ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ನಡೆದ ದುರ್ಘಟನೆಯೊಂದರಲ್ಲಿ ಮಹಿಳೆಯೊಬ್ಬರು ಅಪಾಯಕಾರಿ ಮಾಂಜಾ ದಾರಕ್ಕೆ ಬಲಿಯಾದ ಬೆನ್ನಲ್ಲೇ, ಎಚ್ಚೆತ್ತುಕೊಂಡಿರುವ ಹುಬ್ಬಳ್ಳಿ-ಧಾರವಾಡ ಪೊಲೀಸ್ ಇಲಾಖೆಯು ಅಕ್ರಮ ಮಾಂಜಾ ದಾರ ಮಾರಾಟಗಾರರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಇಲಾಖೆಯು ವಿಶೇಷ ಕಾರ್ಯಾಚರಣೆಗಳನ್ನು ಚುರುಕುಗೊಳಿಸಿದೆ.
ಧಾರವಾಡದ ಎಸಿಪಿ ಪ್ರಶಾಂತ ಸಿದ್ದನಗೌಡರ್ ನೇತೃತ್ವದ ಪೊಲೀಸ್ ತಂಡವು ಧಾರವಾಡದ ಪ್ರಮುಖ ಮಾರುಕಟ್ಟೆ ಪ್ರದೇಶಗಳಲ್ಲಿ ದಿಢೀರ್ ದಾಳಿ ನಡೆಸಿ ವ್ಯಾಪಕ ಶೋಧ ಕಾರ್ಯ ನಡೆಸಿದೆ. ಈ ಕಾರ್ಯಾಚರಣೆಯ ಸಂದರ್ಭದಲ್ಲಿ ನಿಷೇಧಿತ ಹಾಗೂ ಅಪಾಯಕಾರಿ ನಿಯಮಬಾಹಿರ ಮಾಂಜಾ ದಾರಗಳನ್ನು ಅಕ್ರಮವಾಗಿ ಸಂಗ್ರಹಿಸಿ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಪೊಲೀಸರು ನಡೆಸಿದ ಈ ದಾಳಿಯಲ್ಲಿ 500ಕ್ಕೂ ಅಧಿಕ ಅಪಾಯಕಾರಿ ಮಾಂಜಾ ದಾರಗಳ ರೀಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಸಾರ್ವಜನಿಕರ ಜೀವಕ್ಕೆ ಕುತ್ತು ತರುವ ಈ ರೀತಿಯ ಮಾರಕ ವಸ್ತುಗಳನ್ನು ದಾಸ್ತಾನು ಮಾಡಿಕೊಳ್ಳದಂತೆ ಮತ್ತು ಮಾರಾಟ ಮಾಡದಂತೆ ವ್ಯಾಪಾರಸ್ಥರಿಗೆ ಕರಾರುವಾಕ್ ಎಚ್ಚರಿಕೆ ನೀಡಲಾಗಿದೆ.
ಮಹಿಳೆಯ ದುರ್ಮರಣದ ನಂತರವೂ ಇಂತಹ ಮಾರಾಟ ಮುಂದುವರಿದಿರುವುದನ್ನು ಪೊಲೀಸ್ ಇಲಾಖೆಯು ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಮುಂದಿನ ದಿನಗಳಲ್ಲಿಯೂ ಇಂತಹ ಅಕ್ರಮ ಚಟುವಟಿಕೆಗಳ ಮೇಲೆ ತೀವ್ರ ನಿಗಾ ಇಡಲಾಗುವುದು ಹಾಗೂ ನಿಯಮ ಉಲ್ಲಂಘಿಸುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.