ಮುಂಬೈ: ದೇಶದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಪತ್ತೆಯಾಗುತ್ತಿರುವ ನಕಲಿ ನೋಟುಗಳ ಪ್ರಮಾಣ ಭಾರಿ ಹೆಚ್ಚಳವಾಗಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್.ಬಿ.ಐ.) ಮಾಹಿತಿ ನೀಡಿದೆ.
ನಕಲಿ ನೋಟುಗಳ ಪ್ರಮಾಣ 2025 -26ನೇ ಆರ್ಥಿಕ ವರ್ಷದಲ್ಲಿ ಶೇಕಡ 5.2 ರಷ್ಟು ಹೆಚ್ಚಾಗಿದೆ ಎಂದು ಆರ್.ಬಿ.ಐ. ಶುಕ್ರವಾರ ಬಿಡುಗಡೆ ಮಾಡಿದ ವಾರ್ಷಿಕ ವರದಿಯಲ್ಲಿ ತಿಳಿಸಿದೆ.
ಬ್ಯಾಂಕಿಂಗ್ ವಲಯದಲ್ಲಿ ಪತ್ತೆಯಾದ ಒಟ್ಟು ನಕಲಿ ನೋಟುಗಳ ಸಂಖ್ಯೆ ಹಿಂದಿನ ವರ್ಷದ 2,17,396 ರಿಂದ 2,29,746 ಕ್ಕೆ ಏರಿಕೆಯಾಗಿದೆ. 500 ರೂಪಾಯಿ ಮುಖಬೆಲೆಯ ನೋಟುಗಳು ಅತಿ ಹೆಚ್ಚು ಪ್ರಮಾಣದ ನಕಲಿ ನೋಟುಗಳು ಪತ್ತೆಯಾಗಿವೆ. ಇವುಗಳ ಪ್ರಮಾಣ ಶೇಕಡ 20.5ರಷ್ಟು ಹೆಚ್ಚಾಗಿದ್ದು 1,41,907 ನೋಟು ಪತ್ತೆಯಾಗಿದೆ. 20 ರೂಪಾಯಿ ಮುಖಬೆಲೆಯ ನಕಲಿ ನೋಟುಗಳ ಪತ್ತೆ ಪ್ರಮಾಣ ಶೇಕಡ 47.4 ರಷ್ಟು ಭಾರಿ ಏರಿಕೆ ಕಂಡಿದೆ. ಒಟ್ಟಾರೆ ಪತ್ತೆಯಾದ ನಕಲಿ ನೋಟುಗಳ ಪೈಕಿ ಶೇಕಡ 97.6 ರಷ್ಟನ್ನು ವಾಣಿಜ್ಯ ಬ್ಯಾಂಕುಗಳು ಪತ್ತೆ ಹಚ್ಚಿವೆ. 2.4 ರಷ್ಟು ನಕಲಿ ನೋಟುಗಳನ್ನು ಆರ್.ಬಿ.ಐ. ಪತ್ತೆ ಮಾಡಿದೆ.