ಬೆಂಗಳೂರು: ರಾಜ್ಯ ಶಾಲಾ ಶಿಕ್ಷಣ ಇಲಾಖೆಯು ಎಸ್‌ಎಸ್‌ಎಲ್‌ಸಿ (SSLC) ಹಾಗೂ ದ್ವಿತೀಯ ಪಿಯುಸಿ (2nd PUC) ಪರೀಕ್ಷಾ ವಿಧಾನದಲ್ಲಿ ಮಹತ್ವದ ಬದಲಾವಣೆ ತಂದಿದೆ. ಕಳೆದ ಎರಡು ವರ್ಷಗಳಿಂದ ಜಾರಿಯಲ್ಲಿದ್ದ ಮೂರು ಪರೀಕ್ಷೆಗಳ ವ್ಯವಸ್ಥೆಗೆ ಕಡಿವಾಣ ಹಾಕಲಾಗಿದ್ದು, ಈ ಶೈಕ್ಷಣಿಕ ಸಾಲಿನಿಂದ ಕೇವಲ ಎರಡು ಮುಖ್ಯ ಪರೀಕ್ಷೆಗಳನ್ನು ಮಾತ್ರ ನಡೆಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಕಳೆದ ಸಾಲಿನಲ್ಲಿ ದಾಖಲೆಯ ಮಟ್ಟದಲ್ಲಿ ಫಲಿತಾಂಶ ದಾಖಲಾದ ಬೆನ್ನಲ್ಲೇ ಈ ನಿರ್ಧಾರ ಕೈಗೊಳ್ಳಲಾಗಿದೆ. ಮೂರು ಪರೀಕ್ಷೆಗಳನ್ನು ಆಯೋಜಿಸುವುದರಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶಗಳು ಸಿಗುತ್ತಿದ್ದವಾದರೂ, ವರ್ಷದ ಬಹುತೇಕ ಅವಧಿ ಪರೀಕ್ಷೆಗಳಿಗೇ ಮೀಸಲಾಗುತ್ತಿತ್ತು. ಮಾರ್ಚ್‌ನಿಂದ ಆರಂಭವಾಗಿ ಸೆಪ್ಟೆಂಬರ್‌ವರೆಗೂ ಪರೀಕ್ಷಾ ಪ್ರಕ್ರಿಯೆಗಳೇ ನಡೆಯುತ್ತಿದ್ದ ಕಾರಣ ಶೈಕ್ಷಣಿಕ ವೇಳಾಪಟ್ಟಿ ಏರುಪೇರಾಗುವುದರೊಂದಿಗೆ ಉನ್ನತ ಶಿಕ್ಷಣದ ಪ್ರವೇಶ ಪ್ರಕ್ರಿಯೆಗಳಿಗೂ ತೀವ್ರ ತೊಡಕಾಗುತ್ತಿತ್ತು. ಈ ಎಲ್ಲಾ ಸಾಧಕ-ಬಾಧಕಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ಶಿಕ್ಷಣ ಇಲಾಖೆ, ಪರೀಕ್ಷೆಗಳ ಸಂಖ್ಯೆಯನ್ನು ಎರಡಕ್ಕೆ ಇಳಿಸಿದೆ.
ಪರೀಕ್ಷಾ ನೋಂದಣಿಗೆ ನವೆಂಬರ್ 11 ಕಡೆ ದಿನ: ಸ್ಯಾಟ್ಸ್ ಆಧಾರಿತ ವಿವರ ಕಡ್ಡಾಯ
ಪುನರಾವರ್ತಿತ (Repeaters) ಹಾಗೂ ಖಾಸಗಿ ಅಭ್ಯರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿಕೊಳ್ಳಲು ಅಗತ್ಯವಿರುವ ಅಧಿಕೃತ ಮಾರ್ಗಸೂಚಿ ಮತ್ತು ಕೈಪಿಡಿಯನ್ನು ಇಲಾಖೆ ಬಿಡುಗಡೆ ಮಾಡಿದೆ. ಎಲ್ಲಾ ಶಾಲಾ-ಕಾಲೇಜುಗಳ ಮುಖ್ಯ ಶಿಕ್ಷಕರು ಹಾಗೂ ಪ್ರಾಂಶುಪಾಲರು ತಮ್ಮ ಅಧಿಕೃತ ಶಾಲಾ ಲಾಗಿನ್ ಮೂಲಕ ನವೆಂಬರ್ 11ರ ಒಳಗೆ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಗಡುವು ವಿಧಿಸಲಾಗಿದೆ.
ವಿದ್ಯಾರ್ಥಿಗಳ ಸಂಪೂರ್ಣ ವಿವರಗಳನ್ನು 'ಸ್ಯಾಟ್ಸ್' (SATS) ತಂತ್ರಾಂಶದಿಂದಲೇ ನೇರವಾಗಿ ಪಡೆಯಲಾಗುತ್ತಿದೆ. ಹೀಗಾಗಿ ವಿದ್ಯಾರ್ಥಿಯ ಹೆಸರು, ಪೋಷಕರ ಹೆಸರು, ಹುಟ್ಟಿದ ದಿನಾಂಕ, ಜಾತಿ ಪ್ರವರ್ಗ, ಧರ್ಮ, ಲಿಂಗ ಮತ್ತು ಪರೀಕ್ಷಾ ಮಾಧ್ಯಮದಂತಹ ಸೂಕ್ಷ್ಮ ಮಾಹಿತಿಗಳನ್ನು ಶಾಲಾ ಲಾಗಿನ್‌ನಲ್ಲಿ ನೇರವಾಗಿ ಬದಲಾಯಿಸಲು ಅವಕಾಶವಿರುವುದಿಲ್ಲ. ಯಾವುದೇ ಮಾಹಿತಿಯಲ್ಲಿ ವ್ಯತ್ಯಾಸಗಳಿದ್ದರೆ, ಮೊದಲು ಸ್ಯಾಟ್ಸ್ ತಂತ್ರಾಂಶದಲ್ಲಿಯೇ ಅಗತ್ಯ ತಿದ್ದುಪಡಿಗಳನ್ನು ಮಾಡಿಸಿಕೊಂಡು ನಂತರವೇ ನೋಂದಣಿ ಅಂತಿಮಗೊಳಿಸುವಂತೆ ಕಟ್ಟುನಿಟ್ಟಿನ ಸೂಚನೆ ರವಾನಿಸಲಾಗಿದೆ.
ದ್ವಿತೀಯ ಪಿಯುಸಿ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು (KSEAB) 2026-27ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಗಳ ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟಿಸಿದೆ:
-
ಪರೀಕ್ಷೆ-1: 2027ರ ಫೆಬ್ರವರಿ 27 ರಿಂದ ಮಾರ್ಚ್ 17 ರವರೆಗೆ ಜರುಗಲಿದೆ.
-
ಪರೀಕ್ಷೆ-2: 2027ರ ಮೇ 3 ರಿಂದ ಮೇ 15 ರವರೆಗೆ ನಡೆಯಲಿದೆ.
ವಿದ್ಯಾರ್ಥಿಗಳಿಗೆ ಈ ಬಾರಿ ಕೇವಲ ಎರಡು ಪರೀಕ್ಷೆಗಳ ಅವಕಾಶ ಮಾತ್ರ ಇರುವುದರಿಂದ, ಆರಂಭದಿಂದಲೇ ಹೆಚ್ಚಿನ ಗಮನಹರಿಸಿ ಓದಿನ ಕಡೆ ಗಮನ ನೀಡುವಂತೆ ಹಾಗೂ ಹೊಸ ವ್ಯವಸ್ಥೆಗೆ ತಕ್ಕಂತೆ ಮಕ್ಕಳನ್ನು ಸಜ್ಜುಗೊಳಿಸುವಂತೆ ಶಿಕ್ಷಕರಿಗೆ ಇಲಾಖೆ ಸೂಚಿಸಿದೆ.