ನವದೆಹಲಿ: ದೀಪಾವಳಿಯ ಸಂದರ್ಭದಲ್ಲಿ ಎಐಸಿಸಿ(AICC) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನೀಡಿದ “ಖುಷಿಯೋಂ ಕಾ ಈದ್” (ಸಂತೋಷದ ಹಬ್ಬ) ಎಂಬ ಹೇಳಿಕೆಯನ್ನು ಬಿಜೆಪಿ ಟೀಕಿಸಿದೆ. ಇದಕ್ಕೆ ಸೋಮವಾರ ತಿರುಗೇಟು ನೀಡಿರುವ ಕಾಂಗ್ರೆಸ್, ಈ ಹೇಳಿಕೆಯನ್ನು ದೊಡ್ಡ ವಿಷಯವನ್ನಾಗಿ ಮಾಡುತ್ತಿರುವವರು “ಶಬ್ದಾರ್ಥದ ಅರಿವಿಲ್ಲದವರು” ಎಂದು ಟೀಕಿಸಿದೆ. ಏಕೆಂದರೆ ‘ಈದ್’ ಎಂಬ ಪದಕ್ಕೆ ಅಕ್ಷರಶಃ ‘ಹಬ್ಬ’ ಎಂದರ್ಥ.
ವಾರಾಂತ್ಯದಲ್ಲಿ ದೀಪಾವಳಿ ಹಬ್ಬದ ಶುಭಾಶಯ ಕೋರುವಾಗ, ದೀಪಾವಳಿಯನ್ನು “ಖುಷಿಯೋಂ ಕಾ ಈದ್” ಎಂದು ಕರೆದಿದ್ದಕ್ಕಾಗಿ ಬಿಜೆಪಿ ಖರ್ಗೆ ಅವರನ್ನು ತೀವ್ರವಾಗಿ ಟೀಕಿಸಿತು. ಅಲ್ಲದೆ, ಖರ್ಗೆ ಮತ್ತು ಹಿರಿಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ‘ಈದ್’ ಅನ್ನು “ಸಂತೋಷದ ದೀಪಾವಳಿ” (Diwali of joy) ಎಂದು ಕರೆಯುವ ಧೈರ್ಯ ತೋರಲಿ ಎಂದು ಸವಾಲು ಹಾಕಿತು. ಜೊತೆಗೆ, ಕಾಂಗ್ರೆಸ್ ಪಕ್ಷವನ್ನು ‘ಸನಾತನ ವಿರೋಧಿ’ ಪಕ್ಷ ಎಂದೂ ಬಿಜೆಪಿ ಜರಿದಿದೆ.
ಬಿಜೆಪಿಯ ರಾಷ್ಟ್ರೀಯ ಮಾಧ್ಯಮ ಸಹ-ಉಸ್ತುವಾರಿ ಮತ್ತು ವಕ್ತಾರ ಪ್ರದೀಪ್ ಭಂಡಾರಿ ಮಾತನಾಡಿ, ದೀಪಾವಳಿಯ ಸಂದರ್ಭದಲ್ಲೂ ಕಾಂಗ್ರೆಸ್ ‘ವೋಟ್ ಬ್ಯಾಂಕ್’ ರಾಜಕೀಯವನ್ನು ಆರಿಸಿಕೊಂಡಿದೆ ಮತ್ತು ಪಕ್ಷದ ಅಧ್ಯಕ್ಷರು ದೀಪಾವಳಿಯನ್ನು “ಸಂತೋಷದ ಈದ್” ಎಂದು ಬಣ್ಣಿಸಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿಗೆ ತಿರುಗೇಟು ನೀಡಿದ ಕಾಂಗ್ರೆಸ್‌ನ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ, “ಖರ್ಗೆ ಅವರ ಹೇಳಿಕೆಯನ್ನು ದೊಡ್ಡ ವಿಷಯವನ್ನಾಗಿ ಮಾಡುತ್ತಿರುವವರಿಗೆ ಶಬ್ದಾರ್ಥದ ಅರಿವಿಲ್ಲ” ಎಂದು ಹೇಳಿದರು.
‘ಎಕ್ಸ್’ (X) ವೇದಿಕೆಯಲ್ಲಿ ಪ್ರತಿಕ್ರಿಯಿಸಿದ ಖೇರಾ, “‘ಈದ್’ ಎಂಬ ಪದಕ್ಕೆ ಅಕ್ಷರಶಃ ‘ಹಬ್ಬ’ ಎಂದರ್ಥ. ಈಗ ಹೋಗಿ ಅವರ ಹೇಳಿಕೆಯನ್ನು ಮತ್ತೊಮ್ಮೆ ಕೇಳಿ. ಇದರಲ್ಲಿ ತಪ್ಪೇನಿದೆ? ಇದು ಸಂಪೂರ್ಣವಾಗಿ ಸಹಜವಾದ ಮಾತು. ಆದರೆ, ಹಬ್ಬದ ಸಂದರ್ಭದಲ್ಲಿಯೂ ಸಕಾರಾತ್ಮಕವಾಗಿರಲು ಸಾಧ್ಯವಾಗದ ‘ಸಂಘಿ’ಗಳ ನಕಾರಾತ್ಮಕ ಮನಸ್ಥಿತಿ ಇದಕ್ಕಿಂತ ಭಿನ್ನವಾಗಿದೆ” ಎಂದು ಹೇಳಿದ್ದಾರೆ.
“ದೀಪಾವಳಿಯ ಸ್ಫೂರ್ತಿಯಲ್ಲಿ, ದೇವರಿಗಾಗಿ ಆದರೂ ನಿಮ್ಮ ಮೆದುಳಿನಲ್ಲಿ ಒಂದೆರಡು ಬಲ್ಬ್ ಗಳನ್ನು ಬೆಳಗಿಸಿಕೊಳ್ಳಿ(ಸ್ವಲ್ಪ ಜ್ಞಾನ ಬೆಳೆಸಿಕೊಳ್ಳಿ). ನಿಮ್ಮ ಮೂರ್ಖತನವನ್ನು ಸಾರ್ವಜನಿಕವಾಗಿ ಪ್ರದರ್ಶಿಸುವುದನ್ನು ನಿಲ್ಲಿಸಿ. ಇವರೆಲ್ಲಾ ಅಶಿಕ್ಷಿತರು(ಜಾಹಿಲ್),” ಎಂದು ಖೇರಾ ಕಿಡಿಕಾರಿದ್ದಾರೆ.
ಬಿಜೆಪಿಯ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ‘ಎಕ್ಸ್’ನಲ್ಲಿ ಪೋಸ್ಟ್ ಒಂದನ್ನು ಹಾಕಿದ್ದು, ” ಖರ್ಗೆ ಅವರೇ, ಹಿಂದೂಗಳ ಅತಿದೊಡ್ಡ ಹಬ್ಬವಾದ ದೀಪಾವಳಿಯನ್ನು ಅದರ ಸ್ವಂತ ಹೆಸರಿನಿಂದಲೇ ಕರೆಯುವುದರಲ್ಲಿ ನಿಮಗೇನು ಸಮಸ್ಯೆ?” ಎಂದು ಪ್ರಶ್ನಿಸಿದ್ದಾರೆ.
‘ಈದ್’ ತನ್ನದೇ ಆದ ಮಹತ್ವವನ್ನು ಹೊಂದಿದೆ ಮತ್ತು ದೀಪಾವಳಿ ತನ್ನದೇ ಆದ ಪಾವಿತ್ರ್ಯತೆ, ಸಂಪ್ರದಾಯಗಳು ಹಾಗೂ ಅಸ್ತಿತ್ವವನ್ನು ಹೊಂದಿದೆ ಎಂದು ಭಾಟಿಯಾ ಹೇಳಿದ್ದಾರೆ. “ಕಾಂಗ್ರೆಸ್‌ನ ‘ಜಾತ್ಯತೀತತೆ’ಯಲ್ಲಿ ಹಿಂದೂ ಹಬ್ಬಗಳ ಸ್ವರೂಪವನ್ನೇ ಬದಲಾಯಿಸುವುದು ರಾಜಕೀಯ ಶಿಷ್ಟಾಚಾರದ ಭಾಗವಾಗಿಬಿಟ್ಟಿದೆಯೇ? ರಾಹುಲ್ ಗಾಂಧಿ ಮತ್ತು ಖರ್ಗೆ ಅವರೇ, ಇದಕ್ಕೆ ಉತ್ತರಿಸಿ: ಈದ್ ಹಬ್ಬವನ್ನು ‘ಸಂತೋಷದ ದೀಪಾವಳಿ’ ಎಂದು ಕರೆಯುವ ಧೈರ್ಯ ನಿಮಗಿದೆಯೇ?” ಎಂದು ಅವರು ಪ್ರಶ್ನಿಸಿದ್ದಾರೆ.
“ಹಿಂದೂಗಳ ನಂಬಿಕೆಯನ್ನು ಗೌರವಿಸಿ; ಅವರ ಹಬ್ಬಗಳ ಸ್ವರೂಪವನ್ನು ಬದಲಾಯಿಸಬೇಡಿ. ದೀಪಾವಳಿ ದೀಪಾವಳಿಯಾಗಿಯೇ ಇತ್ತು, ದೀಪಾವಳಿಯಾಗಿಯೇ ಇದೆ ಮತ್ತು ಮುಂದೆಯೂ ದೀಪಾವಳಿಯಾಗಿಯೇ ಉಳಿಯುತ್ತದೆ,” ಎಂದು ಭಾಟಿಯಾ ಹೇಳಿದ್ದಾರೆ.
ಬಿಜೆಪಿಯ ಮತ್ತೊಬ್ಬ ವಕ್ತಾರ ತುಹಿನ್ ಸಿನ್ಹಾ ಮಾತನಾಡಿ, ಮುಸ್ಲಿಮರು ಈದ್ ಹಬ್ಬವನ್ನು ವರ್ಷಕ್ಕೆ ಕೇವಲ ಎರಡು ಬಾರಿ ಆಚರಿಸುತ್ತಾರೆ, ಆದರೆ ಕಾಂಗ್ರೆಸ್ ಪಕ್ಷವು ಪ್ರತಿಯೊಂದು ಹಿಂದೂ ಹಬ್ಬವನ್ನೂ ‘ಖುಷಿಯೋನ್ ಕಿ ಈದ್’ (ಸಂತೋಷದ ಈದ್) ಆಗಿ ಆಚರಿಸಲು ಬಯಸುತ್ತಿದೆ ಎಂದು ಹೇಳಿದ್ದಾರೆ.