ಬಾಲಿವುಡ್ ನಟಿ ತಾರಾ ಸುತಾರಿಯಾ ಮತ್ತು ವೀರ್ ಪಹಾರಿಯಾ ನಡುವಿನ ಪ್ರೇಮ ಸಂಬಂಧ ಮುರಿದುಬಿದ್ದಿದೆ ಎಂಬ ವದಂತಿಗಳ ನಡುವೆಯೇ ಈಗ ಹೊಸ ಬೆಳವಣಿಗೆಯೊಂದು ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ. ತಾರಾ ಸುತಾರಿಯಾ ಅವರ ಹುಟ್ಟುಹಬ್ಬದ ಸಂಭ್ರಮಾಚರಣೆಯ ವಿಡಿಯೋಗೆ ವೀರ್ ಪಹಾರಿಯಾ ಹಾರ್ಟ್ ಮತ್ತು ಕೇಕ್ ಇಮೋಜಿಗಳೊಂದಿಗೆ ಕಾಮೆಂಟ್ ಮಾಡಿದ್ದು, ಇಬ್ಬರೂ ಮತ್ತೆ ಒಂದಾಗುತ್ತಿದ್ದಾರೆಯೇ ಎಂಬ ಚರ್ಚೆ ಶುರುವಾಗಿದೆ.
2025ರ ಜುಲೈನಲ್ಲಿ ತಮ್ಮ ಪ್ರೀತಿಯನ್ನು ಅಧಿಕೃತಗೊಳಿಸಿದ್ದ ಈ ಜೋಡಿ, ಕಳೆದ ಡಿಸೆಂಬರ್‌ನಲ್ಲಿ ಮುಂಬೈನಲ್ಲಿ ನಡೆದ ಪಂಜಾಬಿ ಗಾಯಕ ಎಪಿ ಧಿಲ್ಲೋನ್ ಅವರ ಸಂಗೀತ ಕಾರ್ಯಕ್ರಮದ ವಿವಾದದ ನಂತರ ದೂರವಾಗಿದ್ದರು ಎನ್ನಲಾಗಿತ್ತು. ಬ್ರೇಕಪ್ ಬಗ್ಗೆ ಇಬ್ಬರೂ ಬಹಿರಂಗವಾಗಿ ಏನನ್ನೂ ಹೇಳದಿದ್ದರೂ, ಸಾರ್ವಜನಿಕವಾಗಿ ಒಟ್ಟಿಗೆ ಕಾಣಿಸಿಕೊಳ್ಳುವುದನ್ನು ನಿಲ್ಲಿಸಿದ್ದರು. ಆದರೆ ಇತ್ತೀಚೆಗೆ ಸೋಶಿಯಲ್ ಮೀಡಿಯಾ ಸ್ಟಾರ್ ಓರಿ ಅವರು ತಾರಾ ಮನೆಯಲ್ಲಿ ನಡೆದ ಸರಳ ಹುಟ್ಟುಹಬ್ಬದ ಆಚರಣೆಯ ವಿಡಿಯೋವನ್ನು ಹಂಚಿಕೊಂಡಿದ್ದು, ಅದರ ಕೆಳಗೆ ವೀರ್ ಪಹಾರಿಯಾ ಕಾಮೆಂಟ್ ಮಾಡಿರುವುದು ಎಲ್ಲರ ಗಮನ ಸೆಳೆದಿದೆ.
ವೀರ್ ಅವರ ಈ ಪ್ರತಿಕ್ರಿಯೆ ನೋಡಿದ ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದು, ನೀವಿಬ್ಬರೂ ಮತ್ತೆ ಒಂದಾಗಿ ಮತ್ತು ಎಲ್ಲವನ್ನೂ ಸರಿಪಡಿಸಿಕೊಳ್ಳಿ ಎಂದು ಕಾಮೆಂಟ್‌ಗಳ ಮೂಲಕ ಮನವಿ ಮಾಡುತ್ತಿದ್ದಾರೆ. ಇನ್ನೊಂದೆಡೆ, ಈ ವರ್ಷದ ಆರಂಭದಲ್ಲಿ ಕಾಫಿ ವಿತ್ ಕರಣ್ ಶೋನಲ್ಲಿ ವೀರ್ ಅವರ ಸಹೋದರ ಶಿಖರ್ ಪಹಾರಿಯಾ ಅವರ ಗೆಳತಿ ಜಾಹ್ನವಿ ಕಪೂರ್ ನೀಡಿದ್ದ ಹೇಳಿಕೆಯನ್ನು ಅಭಿಮಾನಿಗಳು ಈಗ ಮತ್ತೆ ನೆನಪಿಸಿಕೊಳ್ಳುತ್ತಿದ್ದಾರೆ. ವೀರ್ ಅವರಿಗೆ ಯಾವ ಡೇಟಿಂಗ್ ಸಲಹೆ ನೀಡುತ್ತೀರಿ ಎಂಬ ಪ್ರಶ್ನೆಗೆ ಜಾಹ್ನವಿ, ಆಕೆಯನ್ನು ಎಂದಿಗೂ ಸಂಗೀತ ಕಾರ್ಯಕ್ರಮಕ್ಕೆ ಕರೆದುಕೊಂಡು ಹೋಗಬೇಡ ಎಂದು ಪರೋಕ್ಷವಾಗಿ ಕಾಲೆಳೆದಿದ್ದರು. ಸದ್ಯ ತಾರಾ ಮತ್ತು ವೀರ್ ಈ ವದಂತಿಗಳ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.