ಬೆಂಗಳೂರು: ರಾಜಾಜಿನಗರದಲ್ಲಿ ಒಂದೇ ಕುಟುಂಬದ ಏಳು ಮಂದಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಪ್ರಕರಣದ ತನಿಖೆ ಮುಂದುವರಿದಂತೆ ಬೆಚ್ಚಿಬೀಳಿಸುವ ಅಂಶಗಳು ಒಂದೊಂದಾಗಿ ಹೊರಬರುತ್ತಿವೆ. ಪತ್ನಿ ಹಾಗೂ ಆಕೆಯ ತವರು ಮನೆಯವರ ಮೇಲಿನ ದ್ವೇಷದಿಂದ ಆರೋಪಿ ಇಂದುಶೇಖರ್ ವ್ಯವಸ್ಥಿತವಾಗಿ ಕೊಲೆ ಸಂಚು ರೂಪಿಸಿದ್ದಾನೆ ಎನ್ನಲಾಗಿದ್ದು, ಈ ಕೃತ್ಯಕ್ಕೆ ತನ್ನ ಅಪ್ರಾಪ್ತ ಮಗಳ ಸಹಾಯ ಪಡೆದಿರುವುದು ಪ್ರಕರಣದ ಮತ್ತಷ್ಟು ಆಘಾತಕಾರಿ ಅಂಶವಾಗಿದೆ.
ಪತ್ನಿ ಸುನಿತಾಳನ್ನು ಮೊದಲು ಹತ್ಯೆ ಮಾಡಿದ ಬಳಿಕ, ಆಕೆಯ ಕುಟುಂಬದ ಸದಸ್ಯರನ್ನು ಬಾಡೂಟದ ನೆಪದಲ್ಲಿ ಒಬ್ಬೊಬ್ಬರಾಗಿ ಮನೆಗೆ ಕರೆಸಿಕೊಳ್ಳಲು ಆರೋಪಿ ತನ್ನ ಮಗಳ ಮೊಬೈಲ್ ಬಳಸಿದ್ದಾನೆ ಎನ್ನಲಾಗಿದೆ. ಮನೆಗೆ ಬಂದವರಿಗೆ ಊಟ ಹಾಗೂ ಮದ್ಯದಲ್ಲಿ ನಿದ್ರೆ ಮಾತ್ರೆ ಬೆರೆಸಿ ನೀಡುತ್ತಿದ್ದ ಆರೋಪಿ, ಅವರು ಪ್ರಜ್ಞೆ ಕಳೆದುಕೊಂಡ ಬಳಿಕ ರುಬ್ಬುವ ಕಲ್ಲಿನಿಂದ ತಲೆಗೆ ಹೊಡೆದು ಕೊಲೆ ಮಾಡುತ್ತಿದ್ದ ಎಂದು ಪೊಲೀಸರು ತನಿಖೆಯಲ್ಲಿ ಪತ್ತೆಹಚ್ಚಿದ್ದಾರೆ.
ಕೊಲೆ ವೇಳೆ ಹೊರಗೆ ಯಾವುದೇ ಶಬ್ದ ಕೇಳಿಸದಂತೆ ಮನೆಯ ಟಿವಿಯ ಧ್ವನಿಯನ್ನು ಜೋರಾಗಿ ಇಡುತ್ತಿದ್ದ ಎನ್ನಲಾಗಿದೆ. ಮೃತದೇಹಗಳನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ಸುತ್ತಿ, ಹಗ್ಗಗಳಿಂದ ಕಟ್ಟಲು ಮುಂಚಿತವಾಗಿಯೇ ವ್ಯವಸ್ಥೆ ಮಾಡಿಕೊಂಡಿದ್ದನು. ಕೊಲೆ ಬಳಿಕ ರಕ್ತದ ಕಲೆಗಳನ್ನು ಮಗಳ ಸಹಾಯದಿಂದ ಸ್ವಚ್ಛಗೊಳಿಸುತ್ತಿದ್ದ ಎನ್ನಲಾಗಿದೆ.
ಮೊದಲಿಗೆ ಪತ್ನಿ, ಬಳಿಕ ಅತ್ತೆ
ಅ.16ರಂದು ಪತ್ನಿ ಸುನಿತಾಳಿಗೆ ಮದ್ಯದಲ್ಲಿ ಮಾತ್ರೆ ಬೆರೆಸಿ ನೀಡಿದ ಬಳಿಕ ಆಕೆ ಪ್ರಜ್ಞೆ ಕಳೆದುಕೊಂಡಾಗ ರುಬ್ಬುವ ಕಲ್ಲಿನಿಂದ ಹೊಡೆದು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕೃತ್ಯವನ್ನು ಕಣ್ಣಾರೆ ಕಂಡ ಮಗಳು ಆರಂಭದಲ್ಲಿ ಆಘಾತಕ್ಕೊಳಗಾಗಿದ್ದರೂ, ಬಳಿಕ ತಂದೆಯ ಒತ್ತಡಕ್ಕೆ ಒಳಗಾಗಿ ಆತನಿಗೆ ಸಹಕರಿಸಿದ್ದಾಳೆ ಎನ್ನಲಾಗಿದೆ.
ನಂತರ ಸುನಿತಾಳ ತಾಯಿ ರೂಪವತಿಯನ್ನು ಮಗಳ ಮೊಬೈಲ್‌ನಿಂದಲೇ ಊಟಕ್ಕೆ ಕರೆಸಿಕೊಳ್ಳಲಾಗಿತ್ತು. ಮನೆಗೆ ಬಂದ ರೂಪವತಿಗೂ ಊಟ ಮತ್ತು ಮದ್ಯ ನೀಡಿದ ಬಳಿಕ ಟಿವಿಯ ಧ್ವನಿಯನ್ನು ಜೋರಾಗಿರಿಸಿ ಹತ್ಯೆ ಮಾಡಲಾಗಿದೆ. ಬಳಿಕ ಇಬ್ಬರ ಮೃತದೇಹಗಳನ್ನು ಕಾರಿನಲ್ಲಿ ಸಾಗಿಸಿ ತಮಿಳುನಾಡಿನ ಘಾಟ್ ಪ್ರದೇಶದಲ್ಲಿ ಎಸೆದು ಬಂದಿದ್ದಾನೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಶಿವಕುಮಾರ್ ಕುಟುಂಬಕ್ಕೂ ಅದೇ ರೀತಿಯ ಸಂಚು
ಅ.24ರಂದು ಶಿವಕುಮಾರ್, ಅವರ ಪತ್ನಿ ದಿವ್ಯಾ ಹಾಗೂ ಪುತ್ರ ಪುನೀತ್‌ರನ್ನು ಊಟಕ್ಕೆಂದು ಮನೆಗೆ ಕರೆಸಿಕೊಂಡಿದ್ದ ಆರೋಪಿ, ಊಟ ಮತ್ತು ಮದ್ಯದಲ್ಲಿ ನಿದ್ರೆ ಮಾತ್ರೆ ಬೆರೆಸಿದ್ದ ಎನ್ನಲಾಗಿದೆ. ಶಿವಕುಮಾರ್ ನಿದ್ರೆಗೆ ಜಾರಿದ ಬಳಿಕ ರುಬ್ಬುವ ಕಲ್ಲಿನಿಂದ ಹೊಡೆದು ಹತ್ಯೆ ಮಾಡಿದ್ದು, ನಂತರ ದಿವ್ಯಾ ಹಾಗೂ ಎಚ್ಚರಗೊಂಡಿದ್ದ ಏಳು ವರ್ಷದ ಬಾಲಕ ಪುನೀತ್‌ನನ್ನೂ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.
ಮೂವರ ಮೃತದೇಹಗಳನ್ನು ಕಾರಿನಲ್ಲಿ ಸಾಗಿಸಿ, ಶಿವಕುಮಾರ್ ಮತ್ತು ದಿವ್ಯಾ ಅವರ ಶವಗಳನ್ನು ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಎಸೆದಿದ್ದಾನೆ ಎನ್ನಲಾಗಿದೆ. ಬಾಲಕ ಪುನೀತ್‌ನ ಮೃತದೇಹವನ್ನು ಬಳಿಕ ನಂದಿಬೆಟ್ಟದ ಬಳಿ ಎಸೆದಿರುವ ಬಗ್ಗೆ ತನಿಖೆಯಲ್ಲಿ ಮಾಹಿತಿ ಲಭ್ಯವಾಗಿದೆ.
ಮತ್ತೊಂದು ದಂಪತಿಯನ್ನೂ ಕೊಂದ ಆರೋಪ
ಅ.31ರಂದು ಶಂಕರ್‌ಗೆ ಕರೆ ಮಾಡಿ, ಕುಟುಂಬದವರು ಪ್ರವಾಸಕ್ಕೆ ಹೋಗಿದ್ದಾರೆ ಎಂದು ಸುಳ್ಳು ಹೇಳಿದ್ದ ಆರೋಪಿ, ನ.1ರಂದು ಶಂಕರ್, ಅವರ ಪತ್ನಿ ನಳಿನಿ ಹಾಗೂ ಪುತ್ರನನ್ನು ಮನೆಗೆ ಕರೆಸಿಕೊಂಡಿದ್ದ ಎನ್ನಲಾಗಿದೆ. ದಂಪತಿಗೆ ಊಟದಲ್ಲಿ ನಿದ್ರೆ ಮಾತ್ರೆ ಬೆರೆಸಿ, ಅವರು ನಿದ್ರೆಗೆ ಜಾರಿದ ಬಳಿಕ ಇಬ್ಬರನ್ನೂ ರುಬ್ಬುವ ಕಲ್ಲಿನಿಂದ ಹೊಡೆದು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದಂಪತಿಯ ಪುತ್ರ ಯತೀನ್ ಮಾತ್ರ ಬದುಕುಳಿದಿದ್ದು, ಆತನನ್ನು ಮುಂದಿನ ದಿನಗಳಲ್ಲಿ ಕೊಲೆ ಮಾಡಲು ಆರೋಪಿ ಯೋಚಿಸಿದ್ದನೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೃತದೇಹಗಳನ್ನು ವಿಲೇವಾರಿ ಮಾಡಲು ಆರೋಪಿ ಮಗಳನ್ನು ತನ್ನೊಂದಿಗೆ ಕರೆದೊಯ್ದಿದ್ದ ಎನ್ನಲಾಗಿದೆ.
ಕೊಲೆ ಬಳಿಕ ಆಭರಣ ದೋಚಿದ್ದ ಆರೋಪ
ಏಳು ಮಂದಿಯ ಹತ್ಯೆಯ ಬಳಿಕ ಅವರ ಮೈಮೇಲಿದ್ದ ಚಿನ್ನಾಭರಣಗಳನ್ನು ಆರೋಪಿ ತೆಗೆದುಕೊಂಡಿದ್ದಾನೆ ಎಂಬ ಮಾಹಿತಿ ಕೂಡ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ರಕ್ತಸಿಕ್ತವಾಗಿದ್ದ ಕೆಲವು ಆಭರಣಗಳನ್ನು ತೊಳೆದು ಜ್ಯೂವೆಲರಿ ಅಂಗಡಿಯಲ್ಲಿ ಮಾರಾಟ ಮಾಡಿದ್ದು, ಕೆಲವು ಒಡವೆಗಳನ್ನು ಗಿರವಿಟ್ಟು ಹಣ ಪಡೆದಿದ್ದಾನೆ ಎನ್ನಲಾಗಿದೆ. ಆ ಹಣವನ್ನು ಕಾರಿಗೆ ಡೀಸೆಲ್ ಹಾಕಲು ಹಾಗೂ ಮೃತದೇಹಗಳನ್ನು ಸಾಗಿಸಲು ಬಳಸಿದ್ದ ಎಂದು ಪೊಲೀಸರು ವಿಚಾರಣೆ ವೇಳೆ ಮಾಹಿತಿ ಪಡೆದಿದ್ದಾರೆ.
ಆರೋಪಿ ಬೆಂಗಳೂರಿನಿಂದ ಮಂಗಳೂರು, ಚೆನ್ನೈ, ನಂದಿಬೆಟ್ಟ ಸೇರಿದಂತೆ ವಿವಿಧೆಡೆ ಸಂಚರಿಸಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಮೃತದೇಹಗಳ ಪತ್ತೆಗಾಗಿ ಪೊಲೀಸರು ಹಲವು ತಂಡಗಳನ್ನು ರಚಿಸಿದ್ದು, ತಮಿಳುನಾಡು, ಮೈಸೂರು ಚಾಮುಂಡಿಬೆಟ್ಟ, ಚಾರ್ಮಾಡಿ ಘಾಟ್ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಶೋಧ ಕಾರ್ಯ ಮುಂದುವರಿಸಿದ್ದಾರೆ.
ಅಸಲಿ ಕಾರಣ ಇನ್ನೂ ನಿಗೂಢ
ಏಳು ಮಂದಿಯ ಹತ್ಯೆಗೆ ನಿಖರ ಕಾರಣವೇನು ಎಂಬುದು ಇನ್ನೂ ಸಂಪೂರ್ಣವಾಗಿ ಸ್ಪಷ್ಟವಾಗಿಲ್ಲ. ಪತ್ನಿಯೊಂದಿಗಿನ ವೈಮನಸ್ಸು, ಆಕೆಯ ಕುಟುಂಬದ ಮೇಲಿನ ದ್ವೇಷ ಹಾಗೂ ಆಸ್ತಿ ವಿಚಾರ ಸೇರಿದಂತೆ ಹಲವು ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪತ್ನಿ ತನ್ನನ್ನು ಕೆಲಸಕ್ಕೆ ಬಾರದವನು ಎಂದು ನಿಂದಿಸುತ್ತಿದ್ದಳು ಮತ್ತು ಆಕೆಯ ತವರು ಮನೆಯವರು ಕೂಡ ಆಕೆಯ ಪರವಾಗಿ ಮಾತನಾಡುತ್ತಿದ್ದರು ಎಂದು ಆರೋಪಿ ವಿಚಾರಣೆ ವೇಳೆ ಹೇಳಿದ್ದಾನೆ ಎನ್ನಲಾಗಿದೆ. ಆದರೆ ಅಪ್ರಾಪ್ತ ಮಗಳು ತಂದೆಯ ಕೊಲೆ ಕೃತ್ಯಗಳಿಗೆ ಸಹಕರಿಸಿರುವುದು ತನಿಖಾಧಿಕಾರಿಗಳಿಗೂ ಹಲವು ಅನುಮಾನಗಳನ್ನು ಹುಟ್ಟಿಸಿದೆ.
ಮಗಳ ಪಾತ್ರದ ಹಿಂದೆ ಯಾವುದೇ ಒತ್ತಡ, ಬೆದರಿಕೆ ಅಥವಾ ಬೇರೆ ಕಾರಣವಿದೆಯೇ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಕುಟುಂಬಸ್ಥರ ಹೇಳಿಕೆಗಳು, ಆರೋಪಿಯ ವಿಚಾರಣೆ ಹಾಗೂ ಲಭ್ಯವಾಗಿರುವ ಇತರ ಸಾಕ್ಷ್ಯಗಳನ್ನು ಆಧರಿಸಿ ಏಳು ಮಂದಿಯ ನರಹತ್ಯೆಯ ನಿಖರ ಕಾರಣವನ್ನು ಪತ್ತೆಹಚ್ಚಲು ತನಿಖೆ ಮುಂದುವರಿದಿದೆ.
ಏಳು ಮಂದಿಯ ಹತ್ಯೆ ಪ್ರಕರಣದ ಆರೋಪಿ ಇಂದುಶೇಖರ್‌ನನ್ನು ನ್ಯಾಯಾಲಯ 12 ದಿನಗಳ ಪೊಲೀಸ್ ವಶಕ್ಕೆ ನೀಡಿದ್ದು, ಈ ಅವಧಿಯಲ್ಲಿ ಮೃತದೇಹಗಳ ಪತ್ತೆ, ಕೊಲೆಗಳಿಗೆ ಬಳಸಿದ ವಸ್ತುಗಳು, ಆಭರಣಗಳ ವಿಲೇವಾರಿ ಹಾಗೂ ಮಗಳ ಪಾತ್ರ ಸೇರಿದಂತೆ ಪ್ರಕರಣದ ಹಲವು ಪ್ರಮುಖ ಅಂಶಗಳ ಕುರಿತು ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ