ಕೆನಡಾ: ಒಂದು ಕಾಲದಲ್ಲಿ ವಿದ್ಯಾರ್ಥಿಯಾಗಿ ಕೆನಡಾಕ್ಕೆ ತೆರಳಿದ್ದ ವ್ಯಕ್ತಿ, ಇಂದು ಮೂರು ದೇಶಗಳ ತನಿಖಾ ಸಂಸ್ಥೆಗಳ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾನೆ. ಭಾರತದ ಮೋಸ್ಟ್ ವಾಂಟೆಡ್ ಗ್ಯಾಂಗ್‌ಸ್ಟರ್‌ಗಳಲ್ಲಿ ಒಬ್ಬನಾದ ಸತಿಂದರ್‌ಜೀತ್ ಸಿಂಗ್ ಅಲಿಯಾಸ್ ಗೋಲ್ಡಿ ಬ್ರಾರ್, ಇದೀಗ ಕೆನಡಾದ 25 ಮೋಸ್ಟ್ ವಾಂಟೆಡ್ ಅಪರಾಧಿಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದು, ಆತನ ಪತ್ತೆಗೆ ಬರೋಬ್ಬರಿ ₹1.63 ಕೋಟಿ ಬಹುಮಾನ ಘೋಷಿಸಲಾಗಿದೆ.
ಕೆನಡಾದ BOLO (Be On the Look Out) ಕಾರ್ಯಕ್ರಮದಡಿ ಗೋಲ್ಡಿ ಬ್ರಾರ್ ಬಗ್ಗೆ ಮಾಹಿತಿ ನೀಡುವವರಿಗೆ 2.50 ಲಕ್ಷ ಕೆನಡಿಯನ್ ಡಾಲರ್ ಬಹುಮಾನ ನೀಡುವುದಾಗಿ ಅಧಿಕಾರಿಗಳು ಪ್ರಕಟಿಸಿದ್ದಾರೆ. ಈಗಾಗಲೇ ಭಾರತ, ಅಮೆರಿಕ ಸೇರಿದಂತೆ ವಿವಿಧ ದೇಶಗಳಲ್ಲಿ ಆತನ ವಿರುದ್ಧ ಬಹುಮಾನ ಘೋಷಣೆಯಾಗಿದ್ದು, ಒಟ್ಟು ಬಹುಮಾನದ ಮೊತ್ತ ₹11 ಕೋಟಿಗೂ ಅಧಿಕವಾಗಿದೆ ಎನ್ನಲಾಗಿದೆ.
ವಿನ್ನಿಪೆಗ್ ಹತ್ಯೆ ಪ್ರಕರಣದಲ್ಲಿ ಗೋಲ್ಡಿ ಬ್ರಾರ್ ಹೆಸರು
2023ರಲ್ಲಿ ಕೆನಡಾದ ವಿನ್ನಿಪೆಗ್‌ನ ಹ್ಯಾಝೆಲ್ಟನ್ ಡ್ರೈವ್ ಪ್ರದೇಶದಲ್ಲಿ 39 ವರ್ಷದ ಸುಖದೂಲ್ ಸಿಂಗ್ ಗಿಲ್ ಗುಂಡಿನ ದಾಳಿಯಲ್ಲಿ ಹತ್ಯೆಯಾಗಿದ್ದರು. ಈ ಪ್ರಕರಣದಲ್ಲಿ ಗೋಲ್ಡಿ ಬ್ರಾರ್ ಪಾತ್ರದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
2024ರಲ್ಲಿ ಗೋಲ್ಡಿ ಬ್ರಾರ್ ಮತ್ತು ಕರಣ್‌ಬೀರ್ ಸಿಂಗ್ ವಿರುದ್ಧ ಸಂಚು ಹಾಗೂ ಪ್ರಥಮ ದರ್ಜೆ ಕೊಲೆ ಆರೋಪಗಳಿಗೆ ಸಂಬಂಧಿಸಿದಂತೆ ಬಂಧನ ವಾರಂಟ್ ಹೊರಡಿಸಲಾಗಿತ್ತು. ಈ ಪ್ರಕರಣದಲ್ಲಿ ಆರೋಪಿಗಳ ಪತ್ತೆಗೆ ಕೆನಡಾ ಪೊಲೀಸರು ಮುಂದುವರಿದ ತನಿಖೆ ನಡೆಸುತ್ತಿದ್ದಾರೆ.
ಕೆನಡಾದ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿ ಇನ್ನಿಬ್ಬರು ಭಾರತೀಯ ಮೂಲದವರು
ಗೋಲ್ಡಿ ಬ್ರಾರ್ ಜೊತೆಗೆ ಭಾರತೀಯ ಮೂಲದ ಇನ್ನಿಬ್ಬರು ಆರೋಪಿಗಳೂ ಕೆನಡಾದ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.
-
ಮನ್‌ಪ್ರೀತ್ ಸಿಂಗ್ (28): 2025ರಲ್ಲಿ ಬ್ರಾಂಪ್ಟನ್‌ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟ ಪ್ರಕರಣದಲ್ಲಿ ಪ್ರಥಮ ದರ್ಜೆ ಕೊಲೆ ಹಾಗೂ ಕೊಲೆ ಯತ್ನ ಆರೋಪ ಎದುರಿಸುತ್ತಿದ್ದಾನೆ. ಈತ ದೇಶ ತೊರೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
-
ಪೆಡ್ರಮ್ ರಾಬಿ: 2020ರಲ್ಲಿ ಬ್ರಾಂಪ್ಟನ್‌ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಮೂವರು ಗಾಯಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಯತ್ನ ಹಾಗೂ ಅಕ್ರಮ ಶಸ್ತ್ರಾಸ್ತ್ರ ಹೊಂದಿರುವ ಆರೋಪಗಳಡಿ ಹುಡುಕಾಟ ನಡೆಯುತ್ತಿದೆ.
ಈ ಇಬ್ಬರನ್ನೂ ಪೊಲೀಸರು ಶಸ್ತ್ರಸಜ್ಜಿತ ಹಾಗೂ ಅಪಾಯಕಾರಿ ವ್ಯಕ್ತಿಗಳೆಂದು ಗುರುತಿಸಿದ್ದು, ಸಾರ್ವಜನಿಕರು ಅವರ ಬಳಿ ಹೋಗದಂತೆ ಎಚ್ಚರಿಕೆ ನೀಡಿದ್ದಾರೆ.
ವಿದ್ಯಾರ್ಥಿಯಾಗಿ ಕೆನಡಾಕ್ಕೆ ತೆರಳಿ ಅಪರಾಧ ಜಗತ್ತಿನಲ್ಲಿ ಗುರುತಿಸಿಕೊಂಡ ಆರೋಪ
ಗೋಲ್ಡಿ ಬ್ರಾರ್‌ನ ಕಥೆ ಚಂಡೀಗಢದಿಂದ ಆರಂಭವಾಗುತ್ತದೆ. ವಿದ್ಯಾರ್ಥಿಯಾಗಿದ್ದಾಗಲೇ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಸಂಪರ್ಕಕ್ಕೆ ಬಂದಿದ್ದ ಎನ್ನಲಾಗಿದೆ. ಮಗ ಅಪರಾಧ ಜಗತ್ತಿನತ್ತ ಸಾಗುತ್ತಿರುವುದನ್ನು ಗಮನಿಸಿದ ಪೋಷಕರು, 2017ರಲ್ಲಿ ಆತನನ್ನು ಸ್ಟಡಿ ವೀಸಾದಡಿ ಕೆನಡಾಕ್ಕೆ ಕಳುಹಿಸಿದ್ದರು ಎನ್ನಲಾಗಿದೆ.
ಕೆನಡಾಕ್ಕೆ ತೆರಳಿದ ಬಳಿಕ ಟ್ರಕ್ ಚಾಲನೆ, ಡೆಲಿವರಿ ಸೇರಿದಂತೆ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಿದ್ದರೂ, ಪಂಜಾಬ್‌ನ ಅಪರಾಧ ಗುಂಪುಗಳೊಂದಿಗೆ ಸಂಪರ್ಕ ಮುಂದುವರಿಸಿದ್ದ ಎನ್ನಲಾಗಿದೆ. ಬಳಿಕ ಕೆನಡಾದಲ್ಲೇ ಸುಲಿಗೆ ಮತ್ತು ಗುತ್ತಿಗೆ ಹತ್ಯೆ ಜಾಲವನ್ನು ರೂಪಿಸಿಕೊಂಡಿದ್ದಾನೆ ಎಂಬ ಆರೋಪ ಆತನ ಮೇಲಿದೆ.
ಮೂರು ದೇಶಗಳ ತನಿಖಾ ಸಂಸ್ಥೆಗಳಿಂದ ಹುಡುಕಾಟ
ಗೋಲ್ಡಿ ಬ್ರಾರ್ ವಿರುದ್ಧ ಭಾರತ, ಅಮೆರಿಕ ಹಾಗೂ ಕೆನಡಾದ ತನಿಖಾ ಸಂಸ್ಥೆಗಳು ಹಲವು ಗಂಭೀರ ಪ್ರಕರಣಗಳ ಕುರಿತು ತನಿಖೆ ನಡೆಸುತ್ತಿವೆ. ಕೊಲೆ, ಸುಲಿಗೆ, ಹವಾಲಾ, ಕ್ರಿಪ್ಟೋಕರೆನ್ಸಿ ಮೂಲಕ ಹಣ ವರ್ಗಾವಣೆ, ಶಸ್ತ್ರಾಸ್ತ್ರ ಮತ್ತು ಮಾದಕ ವಸ್ತುಗಳ ಸಾಗಣೆ ಸಂಚು ಸೇರಿದಂತೆ ವಿವಿಧ ಆರೋಪಗಳು ಆತನ ವಿರುದ್ಧ ಕೇಳಿಬಂದಿವೆ.
-
ಕೆನಡಾ: ಮಾಹಿತಿ ನೀಡಿದವರಿಗೆ 2.50 ಲಕ್ಷ ಕೆನಡಿಯನ್ ಡಾಲರ್ (ಸುಮಾರು ₹1.63 ಕೋಟಿ) ಬಹುಮಾನ.
-
ಅಮೆರಿಕ (FBI): 10 ಲಕ್ಷ ಡಾಲರ್ (ಸುಮಾರು ₹8.3 ಕೋಟಿ) ಬಹುಮಾನ ಘೋಷಣೆ.
-
ಭಾರತ (NIA): ಗೋಲ್ಡಿ ಬ್ರಾರ್ ಸುಳಿವು ನೀಡಿದವರಿಗೆ ₹10 ಲಕ್ಷ ಬಹುಮಾನ.
ಮೂರು ದೇಶಗಳ ಬಹುಮಾನ ಮೊತ್ತ ₹11 ಕೋಟಿಗೂ ಅಧಿಕವಾಗಿರುವುದರಿಂದ, ಗೋಲ್ಡಿ ಬ್ರಾರ್ ಪತ್ತೆಗೆ ಅಂತರರಾಷ್ಟ್ರೀಯ ತನಿಖಾ ಸಂಸ್ಥೆಗಳ ಕಾರ್ಯಾಚರಣೆ ಮತ್ತಷ್ಟು ಚುರುಕುಗೊಂಡಿದೆ.