಾಕರ ಪೂಜಾರಿ ತಿಳಿಸಿದ್ದಾರೆ.
ಜನಸ್ನೇಹಿ ಇವೆಂಟ್ಸ್ ಹಾಗೂ ರಾಜರತ್ನ ಇವೆಂಟ್ಸ್ ವತಿಯಿಂದ ಸಾಗರದಲ್ಲಿ ಈ ಹಿಂದೆಯೂ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗಿದೆ. ಈ ಬಾರಿಯ ಕಾರ್ಯಕ್ರಮವು ಕೇವಲ ಕೃಷಿ ಮೇಳಕ್ಕೆ ಸೀಮಿತವಾಗಿರದೆ, ದೀಪಾವಳಿ ಹಾಗೂ ದಸರಾ ಹಬ್ಬದ ಸುಗ್ಗಿಯ ಸಂಭ್ರಮವನ್ನು ಹೊತ್ತು ತರುತ್ತಿದೆ ಎಂದು ವಿವರಿಸಿದರು.
150ಕ್ಕೂ ಹೆಚ್ಚು ವೈವಿಧ್ಯಮಯ ಮಳಿಗೆಗಳು
ನೆಹರೂ ಮೈದಾನದಲ್ಲಿ ಒಟ್ಟು 150ಕ್ಕೂ ಹೆಚ್ಚಿನ ಮಳಿಗೆಗಳು ತಲೆಎತ್ತಲಿವೆ. ಇದಕ್ಕಾಗಿ ಪ್ರತ್ಯೇಕ ಬ್ಲಾಕ್‌ಗಳನ್ನು ನಿರ್ಮಿಸಲಾಗಿದ್ದು, ವಾಣಿಜ್ಯ ವಿಭಾಗದಲ್ಲೇ ಸುಮಾರು 112ಕ್ಕೂ ಹೆಚ್ಚು ಮಳಿಗೆಗಳು ಇರಲಿವೆ. ಕೃಷಿ ಮತ್ತು ಆಹಾರ (ಫುಡ್) ವಿಭಾಗಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಗ್ರಾಮೀಣ ಸಂಸ್ಕೃತಿಯನ್ನು ಬಿಂಬಿಸುವ ಆಲೆಮನೆ ಸೆಟ್ ಇಲ್ಲಿನ ಪ್ರಮುಖ ಆಕರ್ಷಣೆಯಾಗಲಿದೆ ಎಂದು ತಿಳಿಸಿದರು.
ಅರ್ಧ ಎಕರೆ ವಿಸ್ತೀರ್ಣದಲ್ಲಿ ಸಸ್ಯ ಮೇಳ
ರೈತರು ಹಾಗೂ ಸಾರ್ವಜನಿಕರಿಗಾಗಿ ಸುಮಾರು ಅರ್ಧ ಎಕರೆಗೂ ಹೆಚ್ಚಿನ ವಿಸ್ತೀರ್ಣದಲ್ಲಿ ಬೃಹತ್ ನರ್ಸರಿ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ನಾಲ್ಕೈದು ಪ್ರಮುಖ ನರ್ಸರಿಗಳು ಮೈದಾನಕ್ಕೆ ಆಗಮಿಸಿದ್ದು, ಹಲವು ವೈವಿಧ್ಯಮಯ ತಳಿಗಳ ಗಿಡಗಳನ್ನು ಪರಿಚಯಿಸಲಾಗುತ್ತಿದೆ. ಜೊತೆಗೆ ಕೃಷಿಗೆ ಪೂರಕವಾದ ಆಧುನಿಕ ಉಪಕರಣಗಳು ಕೂಡ ಪ್ರದರ್ಶನ ಹಾಗೂ ಮಾರಾಟಕ್ಕೆ ಲಭ್ಯವಿರಲಿವೆ ಎಂದರು.

ಸ್ವದೇಶಿ ಉತ್ಪನ್ನಗಳು ಹಾಗೂ ವಸ್ತ್ರ ವೈಭವ
ಸ್ವದೇಶಿ ಉತ್ಪನ್ನಗಳಿಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಖಾದಿ, ಕಾಶ್ಮೀರಿ ಸೀರೆ, ಇಳಕಲ್ ಸೀರೆ ಸೇರಿದಂತೆ ದೇಶದ ವಿವಿಧ ಭಾಗಗಳ ಪ್ರಸಿದ್ಧ ಬಟ್ಟೆಗಳು, ಆಹಾರ ಪದಾರ್ಥಗಳು, ಗೃಹೋಪಯೋಗಿ ವಸ್ತುಗಳು ಹಾಗೂ ಅಲಂಕಾರಿಕ ವಸ್ತುಗಳು ಒಂದೇ ಕಡೆ ದೊರೆಯಲಿವೆ.
ಸ್ಥಳೀಯ ತಯಾರಕರು ಹಾಗೂ ರೈತರಿಗೆ ವೇದಿಕೆ
ಸಾಗರ ಸುತ್ತಮುತ್ತ ಮನೆಗಳಲ್ಲೇ ಬಟ್ಟೆ ಹಾಗೂ ಇತರ ಉತ್ಪನ್ನಗಳನ್ನು ತಯಾರಿಸುವ ಅನೇಕರಿಗೆ ಸೂಕ್ತ ಮಾರುಕಟ್ಟೆಯ ವೇದಿಕೆ ಇರುವುದಿಲ್ಲ. ಅಂಥವರಿಗೂ ಈ ಮೇಳದಲ್ಲಿ ಅವಕಾಶ ಕಲ್ಪಿಸಲಾಗಿದೆ. ಇದರೊಂದಿಗೆ ಮಾದರಿ ಕೃಷಿಕರನ್ನು ಗುರುತಿಸಿ ಸನ್ಮಾನಿಸುವ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿದೆ.
ಐದು ದಿನಗಳ ಕಾಲ ಸಂಜೆ ಸಾಂಸ್ಕೃತಿಕ ರಸದೌತಣ
ಕೇವಲ ವ್ಯಾಪಾರ-ವಹಿವಾಟಷ್ಟೇ ಅಲ್ಲದೆ ಸಾರ್ವಜನಿಕರ ಮನರಂಜನೆಗಾಗಿ ಐದು ದಿನಗಳ ಕಾಲ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಸ್ಥಳೀಯ ಪ್ರತಿಭೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಭರತನಾಟ್ಯ, ನೃತ್ಯ ಮುಂತಾದ ಕಾರ್ಯಕ್ರಮಗಳು ವೇದಿಕೆಯಲ್ಲಿ ಮೂಡಿಬರಲಿವೆ.
ಸ್ಥಳೀಯ ಸಂಸ್ಥೆಗಳ ಸಾಥ್
ಮುಂದಿನ ವಾರ ಶಿವಮೊಗ್ಗದಲ್ಲಿ ಕೃಷಿ ಮೇಳ ನಡೆಯುವುದರಿಂದ ದಿನಾಂಕಗಳ ಹೊಂದಾಣಿಕೆಯಾಗದಿರಲಿ ಎಂಬ ಕಾರಣಕ್ಕೆ ಒಂದು ವಾರ ಮುಂಚಿತವಾಗಿಯೇ ಸಾಗರದಲ್ಲಿ ಮೇಳ ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಆಪ್ಸ್ ಕೋಸ್, ಶ್ರೀ ಮಹಾಗಣಪತಿ ದೇವಸ್ಥಾನ ಸಮಿತಿ, ಅಡಿಕೆ ಬೆಳೆಗಾರರ ಸಂಘ, ಮಾರಿಕಾಂಬ ನ್ಯಾಷನಲ್ ಸಮಿತಿ ಸೇರಿದಂತೆ ಸ್ಥಳೀಯ ಹಲವು ಸಂಘ-ಸಂಸ್ಥೆಗಳು ಕೈಜೋಡಿಸಿವೆ. ಎಲ್ಲ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದ್ದು, ಸಾಗರದ ಸಮಸ್ತ ನಾಗರಿಕರು ಹಾಗೂ ರೈತ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಮೇಳವನ್ನು ಯಶಸ್ವಿಗೊಳಿಸಬೇಕೆಂದು ಪ್ರಭಾಕರ ಪೂಜಾರಿ ಮನವಿ ಮಾಡಿದರು.
ಈ ವೇಳೆ ರೈತ ಸಂಘದ ಅಧ್ಯಕ್ಷ ದಿನೇಶ್ ಶಿರವಾಳ, ಬಂಟರ ಸಂಘದ ಅಧ್ಯಕ್ಷ ಸುಧೀರ್ ಶೆಟ್ಟಿ, ರಾಜರತ್ನ ಇವೆಂಟ್ ನ ಶರತ್, ಲಯನ್ಸ್ ಕ್ಲಬ್ ನ ಸಂತೋಷ್, ಜ್ಯೋತಿ ಉಪಸ್ಥಿತರಿದ್ದರು.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು..