ಭಾರತೀಯ ಕ್ರಿಕೆಟ್ ತಂಡದ ಯುವ ಆಟಗಾರ ಅಭಿಷೇಕ್ ಶರ್ಮಾ ತಮ್ಮ ಕುಟುಂಬ ಹಾಗೂ ಸ್ನೇಹಿತರೊಂದಿಗೆ ದೀಪಾವಳಿ ಹಬ್ಬವನ್ನು ಅತ್ಯಂತ ಸಡಗರದಿಂದ ಆಚರಿಸಿಕೊಂಡಿದ್ದಾರೆ. ದೀಪಗಳ ಹಬ್ಬದ ಈ ವಿಶೇಷ ಸಂದರ್ಭದಲ್ಲಿ ನಡೆದ ಸಂಭ್ರಮದ ವೀಡಿಯೊವನ್ನು ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಸದ್ಯ ಇದು ಕ್ರೀಡಾಭಿಮಾನಿಗಳ ಗಮನ ಸೆಳೆದಿದೆ.
ಅಲಂಕೃತವಾದ ಸುಂದರ ಹೊರಾಂಗಣ ಪ್ರಾಂಗಣದಲ್ಲಿ ಕುಟುಂಬದವರು ಮತ್ತು ಸ್ನೇಹಿತರೊಂದಿಗೆ ಸೇರಿ ಅಭಿಷೇಕ್ ದೀಪಾವಳಿ ಆಚರಿಸಿದ್ದಾರೆ. ಕಪ್ಪು ಬಣ್ಣದ ಕಸೂತಿ ಕೆತ್ತನೆಯುಳ್ಳ ಆಕರ್ಷಕ ಸಾಂಪ್ರದಾಯಿಕ ಉಡುಗೆಯಲ್ಲಿ ಕಂಗೊಳಿಸಿದ ಅವರು, ಖ್ಯಾತ ಗಾಯಕ ದೆಲೆರ್ ಮೆಹಂದಿ ಅವರ ಸೂಪರ್ ಹಿಟ್ ‘ಬೋಲೋ ತಾ ರಾ ರಾ’ ಹಾಡಿಗೆ ಸಖತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಅಲ್ಲಿದ್ದ ಎಲ್ಲರೂ ಕೈಚಪ್ಪಾಳೆ ತಟ್ಟುತ್ತಾ, ನೃತ್ಯಕ್ಕೆ ತಕ್ಕಂತೆ ಹೆಜ್ಜೆ ಹಾಕಿ ಹಬ್ಬದ ಮಜಾವನ್ನು ಸವಿದಿದ್ದಾರೆ.
ಮನೆಯ ಸುತ್ತಲೂ ಹಾಕಲಾದ ಬಣ್ಣ ಬಣ್ಣದ ವಿದ್ಯುತ್ ದೀಪಗಳ ಅಲಂಕಾರವು ಹಬ್ಬದ ವಾತಾವರಣವನ್ನು ಮತ್ತಷ್ಟು ಕಳೆಗಟ್ಟುವಂತೆ ಮಾಡಿತ್ತು. ಕ್ರಿಕೆಟ್ ಮೈದಾನದಲ್ಲಿ ಎದುರಾಳಿ ಬೌಲರ್‌ಗಳ ಬೆವರಿಳಿಸುವ ಅಭಿಷೇಕ್ ಶರ್ಮಾ, ಈ ವಿಶೇಷ ಸಂದರ್ಭದಲ್ಲಿ ಸಂಪೂರ್ಣ ಉತ್ಸಾಹದಿಂದ ಕುಣಿದಾಡುವ ಮೂಲಕ ತಮ್ಮ ಮತ್ತೊಂದು ಮಗ್ದು ಮುಖವನ್ನು ಅಭಿಮಾನಿಗಳ ಮುಂದೆ ತೆರೆದಿಟ್ಟಿದ್ದಾರೆ. ಸಂಗೀತ, ನೃತ್ಯ ಹಾಗೂ ಕುಟುಂಬದವರ ಒಡನಾಟದೊಂದಿಗೆ ಈ ದೀಪಾವಳಿ ಅವರಿಗೆ ಬಹಳ ವಿಶೇಷವಾಗಿ ಮೂಡಿಬಂದಿದೆ.