ಶಿವಮೊಗ್ಗ: ಜಿಲ್ಲೆ ಸಾಗರ ತಾಲೂಕಿನ ಕಲ್ಮನೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೊಸೂರು ಗ್ರಾಮದ ಕುಂಟಗೋಡು ಜನವಸತಿ ಪ್ರದೇಶದಲ್ಲಿ 'ಜಲ ಜೀವನ್ ಮಿಷನ್' ಕಾಮಗಾರಿ 2023ರಲ್ಲೇ ಪೂರ್ಣಗೊಂಡು, ಹಸ್ತಾಂತರ ಮಾಡಲಾಗಿದೆ. ಆದರೆ ಮೋಟಾರ್ ಆನ್ ಮಾಡಿ ಕುಡಿಯುವ ನೀರು ಸರಬರಾಜು ಮಾಡಬೇಕಿದ್ದ ಕಲ್ಮನೆ ಗ್ರಾಮಾಡಳಿತ ಆ ಕೆಲಸವನ್ನೇ ಮಾಡಿಲ್ಲ. ಹೀಗಾಗಿ ನಲ್ಲಿ ಇದೆ, ನೀರು ಬಾರದೇ ಜನರು ಕುಡಿಯೋ ನೀರಿಗಾಗಿ ಪರದಾಡುತ್ತಿದ್ದಾರೆ.
ಮನೆ ಮನೆಗೂ ಶುದ್ಧ ಕುಡಿಯುವ ನೀರು ಪೂರೈಸಬೇಕಿದ್ದ ಯೋಜನೆಯು ಕೇವಲ ಕಾಗದಪತ್ರಗಳಿಗಷ್ಟೇ ಸೀಮಿತವಾಗಿದ್ದು, ಸ್ಥಳೀಯ ಆಡಳಿತದ ನಿರ್ಲಕ್ಷ್ಯದ ವಿರುದ್ಧ ಗ್ರಾಮಸ್ಥರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಜನರಿಗೆ ಹನಿ ನೀರೂ ಸಿಗದೆ ಅಧಿಕಾರಿಗಳ ಬೇಜವಾಬ್ದಾರಿಗೆ ಹಿಡಿಶಾಪ ಹಾಕುವಂತ ಸ್ಥಿತಿ ಸಾಗರದ ಕಲ್ಮನೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕೇಳಿ ಬಂದಿದೆ.
ದಾಖಲೆಯಲ್ಲಿ ಕಾಮಗಾರಿ ಪೂರ್ಣ, ಬೋರ್ ಆನ್ ಮಾಡಿಲ್ಲ, ನೀರು ಬಿಟ್ಟಿಲ್ಲ
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದ ವತಿಯಿಂದ ಕುಂಟಗೋಡು ಭಾಗದಲ್ಲಿ ತಲಾ 55 ಲೀಟರ್ ನೀರು ಒದಗಿಸುವ ನಿಟ್ಟಿನಲ್ಲಿ ರೆಟ್ರೋಫಿಟ್ಟಿಂಗ್ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಒಟ್ಟು 1826 ಮೀಟರ್ ಉದ್ದದ ಪೈಪ್‌ಲೈನ್ ಅಳವಡಿಸಿ, 26 ಮನೆಗಳಿಗೆ ಕಾರ್ಯಾತ್ಮಕ ನಳ ಸಂಪರ್ಕ ಕಲ್ಪಿಸಲಾಗಿದೆ ಎಂದು 2023ರಲ್ಲೇ ಕಾಮಗಾರಿಯನ್ನು ಪಂಚಾಯಿತಿ ಆಡಳಿತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆಯೂ ನಡೆದಿದೆ. ಆದರೆ, ನಳ ಸಂಪರ್ಕಗಳನ್ನು ಅಳವಡಿಸಿ ಮೂರು ವರ್ಷಗಳೇ ಕಳೆದರೂ ಇಲಾಖೆ ಹಾಗೂ ಪಂಚಾಯಿತಿ ಸಿಬ್ಬಂದಿ ಈವರೆಗೆ ಪಂಪ್ ಮೋಟಾರ್ ಚಾಲೂ ಮಾಡಿಲ್ಲ. ಪರಿಣಾಮವಾಗಿ ಮನೆಗಳ ಮುಂದೆ ಅಳವಡಿಸಿರುವ ನಲ್ಲಿಗಳು ಬಾಯ್ದೆರೆದು ನಿಂತಿದ್ದು, ಗ್ರಾಮಸ್ಥರಿಗೆ ಒಂದು ಹನಿ ನೀರೂ ಪೂರೈಕೆಯಾಗುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಅಧಿಕಾರಿಗಳ ಬೇಜವಾಬ್ದಾರಿಗೆ ಗ್ರಾಮಸ್ಥರ ಆಕ್ರೋಶ
ಕಾಮಗಾರಿ ಪೂರ್ಣಗೊಂಡು ಅಧಿಕೃತವಾಗಿ ಹಸ್ತಾಂತರ ಪ್ರಮಾಣಪತ್ರಕ್ಕೆ ಸಹಿ ಬಿದ್ದಿದ್ದರೂ, ಮೋಟಾರ್ ಆನ್ ಮಾಡಿ ನೀರು ಪೂರೈಸಲು ಅಧಿಕಾರಿಗಳು ಮೀನಮೇಷ ಎಣಿಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಸರಕಾರ ಕೋಟ್ಯಂತರ ರೂಪಾಯಿ ಅನುದಾನ ವ್ಯಯಿಸಿ ಯೋಜನೆ ರೂಪಿಸಿದರೂ, ಸ್ಥಳೀಯ ಆಡಳಿತದ ನಿರ್ಲಕ್ಷ್ಯ ಧೋರಣೆಯಿಂದಾಗಿ ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ಮುಂದುವರಿದಿದೆ. ಹಸ್ತಾಂತರ ಕೇವಲ ಅಧಿಕಾರಿಗಳ ಕಡತದ ಲೆಕ್ಕಾಚಾರಕ್ಕೆ ಮಾತ್ರವೇ ಎಂದು ಪ್ರಶ್ನಿಸಿರುವ ಕುಂಟಗೋಡು ನಿವಾಸಿಗಳು, ತಕ್ಷಣವೇ ಮೋಟಾರ್ ಚಾಲನೆಗೊಳಿಸಿ ಮನೆ ಮನೆಗೆ ನಿರಂತರ ಕುಡಿಯುವ ನೀರು ಪೂರೈಸದಿದ್ದರೆ ಪಂಚಾಯತಿ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
JJM ಕಾಮಗಾರಿಗೂ ಮೊದಲೇ ಸಿದ್ದಗೊಂಡಿತ್ತು ಬೋರ್
ಅಂದಹಾಗೆ ಕಲ್ಮನೆ ಗ್ರಾಮ ಪಂಚಾಯತಿ ಪಿಡಿಒ ಇಂದಿರಾಜ್ಯೋತಿ ಆಗಿದ್ದಂತ ಸಂದರ್ಭದಲ್ಲೇ ಕುಂಟಗೋಡಿನ ಬ್ರಾಹ್ಮಣರ ಕೇರಿಗೆ ಕುಡಿಯುವ ನೀರು ಒದಗಿಸುವ ಸಲುವಾಗಿ ಬೋರ್ ಕೊರೆಸಲಾಗಿದೆಒದಗಿಸುವ ಜೆಜೆಎಂ ಕಾಮಗಾರಿ ಮಾಡಲಾಗಿದೆ ಎಂಬುದು ಸ್ಥಳಿಯರ ಮಾಹಿತಿ.
ಜೆಜೆಎಂ ಕಾಮಗಾರಿ ಪೂರ್ವದಲ್ಲೇ ಬೋರ್ ಕೊರೆಸಿ, ಮೋಟಾರ್ ಹಾಕಿ, ಸ್ಟಾರ್ಟರ್ ಕೂರಿಸಿ, ವಿದ್ಯುತ್ ಸಂಪರ್ಕ ಕಲ್ಪಿಸಿ ಸಿದ್ಧಗೊಳಿಸಲಾಗಿದೆ. ಜೆಜೆಎಂ ಕಾಮಗಾರಿ ಪೂರ್ಣಗೊಂಡ ನಂತರ ನಾಮಕಾವಸ್ಥೆಗೆ ಒಮ್ಮೆ ಮಾತ್ರ ಪರೀಕ್ಷಾರ್ಥ ಬಿಟ್ಟ ನೀರು ಈವರೆಗೆ ಬಿಟ್ಟಿಲ್ಲ ಎಂಬುದು ಸ್ಥಳೀಯರ ಆರೋಪ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು..
