ರಾಯಚೂರು : ನಗರದ ಎಲ್.ಬಿ.ಎಸ್. ಬಡಾವಣೆಯಲ್ಲಿ ಸಿಗರೇಟ್ ವಿಚಾರದ ಕ್ಷುಲ್ಲಕ ಕಾರಣಕ್ಕೆ ನಡೆದ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ, ಅಂಗಡಿ ಮಾಲೀಕ ನರಸಿಂಹಯ್ಯ ಶೆಟ್ಟಿ (40) ಅವರನ್ನು ಮಚ್ಚಿನಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ವರದಿಯಾಗಿದೆ. ಮೃತ ನರಸಿಂಹಯ್ಯ ಶೆಟ್ಟಿ ಅವರು ಅದೇ ಬಡಾವಣೆಯಲ್ಲಿ ಸಣ್ಣ ಅಂಗಡಿ ನಡೆಸುತ್ತಿದ್ದರು. ಆರೋಪಿ ತಿಲಕ್ ಸಿಂಗ್ ಎಂಬಾತ ಅಂಗಡಿಗೆ ಬಂದು ಸಿಗರೇಟ್ ಕೇಳಿದ್ದು, "ಮೊದಲು ಸಿಗರೇಟ್ ಕೊಡು, ಆಮೇಲೆ ಹಣ ಕೊಡುತ್ತೇನೆ" ಎಂದಿದ್ದಾನೆ. ಇದಕ್ಕೆ ಮಾಲೀಕ ನಿರಾಕರಿಸಿದಾಗ ಇಬ್ಬರ ನಡುವೆ ಜಗಳ ನಡೆದು, ಆರೋಪಿ ಬೆದರಿಕೆ ಹಾಕಿ ತೆರಳಿದ್ದನು.
ನಿನ್ನೆ ಅಂಗಡಿ ಸಮೀಪ ಕಸ ಗುಡಿಸುತ್ತಿದ್ದ ವೇಳೆ ಏಕಾಏಕಿ ದಾಳಿ ನಡೆಸಿದ ಆರೋಪಿ ತಿಲಕ್ ಸಿಂಗ್, ಮಚ್ಚಿನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿ ನರಸಿಂಹಯ್ಯ ಶೆಟ್ಟಿ ಅವರ ಕೊಲೆಗೈದಿದ್ದಾನೆ. ಘಟನೆಯ ತೀವ್ರತೆಯಿಂದ ಸ್ಥಳದಲ್ಲಿ ಆತಂಕ ಮೂಡಿದ್ದು, ಸದ್ಯ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತಕ್ಷಣ ಕಾರ್ಯಪ್ರವೃತ್ತರಾಗಿ ಆರೋಪಿ ತಿಲಕ್ ಸಿಂಗ್ನನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.