ಬೆಂಗಳೂರಿನಲ್ಲಿ ಡಿಜಿಟಲ್ ಅರೆಸ್ಟ್ ಹಾಗೂ ಆರ್ಥಿಕ ವಂಚನೆಗೆ ಬಳಸುತ್ತಿದ್ದ ಅಕ್ರಮ ಸಿಮ್ ಬಾಕ್ಸ್ (SIM Box) ಜಾಲವನ್ನು ರಾಜ್ಯ ಸೈಬರ್ ಕಮಾಂಡ್ ಘಟಕ ಯಶಸ್ವಿಯಾಗಿ ಬಯಲಿಗೆಳೆದಿದೆ. ವೈಟ್‌ಫೀಲ್ಡ್ ಸೆನ್ ಠಾಣಾ ವ್ಯಾಪ್ತಿಯ ಕಾಡುಗೋಡಿ ಹಾಗೂ ಪಟ್ಟಂದೂರು ಅಗ್ರಹಾರದಲ್ಲಿ ಬಾಡಿಗೆ ಮನೆಯಲ್ಲಿ ಈ ದಂಧೆ ನಡೆಸುತ್ತಿದ್ದ ಮಹಾರಾಷ್ಟ್ರ ಮೂಲದ ಇಬ್ಬರು ಅಪ್ರಾಪ್ತರು ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಏರ್‌ಟೆಲ್ ಅಧಿಕಾರಿಗಳ ದೂರಿನ ಮೇರೆಗೆ ಭಾರತೀಯ ದೂರಸಂಪರ್ಕ ಇಲಾಖೆ ಸಹಯೋಗದೊಂದಿಗೆ ಈ ಕಾರ್ಯಾಚರಣೆ ನಡೆಸಲಾಗಿದೆ.
ಈ ಕುಕೃತ್ಯಕ್ಕಾಗಿ ವಂಚಕರು ಮಕ್ಕಳನ್ನು ಬಳಕೆ ಮಾಡಿಕೊಳ್ಳುತ್ತಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಮಹಾರಾಷ್ಟ್ರದಲ್ಲಿ ಏರ್‌ಟೆಲ್ ಸಿಮ್‌ಗಳನ್ನು ಖರೀದಿಸಿ ಅವುಗಳನ್ನು ಇ-ಸಿಮ್‌ಗಳಾಗಿ (eSIM) ಪರಿವರ್ತಿಸಿ ಬೆಂಗಳೂರಿಗೆ ತರಲಾಗುತ್ತಿತ್ತು. ಬಂಧಿತರು ಕೇವಲ ಪಾತ್ರಧಾರಿಗಳಾಗಿದ್ದು, ವಿದೇಶದಲ್ಲಿ ಕುಳಿತಿರುವ ಪ್ರಮುಖ ಕಿಂಗ್‌ಪಿನ್‌ಗಳ ನಿರ್ದೇಶನದಂತೆ ಕಮಿಷನ್ ಆಸೆಗೆ ಈ ಕೃತ್ಯ ಎಸಗುತ್ತಿದ್ದರು ಎಂಬುದು ಗೊತ್ತಾಗಿದೆ. ತಾಂತ್ರಿಕ ಮಾಹಿತಿ ಆಧರಿಸಿ ಪೊಲೀಸರು ದಾಳಿ ನಡೆಸಿದಾಗ ಒಟ್ಟು 10 ಸಿಮ್ ಬಾಕ್ಸ್ ಹಾಗೂ ಇತರೆ ಉಪಕರಣಗಳು ಪತ್ತೆಯಾಗಿವೆ.
ಪ್ರತಿ ಸಿಮ್ ಬಾಕ್ಸ್‌ನಲ್ಲಿ 32 ಸಿಮ್ ಕಾರ್ಡ್‌ಗಳನ್ನು ಹಾಕುವ ಸಾಮರ್ಥ್ಯವಿದ್ದು, ಒಟ್ಟು 10 ಬಾಕ್ಸ್‌ಗಳ ಮೂಲಕ 320 ಸಿಮ್‌ಗಳನ್ನು ಏಕಕಾಲಕ್ಕೆ ಆಪರೇಟ್ ಮಾಡಲಾಗುತ್ತಿತ್ತು. ಕಳೆದ ಐದು ತಿಂಗಳ ಹಿಂದೆಯೇ ಈ ಮನೆಗಳನ್ನು ಬಾಡಿಗೆಗೆ ಪಡೆದಿದ್ದ ಆರೋಪಿಗಳು, 'ಆರೋಗ್ಯ ಸರಿಯಿಲ್ಲ' ಎಂದು ಮಾಲೀಕರಿಗೆ ಸುಳ್ಳು ಹೇಳಿ ನಂಬಿಸಿದ್ದರು. ಅಷ್ಟೇ ಅಲ್ಲದೆ, ಯಾರಾದರೂ ಬಲವಂತವಾಗಿ ಮನೆ ಪ್ರವೇಶಿಸಲು ಯತ್ನಿಸಿದರೆ ಸ್ವಯಂಚಾಲಿತವಾಗಿ ಉಪಕರಣಗಳು ಸ್ಥಗಿತಗೊಳ್ಳುವ ಅತ್ಯಾಧುನಿಕ ತಂತ್ರಜ್ಞಾನವನ್ನೂ ಅಳವಡಿಸಿಕೊಂಡು ರಿಮೋಟ್ ಮೂಲಕವೇ ಜಾಲವನ್ನು ನಿಯಂತ್ರಿಸುತ್ತಿದ್ದರು.
ಸೈಬರ್ ಅಪರಾಧಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಅಕ್ರಮ ಸಿಮ್ ಬಾಕ್ಸ್ ಜಾಲದ ಪತ್ತೆ ದೊಡ್ಡ ಯಶಸ್ಸಾಗಿದೆ. ವಿದೇಶಿ ವಂಚಕರ ಕೈಗೊಂಬೆಯಾಗಿ ಇ-ಸಿಮ್ ಹಾಗೂ ಸಿಮ್ ಬಾಕ್ಸ್ ಬಳಸಿ ಸಾರ್ವಜನಿಕರನ್ನು ಸುಲಿಗೆ ಮಾಡುತ್ತಿದ್ದವರ ಜಾಲದ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದ್ದು, ಇನ್ನುಳಿದವರ ವಿಚಾರಣೆ ಚುರುಕುಗೊಂಡಿದೆ.