ಬೆಂಗಳೂರು: ಸ್ಯಾಂಡಲ್ ವುಡ್ ನ ಖ್ಯಾತ ತಾರಾದಂಪತಿ ಉಪೇಂದ್ರ ಹಾಗೂ ಪ್ರಿಯಾಂಕಾ ಉಪೇಂದ್ರ ಅವರ ಪುತ್ರ ಆಯುಷ್ ಉಪೇಂದ್ರ ಅವರ ಮೊದಲ ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದು, ಅರ್ಧ ಶೂಟಿಂಗ್ ನಡುವೆಉಏ ನಿರ್ದೇಶಕರನ್ನು ಬದಲಿಸಲಾಗಿದೆ.
ನಿರ್ದೇಶಕರನ್ನು ಬದಲಾಯಿಸಿರುವ ವಿಚಾರ ಭಾರಿ ಚರ್ಚೆಗೆ ಕಾರಣವಾಗಿತ್ತು. ಈ ಬಗ್ಗೆ ನಟಿ ಪ್ರಿಯಾಂಕಾ ಉಪೇಂದ್ರ ಇದೀಗ ಮೌನ ಮುರಿದಿದ್ದಾರೆ. ಚಿತ್ರದಿಂದ ನಿರ್ದೇಶಕರಿಗೆ ಗೇಟ್ ಪಾಸ್ ನೀಡಿರುವ ಕುರಿತು ಎದ್ದಿದ್ದ ವಿವಾದಕ್ಕೆ ಸ್ಪಷ್ಟನೆ ನೀಡಿರುವ ಅವರು, ಈ ಕುರಿತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಸುದೀರ್ಘವಾದ ಪತ್ರವನ್ನು ಬರೆದಿದ್ದಾರೆ.
ತಮ್ಮ ಮಗ ಆಯುಷ್ ಉಪೇಂದ್ರ ಅವರ ವೃತ್ತಿಜೀವನದ ಮೊದಲ ಸಿನಿಮಾವನ್ನು ರಕ್ಷಿಸುವುದು ಹಾಗೂ ನಿರ್ಮಾಪಕರ ಹಣಕ್ಕೆ ಮೋಸ ಆಗದಂತೆ ನೋಡಿಕೊಳ್ಳುವುದು ತಮ್ಮ ಮುಖ್ಯ ಉದ್ದೇಶ ಎಂದು ಪ್ರಿಯಾಂಕಾ ತಿಳಿಸಿದ್ದಾರೆ. ಸಿನಿಮಾದ ಗುಣಮಟ್ಟವನ್ನು ಕಾಯ್ದುಕೊಳ್ಳಲು ಮತ್ತು ನಾಯಕನ ಭವಿಷ್ಯದ ಹಿತದೃಷ್ಟಿಯಿಂದ ನಿರ್ದೇಶಕರನ್ನು ಬದಲಾಯಿಸುವ ಈ ಕಠಿಣ ತೀರ್ಮಾನವನ್ನು ಅನಿವಾರ್ಯವಾಗಿ ತೆಗೆದುಕೊಳ್ಳಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಚಿತ್ರೀಕರಣ ಆರಂಭವಾದ ಸಮಯದಿಂದಲೂ ನಿರ್ಮಾಣ ತಂಡಕ್ಕೆ ಅಗತ್ಯವಿರುವ ಹಣಕಾಸು, ಸೃಜನಶೀಲತೆ ಹಾಗೂ ಲಾಜಿಸ್ಟಿಕ್ಸ್‌ಗೆ ಸಂಬಂಧಿಸಿದಂತೆ ಸಂಪೂರ್ಣ ಬೆಂಬಲವನ್ನು ನೀಡಿರುವುದಾಗಿ ಪ್ರಿಯಾಂಕಾ ಹೇಳಿದ್ದಾರೆ. ಆದರೆ ಕೆಲಸದ ವೇಳಾಪಟ್ಟಿ, ಸಮರ್ಪಕ ಸಂವಹನ ಹಾಗೂ ಯೋಜನೆಯ ಕಾರ್ಯಗತಗೊಳಿಸುವಿಕೆಗೆ ಸಂಬಂಧಿಸಿದಂತೆ ಗಂಭೀರ ಮಟ್ಟದ ಸಮಸ್ಯೆಗಳು ಮತ್ತು ಆತಂಕಗಳು ಎದುರಾದವು ಎಂದು ಅವರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಈ ಎಲ್ಲಾ ಗೊಂದಲಗಳು ಮತ್ತು ಆತಂಕಗಳನ್ನು ನಿವಾರಿಸಿ ನ್ಯಾಯಯುತವಾದ ಪರಿಹಾರ ಕಂಡುಕೊಳ್ಳಲು ಪ್ರಿಯಾಂಕಾ ಉಪೇಂದ್ರ ಅವರು ಫಿಲ್ಮ್ ಚೇಂಬರ್ ಹಸ್ತಕ್ಷೇಪವನ್ನು ಕೋರಿದ್ದಾರೆ. ಚೇಂಬರ್ ಮಧ್ಯಸ್ಥಿಕೆ ವಹಿಸಿ ಈ ಸಮಸ್ಯೆಗೆ ಸೂಕ್ತ ಪರಿಹಾರ ಒದಗಿಸಿಕೊಡಬೇಕೆಂದು ವಿನಂತಿಸಿರುವ ಅವರು, ಚಿತ್ರದ ಯಶಸ್ವಿ ಪೂರ್ಣಗೊಳಿಸುವಿಕೆಗೆ ನಾವು ಬದ್ಧರಾಗಿದ್ದೇವೆ ಎಂದು ಭರವಸೆ ನೀಡಿದ್ದಾರೆ.
ಚಿತ್ರರಂಗದಲ್ಲಿ ಭಾರಿ ಕುತೂಹಲ ಮೂಡಿಸಿದ್ದ ಆಯುಷ್ ಉಪೇಂದ್ರ ಅವರ ಮೊದಲ ಸಿನಿಮಾದ ನಿರ್ದೇಶಕರ ಬದಲಾವಣೆ ವಿಚಾರವು ಪ್ರಿಯಾಂಕಾ ಅವರ ಈ ಪತ್ರದ ಮೂಲಕ ಹೊಸ ತಿರುವು ಪಡೆದುಕೊಂಡಿದೆ. ಫಿಲ್ಮ್ ಚೇಂಬರ್ ಈ ವಿವಾದವನ್ನು ಹೇಗೆ ಬಗೆಹರಿಸಲಿದೆ ಮತ್ತು ಮುಂದಿನ ದಿನಗಳಲ್ಲಿ ಈ ಚಿತ್ರವನ್ನು ಯಾರು ನಿರ್ದೇಶಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
ಉಪೇಂದ್ರ ಮತ್ತು ಪ್ರಿಯಾಂಕಾ ದಂಪತಿ ಪುತ್ರ ಆಯುಷ್ ಸಿನಿಮಾ ನಾಯಕನಾಗುತ್ತಿದ್ದು, ಅವರ ಮೊದಲ ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿತ್ತು. ಪುರುಷೋತ್ತಮ್ ಎಂಬುವರು ಕತೆ, ಚಿತ್ರಕತೆ ಬರೆದು ಸಿನಿಮಾ ನಿರ್ದೇಶನ ಮಾಡುತ್ತಿದ್ದರು. ಅವರೇ ನಿರ್ಮಾಪಕರನ್ನೂ ಹುಡುಕಿದ್ದರು. ಸಿನಿಮಾದ ಚಿತ್ರೀಕರಣವೂ 50% ಆಗಿದೆ. ಅರ್ಧದಷ್ಟು ಸಿನಿಮಾ ಚಿತ್ರೀಕರಣ ಮುಗಿದಿರುವಾಗ ಈಗ ಪ್ರಿಯಾಂಕಾ ಉಪೇಂದ್ರ ಏಕಾಏಕಿ ನಿರ್ದೇಶಕರನ್ನು ತೆಗೆದು ಹಾಕಿದ್ದಾರೆ ಎಂದು ನಿರ್ದೇಶಕ ಪುರುಷೋತ್ತಮ್ ಬೇಸರ ವ್ಯಕ್ತಪಡಿಸಿದ್ದರು. ನಿರ್ದೇಶಕರ ಜೊತೆಗೆ ಹಿರಿಯ ಕ್ಯಾಮೆರಾಮ್ಯಾನ್ ವೇಣು ಅವರನ್ನೂ ಹೊರ ಹಾಕಿದ್ದರು. ಇದೀಗ ಪ್ರಿಯಾಂಕಾ ಉಪೇಂದ್ರ ಈ ಬಗ್ಗೆ ವಾಣಿಜ್ಯ ಮಂಡಳಿಗೆ ಸುದೀರ್ಘ ಪತ್ರದ ಮೂಲಕ ಸ್ಪಷ್ಟನೆ ನೀಡಿದ್ದಾರೆ.