ಬೆಂಗಳೂರು: ಸಿಲಿಕಾನ್ ಸಿಟಿ ಕ್ರಿಕೆಟ್ ಪ್ರೇಮಿಗಳು ಹಾಗೂ ಸಾರ್ವಜನಿಕರಿಗೆ ಇಂದು ಅತ್ಯಂತ ಐತಿಹಾಸಿಕ ದಿನ ಬೆಂಗಳೂರಿನ ಹೊರವಲಯದ ಆನೇಕಲ್ ತಾಲೂಕಿನ ಸೂರ್ಯನಗರದಲ್ಲಿ (ಸೂರ್ಯಗ್ರಾಮ) ನಿರ್ಮಾಣವಾಗಲಿರುವ ಜಾಗತಿಕ ಮಟ್ಟದ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಹಾಗೂ ಹಲವು ವಸತಿ ಯೋಜನೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ಮೇ 23) ಅಧಿಕೃತವಾಗಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ.
ಗುಜರಾತ್‌ನಲ್ಲಿರುವ ಕ್ರೀಡಾಂಗಣದ ಬಳಿಕ ಇದು ಇಡೀ ಭಾರತದಲ್ಲೇ 2ನೇ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಎಂಬ ಮಹಾ ಹೆಗ್ಗಳಿಕೆಗೆ ಪಾತ್ರವಾಗಲಿದೆ. ವಸತಿ ಇಲಾಖೆ ಮತ್ತು ಕರ್ನಾಟಕ ಗೃಹ ಮಂಡಳಿ (KHB) ಜಂಟಿಯಾಗಿ ಹಮ್ಮಿಕೊಂಡಿರುವ ಈ ಮೆಗಾ ಯೋಜನೆಯ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ:
ಬೃಹತ್ ಆಸನ ಸಾಮರ್ಥ್ಯ: ಈ ನೂತನ ಕ್ರೀಡಾಂಗಣವು ಬರೋಬ್ಬರಿ 80,000 ಆಸನ ಸಾಮರ್ಥ್ಯವನ್ನು ಹೊಂದಿರಲಿದೆ. ಸದ್ಯ ಬೆಂಗಳೂರು ಹೃದಯಭಾಗದಲ್ಲಿರುವ ಎಂ. ಚಿನ್ನಸ್ವಾಮಿ ಸ್ಟೇಡಿಯಂ (32,000 ಸಾಮರ್ಥ್ಯ) ಗಿಂತ ಇದು ದುಪ್ಪಟ್ಟು ದೊಡ್ಡದಾಗಿರಲಿದೆ
ಸರ್ಕಾರದ ನಯಾಪೈಸೆ ಹಣವಿಲ್ಲ: ಈ ಬೃಹತ್ ಸ್ಟೇಡಿಯಂ ಯೋಜನೆಗೆ ಸರ್ಕಾರದ ಯಾವುದೇ ಆರ್ಥಿಕ ನೆರವಿಲ್ಲದೆ, ಸಂಪೂರ್ಣವಾಗಿ ಕರ್ನಾಟಕ ಗೃಹ ಮಂಡಳಿಯ (KHB) ಸ್ವಂತ ನಿಧಿಯಿಂದಲೇ ಹಣ ಭರಿಸಲಾಗುತ್ತಿದೆ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ.ಈ ಯೋಜನೆಗೆ ಅಂದಾಜು 943 ರಿಂದ 950 ಕೋಟಿ ರೂಪಾಯಿ ವೆಚ್ಚವಾಗಲಿದ್ದು, ಸಂಪೂರ್ಣವಾಗಿ ಕರ್ನಾಟಕ ಗೃಹ ಮಂಡಳಿಯ (KHB) ನಿಧಿಯಿಂದಲೇ ಇದನ್ನು ಭರಿಸಲಾಗುತ್ತಿದೆ
ಸಮಗ್ರ ಅಭಿವೃದ್ಧಿ & ಉದ್ಯೋಗ: ಇಲ್ಲಿಯವರೆಗೆ ಕೇವಲ ಮನೆ ಕಟ್ಟುತ್ತಿದ್ದ ವಸತಿ ಇಲಾಖೆ ಈಗ ಇಂಟರ್ನ್ಯಾಷನಲ್ ಸ್ಟೇಡಿಯಂ ನಿರ್ಮಾಣಕ್ಕೆ ಮುಂದಾಗಿರುವುದು ಪ್ರಗತಿಯ ದೂರದೃಷ್ಟಿ. ಇದರಿಂದ ಈ ಭಾಗದಲ್ಲಿ ಕ್ರೀಡೆ, ಪ್ರವಾಸೋದ್ಯಮ, ಉದ್ಯೋಗ ಸೃಷ್ಟಿ ಹಾಗೂ ಆರ್ಥಿಕ ಬೆಳವಣಿಗೆ ಹೆಚ್ಚಾಗಲಿದೆ ಎಂದು ಸಿಎಂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
KHBಗೆ 20 ಸಾವಿರ ಕೋಟಿ ಆದಾಯ: ಖಾಲಿ ಇರುವ KHB ನಿವೇಶನಗಳ ಮಾರಾಟದಿಂದ ಮಂಡಳಿಗೆ ಸುಮಾರು 20,000 ಕೋಟಿ ರೂ. ಆದಾಯ ಬರುವ ಅಂದಾಜಿದೆ. ಬಡ ಹಾಗೂ ಮಧ್ಯಮ ವರ್ಗದವರ ನೆತ್ತಿ ಮೇಲೆ ಸೂರು ಇರಬೇಕು ಎಂಬ ಆಸೆಗೆ ಪೂರಕವಾಗಿ ಕೈಗೆಟುಕುವ ದರದಲ್ಲಿ ನಿವೇಶನ ಒದಗಿಸಲಾಗುತ್ತಿದೆ.
ಜಿಗಣಿ ರಸ್ತೆ ಕ್ರಾಂತಿ: ಈ ಭಾಗದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಜಿಗಣಿ ಹೋಬಳಿಯ ಪ್ರಮುಖ ಸಂಪರ್ಕ ರಸ್ತೆ ನಿರ್ಮಾಣಕ್ಕೂ ಆಡಳಿತಾತ್ಮಕ ಅನುಮೋದನೆ ನೀಡಲಾಗಿದ್ದು, ಕಾಮಗಾರಿ ಶೀಘ್ರದಲ್ಲೇ ಆರಂಭವಾಗಲಿದೆ.
ಒಂದೇ ವೇದಿಕೆಯಲ್ಲಿ ಸಿಎಂ ಚಾಲನೆ ನೀಡಿದ ಇತರೆ ಮೆಗಾ ಪ್ರಾಜೆಕ್ಟ್‌ಗಳು:
ಮುಖ್ಯಮಂತ್ರಿಗಳ ನಮ್ಮ ಮನೆ ಯೋಜನೆಗೆ ಅಧಿಕೃತ ಚಾಲನೆ.
ಅತ್ಯಾಧುನಿಕ ಸೂರ್ಯಶೈನ್ ಮತ್ತು ಸೂರ್ಯ ಡಿವೈನ್ ವಸತಿ ಸಮುಚ್ಚಯ ಕಾಮಗಾರಿಗಳ ಶಂಕುಸ್ಥಾಪನೆ.
ವಸತಿ ಯೋಜನೆಗೆ ಜಮೀನು ನೀಡಿದ ಭೂ ಮಾಲೀಕರಿಗೆ ಸಾಂಕೇತಿಕವಾಗಿ ನಿವೇಶನ ಹಂಚಿಕೆ.
ರಾಜ್ಯದಲ್ಲಿ ಈ ಬಾರಿ ವಸತಿ ಇಲಾಖೆಯಿಂದ ಒಟ್ಟು 3 ಲಕ್ಷಕ್ಕೂ ಹೆಚ್ಚು ಮನೆ ಮತ್ತು ನಿವೇಶನಗಳ ವಿತರಣೆ.
ಗಣ್ಯರ ಮಹಾ ದಂಡು: ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್, ಗೃಹ ಸಚಿವ ಜಿ.ಪರಮೇಶ್ವರ್, ವಸತಿ ಸಚಿವ ಜಮೀರ್ ಅಹಮದ್ ಖಾನ್, ಕೆಹೆಚ್ ಬಿ ಅಧ್ಯಕ್ಷರಾದ ಶಾಸಕ ಶಿವಲಿಂಗೇಗೌಡ, ಆನೇಕಲ್ ಶಾಸಕ ಶಿವಣ್ಣ, ಮಾಜಿ ಸಂಸದ ಡಿ.ಕೆ.ಸುರೇಶ್ ಸೇರಿದಂತೆ ಹಲವು ಪ್ರಮುಖ ನಾಯಕರು ಭಾಗವಹಿಸಿದ್ದರು.