ಬೆಂಗಳೂರು: ಸಿಲಿಕಾನ್ ಸಿಟಿಯ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೋಡ್ ರೇಜ್ (ರಸ್ತೆ ಗಲಾಟೆ) ಹಿನ್ನೆಲೆಯಲ್ಲಿ ಬಿಹಾರ ಮೂಲದ ಯುವಕನೊಬ್ಬ ಭೀಕರವಾಗಿ ಕೊಲೆಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬಿಟಿಎಂ ಲೇಔಟ್‌ನ ಪಿ.ಜಿಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ರಂಜಿತ್ ಕುಮಾರ್ ಸಾಹು (25) ಮೃತಪಟ್ಟ ದುರ್ದೈವಿ. ಘಟನೆ ಸಂಬಂಧ ಮೃತನ ಸ್ನೇಹಿತ ನಿತೀಶ್ ಮುಖಿಯಾ ನೀಡಿದ ದೂರಿನ ಮೇರೆಗೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಮೂವರು ಅಪರಿಚಿತ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದಸರಾ ಹಬ್ಬದ ಹಿನ್ನೆಲೆಯಲ್ಲಿ ನಿತೀಶ್ ಮುಖಿಯಾ ಎಲೆಕ್ಟ್ರಾನಿಕ್ ಸಿಟಿ ಸಮೀಪದ ಪ್ರಗತಿನಗರದಲ್ಲಿರುವ ತನ್ನ ಅಣ್ಣನ ಮನೆಗೆ ಬಂದಿದ್ದನು. ಅಕ್ಟೋಬರ್ 21ರ ರಾತ್ರಿ ಊಟ ಮುಗಿಸಿ ನಡೆದುಕೊಂಡು ಹೋಗುತ್ತಿದ್ದಾಗ, ರಸ್ತೆಯಲ್ಲಿ ಕಾರೊಂದು ಅತಿ ವೇಗವಾಗಿ ಬಂದಿದೆ. ಈ ವೇಳೆ ವೇಗ ಕಡಿಮೆ ಮಾಡುವಂತೆ ನಿತೀಶ್ ಕಾರಿನ ಚಾಲಕನಿಗೆ ಸನ್ನೆ ಮಾಡಿದ್ದರು. ಇದರಿಂದ ಕೋಪಗೊಂಡ ಕಾರಿನಲ್ಲಿದ್ದ ದುಷ್ಕರ್ಮಿಗಳು, "ನಮ್ಮ ಕಾರಿಗೇ ಕೈ ತೋರಿಸುತ್ತೀಯಾ?" ಎಂದು ನಿತೀಶ್ ಮೇಲೆ ಹಲ್ಲೆ ನಡೆಸಿ ಅಲ್ಲಿಂದ ತೆರಳಿದ್ದರು.
ಆದರೆ ಕೆಲವೇ ನಿಮಿಷಗಳಲ್ಲಿ ಅದೇ ಕಾರಿನಲ್ಲಿ ಮತ್ತೆ ವಾಪಸ್ ಬಂದ ದುಷ್ಕರ್ಮಿಗಳ ಗುಂಪು, ನಿತೀಶ್‌ನನ್ನು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆಯೊಡ್ಡಿ ಮತ್ತೆ ಹಲ್ಲೆ ನಡೆಸಿದೆ. ಇದರಿಂದ ಗಾಯಗೊಂಡ ನಿತೀಶ್ ತಕ್ಷಣವೇ ಸಮೀಪದಲ್ಲಿದ್ದ ಕೊಠಡಿಗೆ ತೆರಳಿ, ತನ್ನ ಸ್ನೇಹಿತರಾದ ರಂಜಿತ್ ಸಾಹು ಸೇರಿದಂತೆ ಇತರರನ್ನು ಸಹಾಯಕ್ಕಾಗಿ ಕರೆದುಕೊಂಡು ಬಂದಿದ್ದನು.
ಸ್ಥಳಕ್ಕೆ ಯುವಕರ ಗುಂಪು ಬರುವುದನ್ನು ಕಂಡ ಆರೋಪಿಗಳು, ಕ್ರೂರವಾಗಿ ಅವರ ಮೇಲೆಯೇ ಕಾರು ಹರಿಸಲು ಯತ್ನಿಸಿದ್ದಾರೆ. ಈ ವೇಳೆ ಕಾರು ರಂಜಿತ್‌ಗೆ ಜೋರಾಗಿ ಡಿಕ್ಕಿ ಹೊಡೆದು, ಆತನ ಕಾಲುಗಳ ಮೇಲೆ ಹರಿದಿದೆ. ಅಷ್ಟೇ ಅಲ್ಲದೆ, ಕಾರಿನಡಿಯಲ್ಲಿ ಸಿಲುಕಿದ್ದ ರಂಜಿತ್‌ನನ್ನು ಸುಮಾರು 100 ಮೀಟರ್‌ಗಳಷ್ಟು ದೂರ ಎಳೆದೊಯ್ದು, ಹೊಸೂರು ಸರ್ವಿಸ್ ರಸ್ತೆಯ ಮಧ್ಯೆ ಬಿಟ್ಟು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಈ ಭೀಕರ ಘಟನೆಯಲ್ಲಿ ರಂಜಿತ್ ಅವರ ಹಲವು ಮೂಳೆಗಳು ಮುರಿದು, ತಲೆಗೆ ತೀವ್ರ ಸ್ವರೂಪದ ಗಾಯಗಳಾಗಿದ್ದವು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ, ಚಿಕಿತ್ಸೆ ಫಲಿಸದೇ ರಂಜಿತ್ ಅಂತಿಮ ಉಸಿರೆಳೆದಿದ್ದಾರೆ. ಘಟನೆಯಲ್ಲಿ ನಿತೀಶ್‌ಗೂ ಸಣ್ಣಪುಟ್ಟ ಗಾಯಗಳಾಗಿವೆ. ಸದ್ಯ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಘಟನಾ ಸ್ಥಳದ ಸಿಸಿಟಿವಿ (CCTV) ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.