ಬೆಂಗಳೂರು: ರಾಜ್ಯದ ಹಲವೆಡೆ ಮುಂಗಾರು ಪೂರ್ವ ಮಳೆಯ ಅಬ್ಬರ ಜೋರಾಅಗಿದ್ದು, ಈಗಾಗಲೇ ಸಾಲು ಸಾಲು ಅವಾಂತರಗಳನ್ನು ಸೃಷ್ಟಿಸಿದೆ. ಈ ನಡುವೆ ಮೇ 30ರವರೆಗೂ ರಾಜ್ಯದಲ್ಲಿ ಗುಡುಗು, ಬಿರುಗಾಳಿ ಸಹಿತ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜ್ಯದ ವಿವಿಧೆಡೆ ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಾಗಲಿದೆ.ಈ ಹಿನ್ನೆಲೆಯಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮೇ 27ರಂದು ಯೆಲ್ಲೋ ಹಾಗೂ ಆರೇಂಜ್ ಅಲರ್ಟ್ ಘೋಷಿಸಲಾಗಿದೆ.
ಇಂದಿನಿಂದ ಮೇ 28ರವರೆಗೆ ಉತ್ತರ ಒಳನಾಡಿನಲ್ಲಿ ಕೆಲವೆಡೆ ಗಂಟೆಗೆ 50 ರಿಂದ 60 ಕಿಲೋಮೀಟರ್ ವೇಗದಲ್ಲಿ ಬಿರುಗಾಳಿ ಹಾಗೂ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನಲ್ಲಿ ಒಂದೆರಡು ಕಡೆಗಳಲ್ಲಿ ಗಂಟೆಗೆ 40 ರಿಂದ 50 ಕಿಲೋಮೀಟರ್ ವೇಗದಲ್ಲಿ ಬಿರುಗಾಳಿ ಹಾಗೂ ಗುಡುಗು ಸಹಿತ ಮಳೆಯಾಗುವ ಸಂಭವವಿದೆ.
ಇನ್ನು ಮೇ 26 ರಿಂದ 30, 2026 ರವರೆಗೆ ಕರಾವಳಿ ಕರ್ನಾಟಕದಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಇಂದು ಸಂಜೆ ಭಾಗಶಃ ಮೋಡ ಕವಿದ ವಾತಾವರಣವಿರುತ್ತದೆ. ಕೆಲವು ಪ್ರದೇಶಗಳಲ್ಲಿ ಗಾಳಿಯೊಂದಿಗೆ ಹಗುರದಿಂದ ಮಧ್ಯಮ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಇಂದು ಹಾಗೂ ಮೇ 27ರಂದು ಭಾರೀ ಮಳೆ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಯೆಲ್ಲೊ ಅಲರ್ಟ್ ಘೋಷಿಸಿದೆ.
ಇನ್ನುಉತ್ತರ ಒಳನಾಡು ಜಿಲ್ಲೆಗಳಲ್ಲಿ ಮೇ 27 ರಂದು, ಕೆಲವೆಡೆ ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ ಮಳೆಯಾಗಲಿದೆ. ಗಂಟೆಗೆ 50-60 ಕಿಮೀ ವೇಗದಲ್ಲಿ ಗಾಳಿ ಬೀಸಲಿದ್ದು, ಆಲಿಕಲ್ಲು ಮಳೆಯಾಗುವ ಸಾಧ್ಯತೆಯಿದೆ. ಹೀಗಾಗಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.