ರಾಯಚೂರು: ನಗರದ ಮಾರುತಿ ಬಡಾವಣೆಯ ಸ್ಮಶಾನದಲ್ಲಿ ಹೂತುಹಾಕಲಾಗಿದ್ದ ಶವಗಳನ್ನು ಹೊರತೆಗೆದು, ಅವುಗಳ ಅಸ್ಥಿಪಂಜರದ ಭಾಗಗಳನ್ನು ಕದ್ದೊಯ್ಯುತ್ತಿದ್ದ ಮೂವರು ಆರೋಪಿಗಳನ್ನು ನೇತಾಜಿ ನಗರ ಪೊಲೀಸ್ ಠಾಣೆಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಬಂಧಿತರನ್ನು ರಾಯಚೂರಿನ ಅಶೋಕನಗರದ ರಾಜು, ತಿಮ್ಮಾಪುರಪೇಟೆ ನಿವಾಸಿ ವಿರೇಶ ಹಾಗೂ ನೇತಾಜಿನಗರದ ಅಪ್ಸರ್ ಎಂದು ಗುರುತಿಸಲಾಗಿದೆ. ಸ್ಮಶಾನದಲ್ಲಿ ಶವಗಳ ಭಾಗಗಳನ್ನು ಅಕ್ರಮವಾಗಿ ಕದ್ದೊಯ್ಯುತ್ತಿರುವ ಬಗ್ಗೆ ಸಾರ್ವಜನಿಕರು ನೀಡಿದ ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ಕಾನೂನು ಕ್ರಮ ಜರುಗಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಅರುಣಾಂಗ್ಷು ಗಿರಿ ಅವರು, "ಬಂಧಿತ ಆರೋಪಿಗಳಲ್ಲಿ ವಿರೇಶ ಎಂಬಾತ ಸ್ಮಶಾನದಲ್ಲಿ ಶವಗಳ ಅಂತ್ಯಸಂಸ್ಕಾರ ಮಾಡುವ ಕೆಲಸ ನಿರ್ವಹಿಸುತ್ತಿದ್ದ. ಈತ ಹೂತುಹಾಕಿದ ಶವಗಳಿಂದ ಅಸ್ಥಿಪಂಜರದ ಭಾಗಗಳನ್ನು ಹೊರತೆಗೆದು ಉಳಿದ ಇಬ್ಬರು ಆರೋಪಿಗಳಿಗೆ ನೀಡುತ್ತಿದ್ದ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ" ಎಂದು ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ, ಹೂತಿಟ್ಟ ಮೃತದೇಹಗಳನ್ನು ಹೊರತೆಗೆದು ಖಾಸಗಿ ಮೆಡಿಕಲ್ ಕಾಲೇಜಿಗೆ ಮಾರಾಟ ಮಾಡಲಾಗುತ್ತಿತ್ತು ಮತ್ತು ಬಂಧಿತರಲ್ಲಿ ಇಬ್ಬರು ಖಾಸಗಿ ವೈದ್ಯಕೀಯ ಕಾಲೇಜಿನ ಸಿಬ್ಬಂದಿಯಾಗಿದ್ದಾರೆ ಎಂಬ ಗಂಭೀರ ಆರೋಪಗಳೂ ಕೇಳಿಬಂದಿವೆ. ಈ ಬಗ್ಗೆ ಪ್ರತಿಕ್ರಿಯಿಸಿದ ಎಸ್ಪಿ, "ಆರೋಪಿಗಳು ಅಸ್ಥಿಪಂಜರದ ಭಾಗಗಳನ್ನು ಮಾರಾಟ ಮಾಡುತ್ತಿದ್ದರೆ ಎಂಬ ಬಗ್ಗೆಯೂ ಆಳವಾದ ತನಿಖೆ ನಡೆಸಲಾಗುತ್ತಿದೆ. ವೈದ್ಯಕೀಯ ಕಾಲೇಜು ಲಿಂಕ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋಗಳ ಕುರಿತಾಗಿಯೂ ಸಂಪೂರ್ಣ ತನಿಖೆ ನಡೆಸಿ ಸತ್ಯಾಸತ್ಯತೆಯನ್ನು ಹೊರತರಲಾಗುವುದು" ಎಂದು ತಿಳಿಸಿದ್ದಾರೆ.